More

    ಓಲೇಕಾರ ವಿರುದ್ಧ ವೀರಶೈವ ಮಹಾಸಭಾ ಗುಡುಗು; ಮನೆಗೆ ನುಗ್ಗಲು ಯತ್ನ, ಹಲವರ ಬಂಧನ

    ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕ ನೆಹರು ಓಲೇಕಾರ ವಿರುದ್ಧ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಹಾಗೂ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದಿಂದ ನಗರದಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
    ಶನಿವಾರ ನಡೆದ ಬೆಂಬಲಿಗರ ಸಭೆಯಲ್ಲಿ ಶಾಸಕ ನೆಹರು ಓಲೇಕಾರ ಸಿಎಂ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅವರು ನಿಂದಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ವೀರಶೈವ ಮಹಾಸಭಾ ನೇತೃತ್ವದಲ್ಲಿ ಭಾನುವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡರು, ಸದಸ್ಯರು, ವಿವಿಧ ಸಮುದಾಯಗಳ ಮುಖಂಡರು, ಕಾಂಗ್ರೆಸ್, ಬಿಜೆಪಿ ಮುಖಂಡರು, ಬೊಮ್ಮಾಯಿ ಅಭಿಮಾನಿಗಳು ಪಾಲ್ಗೊಂಡಿದ್ದರು.
    ನಗರದ ಪುರ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ರ‌್ಯಾಲಿ ಆರಂಭಿಸಿದ ನೂರಾರು ಜನ ಎಂ.ಜಿ ರಸ್ತೆ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ತೆರಳಿ ಪ್ರತಿಭಟಿಸಿದರು. ಓಲೇಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
    ಈ ವೇಳೆ ಶಾಸಕ ಓಲೇಕಾರ ಮನೆಗೆ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರರನ್ನು ಹೊಸಮನಿ ಸಿದ್ದಪ್ಪ ವೃತ್ತದಲ್ಲೇ ಪೊಲೀಸರು ತಡೆದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಬ್ಯಾರಿಕೇಡ್ ಇಟ್ಟು ತಡೆಯಲು ಯತ್ನಿಸಿದರೂ ಬಗ್ಗದ 10ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು, ಕೆಲ ಸಮಸಯದ ನಂತರ ಬಿಟ್ಟರು.
    ಕಳೆದ 15, 20 ವರ್ಷಗಳಿಂದ ಪಕ್ಷ ಹಾಗೂ ನಮ್ಮೆಲ್ಲರ ಸಹಾಯ ಪಡೆದು ಶಾಸಕರಾಗಿ, ಆಯೋಗದ ಅಧ್ಯಕ್ಷರಾಗಿ ಎಲ್ಲ ಅಧಿಕಾರ ಅನುಭವಿಸಿ ಟಿಕೆಟ್ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಸಿಎಂ ಅವರನ್ನು ನಿಂದಿಸಿರುವುದು ಸರಿಯಲ್ಲ. ತಕ್ಷಣ ಮಾತು ಹಿಂಪಡೆದು ಕ್ಷಮೆ ಯಾಚಿಸಬೇಕು ಎಂದು ಪ್ರತಿಭಟನಾಕರರು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಹಾವೆಮುಲ್ ಅಧ್ಯಕ್ಷ ಬಸವರಾಜ ಅರಬಗೊಂಡ, ಹಾವೇರಿ ಬಿಜೆಪಿ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣವರ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ವೆಂಕಟೇಶ ನಾರಾಯಣಿ, ಕೆ.ಬಿ.ಮಲ್ಲಿಕಾರ್ಜುನ, ಸೋಮಶೇಖರ ಕೊತ್ತಂಬರಿ, ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
    ಎಂಟು ಕಡೆ ಪ್ರತಿಭಟನೆ
    ಸಿಎಂ ವಿರುದ್ಧದ ನೆಹರು ಓಲೇಕಾರ ಹೇಳಿಕೆ ಖಂಡಿಸಿ ಭಾನುವಾರ ಎಂಟು ಕಡೆಗಳಲ್ಲಿ ಪ್ರತರಿಭಟನೆ ನಡೆದಿದೆ. ತಮ್ಮದೇ ಆದ ಕೆಲ ಜನರನ್ನು ಇಟ್ಟುಕೊಂಡು ಸಿಎಂಗೆ ಅಪಮಾನ ಮಾಡಿರುವುದನ್ನು ನಾಡಿನ ಜನರು ಕ್ಷಮಿಸಲ್ಲ. ವೈಯಕ್ತಿಕ ನಿಂದನೆ, ತಾಯಿ ಬಗ್ಗೆ ಅವಹೇಳನಕಾರಿ ಮಾತು ಅಕ್ಷಮ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದರು.
    ಕೂಡಲೇ ಬಂಧಿಸಿ
    ನಾಡಿನ ದೊರೆ ಬಗ್ಗೆ ಇಷ್ಟು ಹಗುರವಾಗಿ ಮಾತನಾಡಿರುವ ಶಾಸಕ ಓಲೇಕಾರನನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಬಂಧಿಸದಿದ್ದರೆ ನಾವೇ ಮನೆಗೆ ಮುತ್ತಿಗೆ ಹಾಕಿ ಕರೆತರುತ್ತೇವೆ. ಈ ಕೂಡಲೇ ಸಿಎಂ ಅವರನ್ನು ಓಲೇಕಾರ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ರಾಣೆಬೆನ್ನೂರ ಶಾಸಕ ರುಣಕುಮಾರ ಪೂಜಾರ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts