More

    ಭ್ರಷ್ಟಾಚಾರ ನಿರ್ಮೂಲನೆಗೆ ಕೈ ಜೋಡಿಸಿ; ಜಾಗೃತಿ ಅರಿವು ಸಪ್ತಾಹದಲ್ಲಿ ಅಧಿಕಾರಿಗಳಿಗೆ ನ್ಯಾಯಾಧೀಶ ಪುಟ್ಟರಾಜು ಕರೆ

    ಹಾವೇರಿ: ಪ್ರಸ್ತುತ ದಿನಗಳಲ್ಲಿ ಭ್ರಷ್ಟಾಚಾರ ಸಾಮಾನ್ಯವಾಗಿದೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಇದು ಮಾರಕವಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗೆ ಕೈ ಜೋಡಿಸಿ ಅಭಿವೃದ್ಧಿ ಶೀಲ ರಾಷ್ಟ್ರಕ್ಕೆ ನಾವು ಮುಂದಾಗೋಣ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಕರೆ ನೀಡಿದರು.
    ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಾವೇರಿ ಜಿಲ್ಲಾ ಕರ್ನಾಟಕ ಲೋಕಾಯುಕ್ತ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ನಾವೆಲ್ಲ ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುವವರು, ಸಾರ್ವಜನಿಕ ಸೇವೆಗಾಗಿ ಬಂದವರು ಎಂಬುದನ್ನು ಗಮನಹರಿಸಿ ಕೆಲಸ ಮಾಡಬೇಕು. ಸಾರ್ವಜನಿಕರ ಕೆಲಸಗಳಲ್ಲಿ ಅನಗತ್ಯ ವಿಳಂಬ ಮಾಡದೇ ಸ್ವಜನಪಕ್ಷಪಾತ ತೋರದೆ ಉತ್ತಮ ಪರಿಣಾಮಕಾರಿಯಾದ ಆಡಳಿತವನ್ನು ನೀಡಬೇಕಾಗಿದೆ. ಕಚೇರಿಗಳಿಗೆ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಂದಿಸದೇ ಇರುವುದು ಭ್ರಷ್ಟಾಚಾರವಾಗಿದೆ. ಇದಕ್ಕೆ ಆಸ್ಪದ ನೀಡದೇ ಅಧಿಕಾರಿಗಳು ನಿಷ್ಟೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕ ಅರ್ಜಿಗಳನ್ನು ವಿಳಂಬಮಾಡದೇ ವಿಲೇವಾರಿ ಮಾಡುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾತನಾಡಿ, ‘ಮಾಡಿದ್ದುಣ್ಣೋ ಮಾರಾಯ’ ಹಾಗೂ ‘ತಪ್ಪು ಮಾಡಿದವನು ಉಪ್ಪು ತಿನ್ನಲೇಬೇಕು’ ಎಂಬ ಗಾದೆಗಳನ್ನು ಎಲ್ಲರೂ ನೆನಪಿಸಿಕೊಳ್ಳಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ ತಪ್ಪು ಮಾಡಬಾರದು. ಒಮ್ಮೆ ತಪ್ಪು ಮಾಡಿದರೆ ಅದನ್ನು ತಿದ್ದಿಕೊಳ್ಳಬೇಕು. ತಪ್ಪು ಎಂದು ಗೊತ್ತಾಗಿಯೂ ಪದೆಪದೇ ತಪ್ಪು ಮಾಡಿದರೆ ಉಪ್ಪು ತಿನ್ನಲೇಬೇಕು. ಪ್ರತಿ ಸರ್ಕಾರಿ ನೌಕರನು ತನ್ನ ಆದಾಯಕ್ಕೆ ತಕ್ಕಂತೆ ಜೀವನ ನಡೆಸಬೇಕು. ಒಮ್ಮೆ ಲಂಚ ತೆಗೆದುಕೊಂಡರೆ ಅದಕ್ಕೆ ಕೊನೆ ಇರುವುದಿಲ್ಲ. ಇದರ ಪರಿಣಾಮ ನಿಮ್ಮ ಕುಟುಂಬದ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿಮ್ಮ ಕುಟುಂಬದವರು ಸಮಾಜದಲ್ಲಿ ತಲೆತಗ್ಗಿಸುವಂತೆ ಮಾಡಬೇಡಿ. ಅವರು ನಿಮ್ಮ ಕರ್ತವ್ಯನಿಷ್ಠೆಯನ್ನು ನೆನಪಿಸಿಕೊಳ್ಳುವಂತಹ ಕೆಲಸಮಾಡಿ ಎಂದರು.
    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ಲಂಚ ಪಡೆಯುವುದು ಹಾಗೂ ಕೊಡುವುದು ಸಹ ಭ್ರಷ್ಟಾಚಾರವಾಗಿದೆ. ಎಲ್ಲರಿಗೂ ಕಾನೂನಿನ ಬಗ್ಗೆ ಸಾಮಾನ್ಯ ಜ್ಞಾನವಿದೆ. ಕಾನೂನು ಉಲ್ಲಂಘನೆ ಮಾಡಬಾರದು. ಅಧಿಕಾರಿಗಳು ಕೆಲಸ ಮಾಡಿಕೊಡಲು ಯಾವುದೇ ಬೇಡಿಕೆ ಇಡಬಾರದು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿ.ಪಂ.ಉಪಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
    ಪ್ರತಿಜ್ಞಾವಿಧಿ ಬೋಧನೆ:
    ದಾವಣಗೆರೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ ಅವರು ಅಧಿಕಾರಿಗಳಿಗೆ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಿದರು. ಕೋಟ್:
    ಕರ್ನಾಟಕ ಲೋಕಾಯುಕ್ತ ಕಾರ್ಯ ರಾಷ್ಟ್ರಕ್ಕೆ ಮಾದರಿಯಾಗಿದೆ. ಭ್ರಷ್ಟಾಚಾರದ ವಿರುದ್ಧ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ತಾಲೂಕಾವಾರು ದೂರು ಸ್ವೀಕಾರ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಂದ ದೂರು ಸ್ವೀಕರಿಸಲಾಗುತ್ತಿದೆ. ಭ್ರಷ್ಟಾಚಾರ ಪ್ರಕರಣಗಳು ಕಂಡುಬಂದಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತನ್ನಿ.
    ಡಾ.ಚಂದ್ರಶೇಖರ ಬಿ.ಪಿ., ಜಿಲ್ಲಾ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts