More

    ಬಸವರಾಜ ಊರು ತೊರೆದು 15 ವರ್ಷಗಳಾಗಿವೆ; ಖಾನಾಪುರ ಬಳಿ ಹಸಿವಿನಿಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ; ಸರ್ಕಾರಕ್ಕೆ ಹಾವೇರಿ ಡಿಸಿ ವರದಿ

    ಹಾವೇರಿ: ತುತ್ತು ಅನ್ನವೂ ಸಿಗದೇ ಮನನೊಂದು ಜ.31ರಂದು ಬೆಳಗಾವಿ ಜಿಲ್ಲೆಯ ಖಾನಾಪುರ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾದ ಬಸವರಾಜ ವೆಂಕಪ್ಪ ಬುಡಗಟ್ಟಿ (30) ಹಾವೇರಿ ಜಿಲ್ಲೆ ಸವಣೂರ ತಾಲೂಕಿನ ಡೊಂಬರಮತ್ತೂರಿನ ನಿವಾಸಿಯಾಗಿದ್ದು, ಈತನಿಗೆ ತಂದೆ- ತಾಯಿ ಇಬ್ಬರೂ ಇದ್ದು, ಇದೇ ಗ್ರಾಮದಲ್ಲಿ ವಾಸವಾಗಿದ್ದಾರೆ ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
    ಜ.31ರಂದು ಬಸವರಾಜ ಮೃತಪಟ್ಟಿದ್ದ. ಆತ ಅನ್ನ ಸಿಗದೇ ತಾಯಿಯ ಹಸಿವು ನೀಗಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದ ಎನ್ನಲಾಗಿತ್ತು. ಬಳಿಕ ತನಿಖೆ ನಂತರ ಬೆಳಗಾವಿ ಪೊಲೀಸರು ಆತನೊಂದಿಗೆ ಇದ್ದವಳು ತಾಯಿ ಅಲ್ಲ ಎಂದು ತಿಳಿಸಿದ್ದರು. ಈತ ಮೂಲತಃ ಹಾವೇರಿ ತಾಲೂಕು ಯಲಗಚ್ಚ ಗ್ರಾಮದವನಾದ್ದರಿಂದ ಹಾವೇರಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸವಣೂರ ತಾಲೂಕು ತಹಸೀಲ್ದಾರ್ ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಿದ್ಧಪಡಿಸಿದ್ದಾರೆ.
    ಬಸವರಾಜನ ತಂದೆ ವೆಂಕಪ್ಪ ಬುಡಗಟ್ಟಿ ಮೂಲತಃ ಹಾವೇರಿ ತಾಲೂಕು ಯಲಗಚ್ಚ ಗ್ರಾಮದವರು. ತಾಯಿ ನೀಲವ್ವ ವೆಂಕಪ್ಪ ಬುಡಗಟ್ಟಿ ಸವಣೂರ ತಾಲೂಕು ಡೊಂಬರಮತ್ತೂರ ಗ್ರಾಮದವರು. ಎಲ್ಲರೂ ಡೊಂಬರಮತ್ತೂರಿನಲ್ಲೇ ವಾಸವಾಗಿದ್ದಾರೆ. ಬಸವರಾಜನಿಗೆ ಅಕ್ಕ ಹಾಗೂ ಓರ್ವ ಸಹೋದರನೂ ಇದ್ದಾರೆ. ಕಳೆದ 15 ವರ್ಷಗಳಿಂದ ಬಸವರಾಜ ಊರಿನಲ್ಲಿ ವಾಸವಾಗಿಲ್ಲ. ಕೆಲಸಕ್ಕೆಂದು ಊರು ತೊರೆದಿದ್ದ.
    ಬಸವರಾಜನ ತಂದೆ- ತಾಯಿ ಹೆಸರಲ್ಲಿ ಬಿಪಿಎಲ್ ಕಾರ್ಡ್ ಇದ್ದು ಪ್ರತಿ ತಿಂಗಳು ಅಕ್ಕಿ, ಹೆಚ್ಚುವರಿ ಅಕ್ಕಿಯ ಹಣವನ್ನೂ ಪಡೆಯುತ್ತಿದ್ದಾರೆ. ಸರ್ಕಾರದ ಯೋಜನೆಯಲ್ಲಿ ಮನೆ ಹಂಚಿಕೆಯಾಗಿದ್ದು, ಸ್ವಂತ ಮನೆಯಲ್ಲಿ ವಾಸವಾಗಿದ್ದಾರೆ. ನರೇಗಾ ಕಾರ್ಡ್, ಗೃಹಜ್ಯೋತಿ ಫಲಾನುಭವಿಗಳೂ ಆಗಿದ್ದಾರೆ. ವೆಂಕಪ್ಪ ವೃದ್ಯಾಪ್ಯ ವೇತನವನ್ನೂ ಪಡೆಯುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಈ ವರದಿಯನ್ನು ಡಿಸಿ ರಘುನಂದನ ಮೂರ್ತಿ ಅವರು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಯವರಿಗೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts