More

  ಕ್ಷಯರೋಗ ಪತ್ತೆ, ಚಿಕಿತ್ಸಾ ಆಂದೋಲನ 17ರಿಂದ

  ಹಾವೇರಿ: ಜಿಲ್ಲೆಯಲ್ಲಿ ಜು.17ರಿಂದ ಆಗಸ್ಟ್ 2ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಒಟ್ಟು 3,62,226 ಜನರನ್ನು ಸಮೀಕ್ಷೆಗೆ ಒಳಪಡಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ಷಯರೋಗ ಮತ್ತು ಎಚ್.ಐ.ವಿ./ಏಡ್ಸ್ ನಿಯಂತ್ರಣಾಧಿಕಾರಿ ಡಾ.ನೀಲೇಶ ಎಂ.ಎನ್. ತಿಳಿಸಿದ್ದಾರೆ.
  ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮತ್ತು ಸ್ವಯಂಸೇವಕರು, ಸಮುದಾಯ ಆಧಾರಿತ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಮನೆ ಮನೆಗೆ ಭೇಟಿ ಮಾಡಿ, ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಲಿದ್ದಾರೆ. ಸಂಭಾವ್ಯ ಕ್ಷಯ ಪ್ರಕರಣಗಳು ಕಂಡು ಬಂದರೆ, ಪರೀಕ್ಷೆಗೆ ಒಳಪಡಿಸುವುದು, ಕ್ಷಯ ರೋಗ ಎಂದು ದೃಡಪಟ್ಟಲ್ಲಿ ಚಿಕಿತ್ಸೆ ಆರಂಭಿಸಲಾಗುವುದು.
  ಆಂದೋಲನದಲ್ಲಿ ಮನೆ ಮನೆಗೆ ತೆರಳಿ ಇದುವರೆಗೂ ತಲುಪಲು ಸಾಧ್ಯವಾಗದವರ ಬಳಿ ತೆರಳಿ ತಪಾಸಣೆ ನಡೆಸಲಾಗುವುದು. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ವಾಸಿಸುವ ಉದ್ದೇಶಿತ ಜನಗಳನ್ನು ತಲುಪುವುದು. ಪ್ರಕರಣಗಳನ್ನು ಪತ್ತೆ ಹಚ್ಚುವುದು, ಕಫ ಪರೀಕ್ಷೆಗಳನ್ನು ಸಿಬಿನ್ಯಾಟ್ ಹಾಗೂ ಟ್ರೂನ್ಯಾಟ್ ಯಂತ್ರಗಳ ಮೂಲಕ ರೋಗವನ್ನು ದೃಢಪಡಿಸುವುದು ಮತ್ತು ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
  ಕ್ಷಯರೋಗವು ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್‌ಕುಲೋಸಿಸ್ ಎಂಬ ಸೂಕ್ಷ್ಮಾಣುವಿನಿಂದ ಉಂಟಾಗುತ್ತದೆ. ಅಂದರೆ ರೋಗಿಯು ಕೆಮ್ಮುವುದರಿಂದ ಮತ್ತು ಸೀನುವುದರಿಂದ ಹೊರಬರುವ ಎಂಜಲಿನ ತುಂತುರುಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

  1962ರಿಂದ 1992ರವರೆಗೆ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಭಾರತ ಸರ್ಕಾರದಿಂದ ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸಲಾಗುತ್ತಿತ್ತು. ಆದರೆ, ಆ ಅವಧಿಯಲ್ಲಿ ಪ್ರತಿ ನಿಮಿಷಕ್ಕೆ ಒಂದರಂತೆ ಕ್ಷಯ ರೋಗದಿಂದಾಗಿ ಸಾವು ಸಂಭವಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರವು 1998ರಲ್ಲಿ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ ಜಾರಿಗೆ ತಂದಿತು. ಕ್ಷಯರೋಗವನ್ನು ನಿಖರವಾಗಿ ಸೂಕ್ಷ್ಮದರ್ಶಕದಿಂದ ಪತ್ತೆ ಹಚ್ಚುವ ವಿಧಾನವನ್ನು ಅನುಸರಿಸಲಾಯಿತು ಎಂದು ತಿಳಿಸಿದ್ದಾರೆ.
  ಆರೋಗ್ಯ ಸಹಾಯಕರು ಹಾಗೂ ಎಲ್ಲ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡುತ್ತಿದ್ದು, ಈ ಸಮೀಕ್ಷೆಗೆ ಸಾರ್ವಜನಿಕರು ಸಹಕರಿಸಿ, ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಕೋರಿದ್ದಾರೆ.
  ಮಾಸಿಕ 500 ರೂ.:
  ಕ್ಷಯರೋಗದ ಪತ್ತೆಯಿಂದ ಹಿಡಿದು ಗುಣಮುಖವಾಗುವರೆಗೆ ಅಂದರೆ ಕಫ ಪರೀಕ್ಷೆ, ಕ್ಷ-ಕಿರಣ ಪರೀಕ್ಷೆ ಮತ್ತು ಔಷಧೋಪಚಾರ ಎಲ್ಲವೂ ಈ ಕಾರ್ಯಕ್ರಮದಲ್ಲಿ ಉಚಿತವಾಗಿದೆ. ಚಿಕಿತ್ಸೆಯ ಸಮಯದಲ್ಲಿ ಮಾಸಿಕ 500 ರೂಗಳನ್ನು ನಿಕ್ಷಯ ಪೋಷಣ ಅಡಿಯಲ್ಲಿ ಪೌಷ್ಠಿಕ ಆಹಾರವನ್ನು ಖರೀದಿಸಲು ಮಾಸಿಕವಾಗಿ ನೀಡಲಾಗುತ್ತಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts