More

    ಮತದಾನ ಪ್ರಮಾಣ ಹೆಚ್ಚಳಕ್ಕೆ ಹಲವು ಯೋಜನೆ; ಶೇ.6ರಷ್ಟು ಹೆಚ್ಚುವರಿ ಓಟಿಂಗ್ ಗುರಿ; ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಅಕ್ಷಯ ಶ್ರೀಧರ ಹೇಳಿಕೆ

    ಹಾವೇರಿ: ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಅನೇಕ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿದ್ದು, ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ಮತದಾನ ಪ್ರಮಾಣಕ್ಕಿಂತ ಕನಿಷ್ಟ ಶೇ.6ರಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಗುರಿ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ತಿಳಿಸಿದರು.
    ಇಲ್ಲಿನ ದೇವಗಿರಿಯ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಪ್ರಮಾಣ ಶೇ.70.42ರಷ್ಟು ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಸರಾಸರಿ ಮತದಾನ ಪ್ರಮಾಣ ಶೇ.71.63ರಷ್ಟಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಮತದಾನ ಶೇ.81.51ರಷ್ಟಿತ್ತು. ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಿಂತ ಕನಿಷ್ಠ ಶೇ.6ರಷ್ಟು ಹೆಚ್ಚು ಪ್ರಮಾಣದಲ್ಲಿ ಮತದಾನದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
    ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರ ಹಾಗೂ ನಗರ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಮತಗಟ್ಟೆವಾರು ಕಡಿಮೆ ಮತದಾನವಾದ ಪ್ರದೇಶಗಳನ್ನು ಗುರುತಿಸಲಾಗಿದೆ. ಗಂಗೆಬಾವಿ, ಕೋಡಿಯಾಲ, ಹನುಮನಮಟ್ಟಿ, ಶಿಗ್ಗಾಂವಿ ವಿಧಾನಸಭಾ ಕೇತ್ರ ಹಾಗೂ ಹಾನಗಲ್ಲ, ಹಿರೇಕೆರೂರಿನ ಕೆಲ ಮತಗಟ್ಟೆಗಳಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಇಂತಹ 80ಕ್ಕೂ ಹೆಚ್ಚು ಬೂತ್‌ಗಳನ್ನು ಗುರುತಿಸಿ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಈ ಭಾಗದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
    171 ಕ್ಯಾಂಪಸ್ ಅಂಬಾಸಿಡರ್ ನೇಮಕ
    ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ 955 ಸ್ಥಳಗಳಲ್ಲಿ 1,482 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಮತದಾನ ಜಾಗೃತಿಗಾಗಿ ಗ್ರಾಮ ಮಟ್ಟ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಮಿತಿಗಳ ಜತೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಕಲಚೇತನರ ಸುಗಮ ಚುನಾವಣಾ ಕಾರ್ಯದ ನಿಮತ್ತ ಪಂಚಾಯಿತಿ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ.
    ಶಾಲಾ-ಕಾಲೇಜುಗಳಲ್ಲಿ 171 ಕ್ಯಾಂಪಸ್ ಅಂಬಾಸೀಡರ್‌ಗಳನ್ನು ನೇಮಿಸಿ ಅವರಿಂದ ಜಾಗೃತಿ ಮೂಡಿಸಲಾಗುತ್ತಿದೆ. ನಾ ಭಾರತ್ ಎಂಬ ಚುನಾವಣೆ ಗೀತೆ ರಚಿಸಿ ಜಾಗೃತಿಗೆ ಬಳಸಿಕೊಳ್ಳಲಾಗಿದೆ. 618 ಮತದಾರರ ಸಾಕ್ಷರತಾ ಸಂಘ, ಪ್ರತಿ ಮತಗಟ್ಟೆಗೆ ಒಂದರಂತೆ 1,482 ಚುನಾವಣಾ ಜಾಗೃತಿ ಸಂಘ, ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳಲ್ಲಿ 730ಕ್ಕೂ ಹೆಚ್ಚು ಮತದಾರರ ಜಾಗೃತಿ ಫೋರಂಗಳನ್ನು ಸ್ಥಾಪಿಸಿ ವ್ಯವಸ್ಥಿತವಾಗಿ ಚುನಾವಣೆ ವ್ಯವಸ್ಥೆ ಹಾಗೂ ಮತದಾನದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರೆಲಾಗಿದೆ ಎಂದು ಅಕ್ಷಯ ಶ್ರೀಧರ ಮಾಹಿತಿ ನೀಡಿದರು.
    ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿ.ಪಂ.ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ ಉಪಸ್ಥಿತರಿದ್ದರು.
    ಮೂವರು ರಾಯಭಾರಿಗಳ ನೇಮಕ
    2024ರ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಐದರಂತೆ 30 ಸಖಿ ಮತಗಟ್ಟೆ, ತಲಾ ಒಂದರಂತೆ ಆರು ವಿಕಲಚೇತನರ ಮತಗಟ್ಟೆ, ಆರು ತೀಮ್ ಬೇಸ್ಡ್ ಮತಗಟ್ಟೆ, ಆರು ಯಂಗ್ ವೋಟರ್ ಮತಗಟ್ಟೆ ಒಳಗೊಂಡಂತೆ 48 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಖ್ಯಾತ ಹಿನ್ನಲೆ ಗಾಯಕ ಕಾಸೀಂ ಅಲಿ, ರಾಜ್ಯ ಪ್ರಶಸ್ತಿ ವಿಜೇತ ಕಲಾವಿದ ಮಾಲತೇಶ ಎಂ.ಗರಡಿಮನಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಕ್ಷತಾ ಸಿ ಅವರನ್ನು ಜಿಲ್ಲಾ ಮಟ್ಟದ ಸ್ವೀಪ್ ರಾಯಭಾರಿಗಳನ್ನಾಗಿ ನೇಮಕ ಮಾಡಿಕೊಂಡು ಜಾಗೃತಿ ಮೂಡಿಸಲು ಕ್ರಮವಹಿಸಲಾಗಿದೆ ಎಂದು ಜಿಪಂ ಸಿಇಒ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts