More

    ಸತೀಶ ಕುಲಕರ್ಣಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

    ಹಾವೇರಿ: ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಹಿರಿಯ ಸಾಹಿತಿ, ಕಲಾವಿದ ಹಾವೇರಿಯ ಸತೀಶ ಕುಲಕರ್ಣಿ ಅವರ ಸಾಹಿತ್ಯ ಕ್ಷೇತ್ರದ ಸೇವೆಗೆ 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಗರಿ ಒಲಿದು ಬಂದಿದೆ. ಎಲೆಮರೆ ಕಾಯಿಯಂತೆ ಸಾಹಿತ್ಯ ಕೃಷಿ ಮಾಡುವ ಸಾಹಿತಿಗೆ ಶ್ರೇಷ್ಠ ಗೌರವ ಹುಡುಕಿಕೊಂಡು ಬಂದಿದೆ. ಈ ಮೂಲಕ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪಡೆದ ಜಿಲ್ಲೆಯ ಏಕೈಕ ಸಾಧಕರೆನಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ಗುಡಗೇರಿಯಲ್ಲಿ ಜುಲೈ 13, 1951ರಂದು ಜನಿಸಿದ ಸತೀಶ ಅವರು, ಬಿಎಸ್‌ಸಿ, ಎಂಎ ಪದವಿ ನಂತರ ಹಾವೇರಿಯಲ್ಲಿ ಹೆಸ್ಕಾಂನಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿ, 2011ರಲ್ಲಿ ನಿವೃತ್ತಿ ಹೊಂದಿದರು. ನಾಲ್ಕು ದಶಕಗಳಿಂದ ಸಾಹಿತ್ಯ, ರಂಗಭೂಮಿ, ಕಲೆ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ‘ಕಟ್ಟತೇವ ನಾವು ಕಟ್ಟತೇವ ಕ್ರಾಂತಿ’ ಗೀತೆಯ ಮೂಲಕ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ.
    2018ರಿಂದ 2023ರವರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪಂಪ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದ ಸತೀಶ ಅವರ ಕವಿತೆಗಳು ರಾಜ್ಯದ 8 ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿವೆ. 8 ಬಾರಿ ನಟನೆ, ನಿರ್ದೇಶನಕ್ಕಾಗಿ ರಾಜ್ಯ ಮಟ್ಟದ ರಂಗಭೂಮಿ ಪ್ರಶಸ್ತಿಗಳು ಲಭಿಸಿವೆ. ಮೈಸೂರು ವಿವಿಯ ಪುಟ್ಟರಾಜು ಎಂಬುವವರು ಸತೀಶ ಕುಲಕರ್ಣಿ ಇವರ ಸಾಹಿತ್ಯದ ಮೇಲೆ ಡಾಕ್ಟರೇಟ್ ಪಡೆದಿದ್ದಾರೆ. ಈ ಬಾರಿ ಮೈಸೂರು ದಸರಾ ಮಹಿಳಾ ಕವಿಗೋಷ್ಠಿ ಉದ್ಘಾಟನೆ ಮಾಡಿದ್ದಾರೆ.
    ಸಿನಿಮಾ, ಧಾರಾವಾಹಿ ನಂಟು
    ಇಂಗಳೆ ಮಾರ್ಗ, ಸಾವಿತ್ರಿಬಾಯಿ ಫುಲೆ, 22 ಜುಲೈ 1947 ಹಾಗೂ ದಂತ ಪುರಾಣ ಚಲನಚಿತ್ರಗಳಿಗೆ ಸತೀಶ ಸಾಹಿತ್ಯ ರಚಿಸಿದ್ದಾರೆ. ಗಿರೀಶ ಕಾಸರವಳ್ಳಿ ನಿರ್ದೇಶನದ ‘ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆಗಳು’, ವೈಶಾಲಿ ಕಾಸರವಳ್ಳಿ ನಿರ್ದೇಶನದ ‘ಮೂಡಲಮೆನೆ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
    ಪ್ರಮುಖ ಕೃತಿ, ನಾಟಕಗಳು
    ಬೆಂಕಿ ಬೇರು, ವಿಕ್ಷಿಪ್ತ, ನೆಲದ ನೆರಳು, ಒಡಲಾಳ ಕಿಚ್ಚು, ವಿಷಾದ ಯೋಗ, ಹಾವೇರಿ ತಾಲ್ಲೂಕು ದರ್ಶನ, ಕವಿತೆ 93, ಗಾಂಧೀ ಗಿಡ, ಬಂಡಾಯದ ಗಟ್ಟಿ ದನಿ, ಕಂಪನಿ ಸವಾಲ್, ಛಿನ್ನ, ಸತೀಶ ಸಮಗ್ರ, ಸಮಯಾಂತರ, ಸಮುದ್ರ ಸೂರ್ಯ, ಗುರುವರ್ಯ ಗೋಕಾಕರು, ಕರ್ನಾಟಕ ಸಮಗ್ರ ತತ್ವ ಪದಗಳ ಜನಪ್ರಿಯ ಸಾಹಿತ್ಯ ಮಾಲೆ, ಹಾವೇರಿ ಜಿಲ್ಲಾ ರಂಗ ಮಾಹಿತಿ, ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.
    ಪ್ರಶಸ್ತಿ, ಗೌರವ
    ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯಶ್ರೀ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಶಸ್ತಿ, ಸಿಜಿಕೆ ಬೀದಿ ನಾಟಕ ಪ್ರಶಸ್ತಿ, ಡಾ.ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಪ್ರಸ್ತುತ ಡಾ.ವಿ.ಕೃ ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸೇರಿ ವಿವಿಧ ಟ್ರಸ್ಟ್‌ಗಳ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts