More

    ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ 4ರಂದು; ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿಕೆ

    ಹಾವೇರಿ: ಕೃಷಿ ಕಾಯ್ದೆ ರದ್ದತಿ, ಸೂಕ್ತ ಬರ ಪರಿಹಾರ ಬಿಡುಗಡೆ, ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.4ರಂದು ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರೈತರಿಗಾಗಿ ಒಂದೇ ಒಂದು ಉತ್ತಮವಾದ ಕೆಲಸವನ್ನೂ ಮಾಡಿಲ್ಲ. ಕೃಷಿ ಕಾಯ್ದೆ ವಾಪಸ್ ಪಡೆಯುವುದಾಗಿ ರೈತರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿಎಂ ಹಾಗೂ ಡಿಸಿಎಂ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಹಿಂದಿನ ಅಧಿವೇಶನದಲ್ಲಿ ಎಪಿಎಂಸಿ ಕಾಯ್ದೆ ವಾಪಸ್ ಪಡೆಯಲು ಮುಂದಾಗಿದ್ದ ಸಚಿವ ಶಿವಾನಂದ ಪಾಟೀಲ, ಬಿಜೆಪಿ ವಿರೋಧಿಸುತ್ತಿದ್ದಂತೆ ರೈತರೊಂದಿಗೆ ಚರ್ಚಿಸುವುದಾಗಿ ಹಿಂದೆ ಸರಿದರು ಎಂದರು.
    ಶಿಗ್ಗಾಂವಿಯ ವಿಐಎನ್‌ಪಿ ಸಕ್ಕರೆ ಕಾರ್ಖಾನೆ ಸ್ಥಳೀಯ ಕಬ್ಬು ಬೆಳೆಗಾರರಿಗೆ ಕಡಿಮೆ ದರ, ಬೇರೆ ಕಡೆಯಿಂದ ಬರುವವರಿಗೆ ಹೆಚ್ಚು ದರ ನಿಗಧಿಪಡಿಸಿದೆ. ಲೀಟರ್ ಹಾಲಿಗೆ 2 ರೂ. ಹೆಚ್ಚು ಪ್ರೋತ್ಸಾಹ ಧನ ಕೊಟ್ಟು, ಪಶು ಆಹಾರದ ಬೆಲೆ 2 ರೂ. ಹೆಚ್ಚು ಮಾಡಿ ರೈತರಿಂದ ಒಟ್ಟು 4 ರೂ. ಬಲವಂತವಾಗಿ ಕಿತ್ತುಕೊಳ್ಳುತ್ತಿದ್ದಾರೆ. ಹಾಗಾಗಿ, ರಾಜ್ಯ ಸರ್ಕಾರ ಹಾಲಿನ ದರ ಪರಿಷ್ಕರಿಸಬೇಕು. ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು. ವಿದ್ಯತ್ ಕಾಯ್ದೆ ವಾಪಸ್ ಪಡೆಯಬೇಕು, ತೆಂಗಿಗೆ ವಿದೇಶದಿಂದ ಬರುವ ಉತ್ಪನ್ನಕ್ಕೆ ಆಮದು ಸುಂಕ ಹೆಚ್ಚಿಸಬೇಕು. ಇಲ್ಲದಿದ್ದರೆ ಕ್ವಿಂಟಲ್‌ಗೆ 25,000 ರೂ. ನೀಡಬೇಕು ಎಂದು ಆಗ್ರಹಿಸಿದರು.
    ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣವರ, ಪ್ರಧಾನ ಕಾರ್ಯದರ್ಶಿ ರಮೇಶ ದೊಡ್ಡೂರ, ಬಿ.ಟಿ.ಬಸವರಾಜ, ರುದ್ರಪ್ಪ ಬಳಿಗಾರ, ಶಿವನಗೌಡ ಗಾಜಿಗೌಡ್ರ, ಹಜರತಲಿ ಪಟ್ಟಣಶೆಟ್ಟಿ, ರಾಮಚಂದ್ರ ಪೂಜಾರ, ನಾಗರಾಜ ರಿತ್ತಿಕುರುಬರ, ರವಿ ದೊಡ್ಡಮನಿ, ಇತರರಿದ್ದರು.
    ತೆಲಂಗಾಣದಲ್ಲಿ ರಾಜ್ಯದ ಹಣ
    ತೆಲಂಗಾಣ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಬರದಲ್ಲಿ ನೊಂದಿರುವ ರಾಜ್ಯದ ರೈತರನ್ನು ಮರೆತಿದ್ದಾರೆ. ರಾಜ್ಯದ ವಿವಿಧ ಇಲಾಖೆಗಳ ಹಣ ತೆಲಂಗಾಣದ ಗಲ್ಲಿ ಗಲ್ಲಿಯಲ್ಲಿ ಓಡಾಡುತ್ತಿದೆ ಎಂದು ಚಂದ್ರಶೇಖರ ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts