More

    ಸುಳ್ಳು ಸುದ್ದಿಯೇ ಕಾಂಗ್ರೆಸ್‌ನ ಪ್ರಚಾರದ ಅಸ್ತ್ರ; ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘರ್ಜನೆ

    ಶಿಗ್ಗಾಂವಿ/ ಸವಣೂರ: ಕಾಂಗ್ರೆಸ್ಸಿಗರು ಸುಳ್ಳು ಸುದ್ದಿ ಹರಡುವುದರಲ್ಲಿ ನಿಸ್ಸೀಮರು. ತಮ್ಮ ಸ್ವಾರ್ಥ ಸಾಧನೆಗಾಗಿ ಚುನಾವಣೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ನಾವು ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದೆ ಇಟ್ಟು ಚುನಾವಣೆ ಮಾಡುತ್ತಿದ್ದೇವೆ. ಇವುಗಳೇ ನಮಗೆ ಶ್ರೀರಕ್ಷೆಯಾಗಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಂದು ಹೇಳಿದರು.
    ಬಹಿರಂಗ ಪ್ರಚಾರದ ಕೊನೆದ ದಿನವಾದ ಸೋಮವಾರ ಸ್ವಕ್ಷೇತ್ರ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ವನಹಳ್ಳಿ, ಹನುಮನಹಳ್ಳಿ, ಹಿರೇಮಲ್ಲೂರು, ಮಂತ್ರೋಡಿ, ಜೇಕನಕಟ್ಟಿ ಹಾಗೂ ಸವಣೂರು ಪಟ್ಟಣಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
    ನಾನು 2018ರಲ್ಲಿ ಬೆಳೆ ವಿಮೆಗಾಗಿ ಹೋರಾಟ ನಡೆಸಿದ ಸಂದರ್ಭದಲ್ಲಿ ಕಣ್ಣಿಗೆ ಏಟು ತಗಲಿತ್ತು. ಅದನ್ನು ಈಗ ನಡೆದಿದೆ ಎನ್ನುವಂತೆ ಬಿಂಬಿಸಲು ಕಾಂಗ್ರೆಸ್ ಹೊರಟಿದೆ. ಅದೇ ರೀತಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರು ಲಿಂಗಾಯತರ ಬಗ್ಗೆ ಹೇಳಿಕೆಯನ್ನೇ ನೀಡದಿದ್ದರೂ ಅವರು ಹೇಳಿದ್ದಾರೆಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಸಮಾಜದಲ್ಲಿ ದ್ವೇಷ ಮತ್ತು ಅರಾಜಕತೆಯನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.
    ಈ ಬಾರಿಯ ಚುನಾವಣೆ ಬಿಜೆಪಿಯ ಅಭಿವೃದ್ಧಿ ಹಾಗೂ ಕಾಂಗ್ರೆಸ್ಸಿನ ಒಡೆದಾಳುವ ನೀತಿಯ ನಡುವೆ ನಡೆದಿದೆ. ಈ ಬಾರಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಡಬಲ್ ಇಂಜಿನ್ ಸರ್ಕಾರದ ಸಾಧನೆ ಇಟ್ಟುಕೊಂಡು ನಾವು ಮತ ಕೇಳುತ್ತಿದ್ದೇವೆ. ಹಿಂದಿನ ಸಮ್ಮಿಶ್ರದಿಂದ ಬೇಸತ್ತು ಅನೇಕ ಶಾಸಕರು ನಮ್ಮ ಜತೆ ಬಂದರು. ಇದರಿಂದ ಬಿಜೆಪಿ ಸರ್ಕಾರ ಬಂದು ನಾಲ್ಕು ವರ್ಷದ ಆಡಳಿತದಲ್ಲಿ ಕ್ಷೇತ್ರ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು.
    ಕೋವಿಡ್ ವೇಳೆ ಪ್ರಧಾನಿ ಮೋದಿ ಉಚಿತ ಲಸಿಕೆ ನೀಡಿದ್ದರಿಂದ ಎಲ್ಲರೂ ಆರೋಗ್ಯ ಸುರಕ್ಷಾ ಚಕ್ರದಲ್ಲಿ ಇರುವಂತಾಯಿತು. ಆದರೂ ಮೋದಿ ಏನು ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ಸಿಗರು ಕೇಳುತ್ತಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರವಾಹದಲ್ಲಿ ಮನೆ ಬಿದ್ದಾಗ 25 ಸಾವಿರ ರೂ. ಕೊಡುತ್ತಿದ್ದರು. ನಾವು ಐದು ಲಕ್ಷ ರೂ. ಕೊಟ್ಟಿದ್ದೇವೆ. ಬೆಳೆ ಹಾನಿಗೆ ಡಬಲ್ ಪರಿಹಾರ ಕೊಟ್ಟಿದ್ದೇವೆ. ರೈತರ ಸಂಕಷ್ಟ ನನಗೆ ಗೊತ್ತಿದೆ. ಅದಕ್ಕಾಗಿ ಸಿಎಂ ಆಗಿ ನಾಲ್ಕು ಗಂಟೆಯೊಳಗಾಗಿ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದೇನೆ. ಸ್ತ್ರೀಶಕ್ತಿ ಸಾಮರ್ಥ್ಯ ಯೋಜನೆ ಜಾರಿಗೊಳಿಸಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.
    ಶಿಗ್ಗಾಂವಿಯಲ್ಲಿ ಅಭಿವೃದ್ಧಿ ಪರ್ವ
    ನನ್ನ ಶಿಗ್ಗಾಂವಿ- ಸವಣೂರ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವ ಆಗಿದೆ. 438 ಕೋಟಿ ರೂ. ವೆಚ್ಚದಲ್ಲಿ 136 ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸುವ ಕೆಲಸ ಮಾಡಿದ್ದೇನೆ. ಸುಮಾರು 300 ಶಾಲಾ ಕೊಠಡಿಗಳನ್ನು ನಿರ್ಮಿಸಿದ್ದೇನೆ. ಐಟಿಐ, ಜಿಟಿಟಿಸಿ ಕಾಲೇಜು ನಿರ್ಮಿಸಿದ್ದೇನೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಈ ಬಾರಿ ಬಿಜೆಪಿ ಗೆಲುವು ನಿಶ್ಚಿತವಾಗಿದೆ. ಈ ಬಾರಿ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿ ಎಂದು ಸಿಎಂ ಮನವಿ ಮಾಡಿದರು.
    ಜನರೇ ನನ್ನ ಚುನಾವಣೆ ಮಾಡುತ್ತಿದ್ದಾರೆ
    ಈ ಬಾರಿಯ ಚುನಾವಣೆಯನ್ನು ನಾವ್ಯಾರೂ ಮಾಡುತ್ತಿಲ್ಲ. ಬದಲಾಗಿ ನನ್ನ ಜನರೇ ಸ್ವಯಂಪ್ರೇರಿತರಾಗಿ ಪ್ರಚಾರ ಮಾಡುತ್ತಿದ್ದಾರೆ. ಎಲ್ಲ ಹಳ್ಳಿಗಳಲ್ಲಿ ಹಬ್ಬದ ವಾತಾವರಣವಿದೆ. ವಿಶೇಷವಾಗಿ ತಾಯಂದಿರ ಉತ್ಸಾಹ, ಬೆಂಬಲ ನೋಡಿದರೆ ಯಾವುದೋ ಜನ್ಮದ ಪುಣ್ಯ ಅಂದುಕೊಂಡಿದ್ದೇನೆ. ಮತ್ತೊಮ್ಮೆ ನನಗೆ ಆಶೀರ್ವದಿಸಿ, ಇನ್ನೂ ಹೆಚ್ಚು ಸೇವೆ ಮಾಡುವ ಅವಕಾಶ ಮಾಡಿಕೊಡಿ ಎಂದು ಸಿಎಂ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts