More

    ಲಯನ್ಸ್ ಶಾಲೆ ಶಿಕ್ಷಕರು, ಸಿಬ್ಬಂದಿ ಪ್ರತಿಭಟನೆ; ಮೂರು ತಿಂಗಳಿಂದ ಸಂಬಳ ನೀಡದ್ದಕ್ಕೆ ಆಕ್ರೋಶ

    ಹಾವೇರಿ: ಮೂರು ತಿಂಗಳಿಂದ ವೇತನ ಪಾವತಿಸದ ಹಿನ್ನೆಲೆಯಲ್ಲಿ ಇಲ್ಲಿನ ಲಯನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಲಯನ್ಸ್ ಪದವಿಪೂರ್ವ ಕಾಲೇಜ್‌ನ ಶಿಕ್ಷಕರು ಹಾಗೂ ಸಿಬ್ಬಂದಿ ತರಗತಿ ಬಹಿಷ್ಕರಿಸಿ ಶಾಲಾ ಆವರಣದಲ್ಲಿ ಗುರುವಾರ ಮೌನ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲಕಾಲ ತಳ್ಳಾಟ, ನೂಕಾಟದಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

    ಹಣಕಾಸಿನ ಯಾವುದೇ ತೊಂದರೆ ಇಲ್ಲದಿದ್ದರೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಮುದಗಲ್ಲ, ಶಿಕ್ಷಕರ, ಸಿಬ್ಬಂದಿಯ ಸಂಬಳ ನೀಡಲು ಹಿಂದೇಟು ಹಾಕಿದ್ದಾರೆ. ನವೆಂಬರ್ 4ರಂದು ಖಜಾಂಚಿ ಸಹಿ ಮಾಡಿದ್ದರೂ ಅಧ್ಯಕ್ಷ ಸಹಿ ಮಾಡದ ಕಾರಣ ಈವರೆಗೆ ಸಂಬಳ ಆಗಿಲ್ಲ. ಸಂಬಳವನ್ನೇ ನಂಬಿಕೊಂಡಿರುವ 90ಕ್ಕೂ ಅಧಿಕ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಸಂಬಳವಿಲ್ಲದೇ ಸರಿಯಾಗಿ ದೀಪಾವಳಿ ಆಚರಿಸಲೂ ಆಗಿಲ್ಲ. ಇದಕ್ಕೆಲ್ಲ ಕಾರಣ ಸಂಸ್ಥೆಯ ಅಧ್ಯಕ್ಷರು ಎಂದು ಪ್ರತಿಭಟನಾಕಾರರು ಆರೋಪಿಸಿದರು. ಶಿಕ್ಷಕರ ಪ್ರತಿಭಟನೆಗೆ ಲಯನ್ಸ್ ಕ್ಲಬ್ ಸದಸ್ಯರು ಸಾಥ್ ನೀಡಿದರು. ಶಿಕ್ಷಕರು ಮತ್ತು ಅಧ್ಯಕ್ಷರ ನಡುವಿನ ಜಗಳದಿಂದ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದೆ. ಅಪ್ಪ- ಮಕ್ಕಳ ಜಗಳದಲ್ಲಿ ಕೂಸು ಬಡವಾಯಿತು ಎಂಬಂಥ ವಾತಾವರಣ ನಿರ್ಮಾಣವಾಗಿದೆ. ಈ ಸಮಸ್ಯೆ ಬಗೆಹರಿದು ಸುಸೂತ್ರವಾಗಿ ಶಾಲೆ ನಡೆಸಲಿ ಎಂಬುದು ಪಾಲಕರ ಆಶಯವಾಗಿದೆ.

    ಅಧ್ಯಕ್ಷರ ರಾಜೀನಾಮೆಗೆ ಪಟ್ಟು

    ಮೂರು ತಿಂಗಳಿಂದ ಸಂಬಳ ಆಗದ ಕಾರಣ ನ.15ರಂದೇ ಶಾಲೆಯ ಸಿಬ್ಬಂದಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ, ಮಧ್ಯಪ್ರವೇಶಿಸಿದ್ದ ಜಿಲ್ಲಾಡಳಿತ ಸಂಬಳ ಕೊಡಿಸುವುದಾಗಿ ಭರವಸೆ ನೀಡಿತ್ತು. ಗುರುವಾರ ಏಕಾಏಕಿ ಸಿಬ್ಬಂದಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಆರಂಭಿಸಿದರು. ಸ್ಥಳಕ್ಕೆ ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ಹಾಗೂ ಬಿಇಒ ಮೌನೇಶ ಬಡಿಗೇರ ಆಗಮಿಸಿ ಅಧ್ಯಕ್ಷ ಎಸ್.ಕೆ.ಮುದಗಲ್ಲ ಸೇರಿದಂತೆ ಪದಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಚರ್ಚಿಸಿದರು. ಈ ವೇಳೆ ಪ್ರತಿಭಟನಾಕಾರರು ಅಧ್ಯಕ್ಷರ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಕರಿಗೆ ಕನಿಷ್ಠ ಗೌರವ ಕೊಡದ ಅಧ್ಯಕ್ಷರು, ಶಾಲೆಯ ಮರ್ಯಾದೆ ಹಾಳು ಮಾಡುತ್ತಿದ್ದಾರೆ. ಇವರು ಈ ಹುದ್ದೆಯಲ್ಲಿ ಮುಂದುವರೆಯುವುದು ಬೇಡ ಎಂದು ಪಟ್ಟು ಹಿಡಿದರು. ಪ್ರತಿಭಟನೆಗೆ ಮಣಿದ ಅಧ್ಯಕ್ಷ ಮುದಗಲ್ಲ ಮೂರು ತಿಂಗಳ ಸಂಬಳದ ಚೆಕ್‌ಗೆ ಕೊನೆಗೂ ಸಹಿ ಮಾಡಿದರು. ಸಂಬಳ ಒಂದು ದಿನದಲ್ಲಿ ಜಮೆಯಾಗಲಿದೆ. ಕಡಿಮೆ ವೇತನ, ಎಎಸ್‌ಐ, ಪಿಎಫ್ ಸೇರಿದಂತೆ ಮತ್ತಿತರ ಸೌಲಭ್ಯಗಳ ಕುರಿತು ಪರಿಶೀಲಿಸಲಾಗುವುದು ಎಂದು ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ಹೇಳಿದರು.

    ಕೋಟ್:
    ಕೋರ್ಟ್‌ನಲ್ಲಿ ಪ್ರಕರಣವೊಂದು ಬಾಕಿ ಇರುವ ಕಾರಣ ಶಾಲೆ ಖಾತೆ ಹೊಂದಿರುವ ಬ್ಯಾಂಕ್ ಮೂಲಕ ನೌಕರರಿಗೆ ಸಂಬಳ ಜಮೆ ಮಾಡಲು ಆಗಿರಲಿಲ್ಲ. ಈಗ ಎಫ್‌ಡಿ ಕ್ಯಾನ್ಸಲ್ ಮಾಡಿಸಿ ಸಂಬಳ ಮಾಡಿಸಲು ಕ್ರಮ ಕೈಗೊಂಡಿದ್ದೇವೆ.
    ಎಸ್.ಕೆ.ಮುದಗಲ್ಲ, ಅಧ್ಯಕ್ಷ, ಲಯನ್ಸ್ ಶಿಕ್ಷಣ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts