More

    ಪೋಕ್ಸೊ ತಡೆಗೆ ಪಾಲಕರ ಸಹಕಾರ ಅಗತ್ಯ; ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಿ; ನ್ಯಾಯಾಧೀಶ ಪುಟ್ಟರಾಜು ಸಲಹೆ

    ಹಾವೇರಿ: ಪೊಕ್ಸೋ ಪ್ರಕರಣಗಳ ತಡೆಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಜತೆಗೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತಡೆಗೆ ಅಧಿಕಾರಿಗಳ ಜತೆಗೆ ಪಾಲಕರು ಕೈಜೋಡಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.
    ನಗರದ ಸರ್ಕಾರಿ ನಿವೃತ್ತ ನೌಕರರ ಭವನದಲ್ಲಿ ಇತ್ತೀಚೆಗೆ ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಪೋಕ್ಸೋ ಕಾಯ್ದೆ, ಬಾಲಕಾರ್ಮಿಕ ಹಾಗೂ ಭಿಕ್ಷಾಟನೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಕುರಿತು ಎಸ್.ಜೆಪಿ.ಯು ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿ ನಿಷೇಧ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿದ್ದರೂಸಿ ಪೊಕ್ಸೋ ಪ್ರಕರಣಗಳು ಹತೋಟಿಗೆ ಬರುತ್ತಿಲ್ಲ. ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡಿದರೆ ಪಾಲಕರ ಜವಾಬ್ದಾರಿ ಮುಗಿವುದಿಲ್ಲ. ಹಾಗಾಗಿ, 16ರಿಂದ 20 ವರ್ಷದ ಮಕ್ಕಳ ಪಾಲಕರು ತಮ್ಮ ದೈನಂದಿನ ಕೆಲಸದೊಂದಿಗೆ ಮಕ್ಕಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಬಿಡುವಿನ ಸಮಯದಲ್ಲಿ ಮಕ್ಕಳೊಂದಿಗೆ ಕಾಲ ಕಳೆಯಬೇಕು. ಶಾಲಾ ಶಿಕ್ಷಕರೊಂದಿಗೆ ಸಂಪರ್ಕದಲ್ಲಿದ್ದು, ಮಕ್ಕಳ ನಡವಳಿಕೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
    ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿವೆ. ಪೋಕ್ಸೋ ಪ್ರಕರಣಗಳು ಮೊಬೈಲ್ ಪರಿಚಯಸ್ಥರಿಂದ ಹಾಗೂ ಸಂಬಂಧಿಕರಿಂದ ನಡೆಯುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಮಕ್ಕಳಿಗೆ ಸರಿಯಾದ ತಿಳುವಳಿಕೆ ನೀಡುವ ಕೆಲಸ ಮನೆಯಿಂದ ಆರಂಭವಾಗಬೇಕು. ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.
    ಜಿಲ್ಲೆಯಲ್ಲಿ ಜನವರಿ 2023ರಿಂದ ಈವರೆಗೆ ಪೋಕ್ಸೋ ಪ್ರಕರಣದ ಸಂತ್ರಸ್ಥರಿಗೆ 69 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅಪರಾದ ಪ್ರಕರಣಗಳಲ್ಲಿ ಕಾನೂನಿನಲ್ಲಿ ಶಿಕ್ಷೆಯಾಗುತ್ತದೆ. ಆದರೆ, ಅಪರಾಧ ಪ್ರಕರಣಗಳು ನಡೆಯದಂತೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಪೋಕ್ಸೋ ಪ್ರಕರಣಗಳ ತಡೆಗೆ ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.
    ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಮಾತನಾಡಿ, ನಾವು ಅಧಿಕಾರಿಗಳಾಗುವ ಮೊದಲು ಒಬ್ಬ ಪಾಲಕರು ಎಂಬ ವಿಷಯವನ್ನು ತಿಳಿದುಕೊಳ್ಳಬೇಕು. ಸಾರ್ವಜನಿಕ ಕಳಕಳಿ, ಮಾನವೀಯ ಮೌಲ್ಯಗಳನ್ನು ಮನೆಯಿಂದ ಕಲಿಸುವ ಕೆಲಸವಾಗಬೇಕು. ದೌರ್ಜನ್ಯ ಪ್ರಕರಣಗಳ ಮಕ್ಕಳೊಂದಿಗೆ ಸೌರ್ಜನ್ಯದಿಂದ ನಡೆದುಕೊಂಡು ಅವರಿಗೆ ಸಾಂತ್ವಾನ ಹೇಳುವ ಕೆಲಸವಾಗಬೇಕು ಎಂದರು.
    ಯುನೆಸೆಫ್‌ನ ಹರೀಶ ಜೋಗಿ ಪೋಕ್ಸೋ ಕಾಯ್ದೆ, ಬಾಲಕಾರ್ಮಿಕ ಹಾಗೂ ಭಿಕ್ಷಾಟನೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.
    ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ್, ಸರ್ಕಾರಿ ನಿವೃತ್ತ ನೌಕರ ಸಂಘದ ಮಹ್ಮದ ಹನೀಫ್, ಇತರರು ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಸ್ವಾಗತಿಸಿದರು. ಪ್ರವೀಣ ಗೊಡ್ಡೆಮ್ಮಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts