More

    ಉಡಾಫೆ ಮಾತನಾಡಿದರೆ ಶಾಸಕರ ಮನೆ ಎದುರು ಧರಣಿ; ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಎಚ್ಚರಿಕೆ

    ಹಾವೇರಿ: ಜಿಲ್ಲೆಯಲ್ಲಿ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರವಾಗಿ ಉಡಾಫೆ ಮಾತುಗಳನ್ನು ಮುಂದುವರಿಸಿದರೆ ಅಂತಹ ಶಾಸಕರ ನಿವಾಸದ ಎದುರು ಧರಣಿ ನಡೆಸಲಾಗುವುದು. ದೇಶಕ್ಕೆ ಅನ್ನ ನೀಡುವ ರೈತರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಟ್ಟು ರೈತರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಎಚ್ಚರಿಕೆ ನೀಡಿದರು.
    ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 43ನೇ ರೈತ ಹುತಾತ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸಾಲದ ಸಂಕಷ್ಟಕ್ಕೆ ಸಿಲುಕಿ ಎರಡೇ ತಿಂಗಳಲ್ಲಿ ರಾಜ್ಯದ 48 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ರೈತನ ಕೈಸೇರುತ್ತಿಲ್ಲ. ಇಂತಹ ಸಂದರ್ಭದಲ್ಲಿ ರೈತನ ನೆರವಿಗೆ ಬರಬೇಕಿದ್ದ ಸರ್ಕಾರ ಅವರ ಆತ್ಮಹತ್ಯೆ ಬಗ್ಗೆ ಕೇವಲವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರಕ್ಕೆ ಮಾಡಿದಂತೆ ಕಾಂಗ್ರೆಸ್ ಸರ್ಕಾರಕ್ಕೂ ಬಿಸಿ ಮುಟ್ಟಿಸಬೇಕಾದೀತು ಎಂದು ಹೇಳಿದರು.
    ಪ್ರತಿಯೊಬ್ಬ ರೈತನ ಆತ್ಮಹತ್ಯೆ ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸುತ್ತೇವೆ. ತಾಲೂಕು ಹಾಗೂ ಗ್ರಾಮ ಮಟ್ಟಕ್ಕೆ ಸಂಘಟನೆ ಮಾಡಲಾಗುತ್ತಿದೆ. ರೈತ ಸಂಘಟನೆಗಳ ಬೇಡಿಕೆಗಳು ಒಂದೇ ಆಗಿದ್ದರೂ ಸಂಘಟನೆಗಳು ಒಡೆದು ಹೋಗಿವೆ. ರೈತ ಸಂಘ ನಿಷ್ಪಕ್ಷಪಾತ ಸಂಘಟನೆಯಾಗಿದೆ. ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ರೈತ ಸಂಘಟನೆ ಕಟ್ಟುವ ಕೆಲಸವಾಗಬೇಕಿದೆ. ಸಂಘದ ಎಲ್ಲ ಕಾರ್ಯಕರ್ತರು ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
    ಎಪಿಎಂಸಿ ಕಾಯ್ದೆ ಹಿಂಪಡೆದಿದ್ದು, ರೈತ ಸಂಘಟನೆಯ ಗೆಲುವಾಗಿದೆ. ನೀರಾವರಿ ಯೋಜನೆಗೆ ಹಣ ಕೊಡಲಾಗದು ಎಂದು ಸರ್ಕಾರ ಹೇಳುತ್ತಿದೆ. ರೈತ ಕುಲಕ್ಕೆ ಕೊಡುವ ಯೋಜನೆ ಪ್ರಮುಖವಾದದ್ದಾಗಿದ್ದು, ನೀರಾವರಿ ಇಲಾಖೆಗೆ 10 ಸಾವಿರ ಕೋಟಿ ರೂ. ಇಡಬೇಕು. ದುಡ್ಡು ಕೊಡದಿದ್ದರೆ ಜಿಲ್ಲಾವಾರು ಕಪ್ಪುಪಟ್ಟಿ ಪ್ರದರ್ಶನ ಮಾಡುತ್ತೇವೆ. ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್‌ಗೆ 35 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
    ಅಧ್ಯಕ್ಷತೆ ವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ, ರೈತರ ಜ್ವಲಂತ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಹೋರಾಟದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದರು.
    ಸಮಾರಂಭದಲ್ಲಿ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಹಾಗೂ ಬಾಗಲಕೋಟೆಯ ಲಡ್ಡುಮುತ್ಯಾ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಕಿರುತೆರೆ ನಟ ಗಣೇಶರಾವ್ ಕೇಸರ್ಕರ್, ನಿವೃತ್ತ ಪ್ರಾಚಾರ್ಯ ಪಂಚಾಕ್ಷರಯ್ಯ ಹಿರೇಮಠ, ಮಾಲತೇಶ ಅಂಗೂರ, ಅಶೋಕ ಹಳ್ಳಿಯವರ, ಸಂಗಣ್ಣ ಬಾಗೇವಾಡಿ, ರೇಣುಕಾ ಮಣ್ಣೂರ, ಕುಸುಮಾ ಅಸಾದಿ, ಅನ್ನಪೂರ್ಣ ಪಾಟೀಲ, ಮರಿಯಪ್ಪ ಕಾರಟಗಿ, ಕೃಷ್ಣಮೂರ್ತಿ ಲಮಾಣಿ, ಸಂಜೀವ ಮಡಿವಾಳರ, ರಾಮಣ್ಣ ಜಾಡಿ, ಶ್ರೀನಿವಾಸ, ಶಂಕರ ಆಚಾರ್ಯ, ಗುರುನಾಥರೆಡ್ಡಿ ಅದನೂರ, ಶಂಕರಗೌಡ ಪಾಟೀಲ, ಶಿವಯೋಗಿ ಬ್ಯಾಡಗಿ, ಮಾಲತೇಶ ಛತ್ರದ, ಪುಷ್ಪಲತಾ ಬೆಂಗಳೂರು, ಶ್ರೀದೇವಿ ನಾಯ್ಕರ, ಲಲಿತಾ ಬಿರಾದಾರ, ಮತ್ತಿತರರು ಉಪಸ್ಥಿತರಿದ್ದರು. ಬಾಕ್ಸ್

    ಬರಪೀಡಿತವೆಂದು ಘೋಷಿಸಿ
    ರಾಜ್ಯವನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು. ಕೃಷಿ ಕೆಲಸಕ್ಕೆ ಮಾಡಿದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸಿಬಿಲ್‌ನಿಂದ ರೈತರ ಸಾಲವನ್ನು ಹೊರಗಿಡಬೇಕು. ಬೆಳೆಸಾಲ ಕೊಡುವುದನ್ನು ಬಂದ್ ಮಾಡಿದರೆ ಬ್ಯಾಂಕ್‌ಗಳನ್ನು ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ವಾಸುದೇವ ಮೇಟಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts