More

    ಬಾರದ ಲೋಕಕ್ಕೆ ‘ಹಾವೇರಿ ಕಾ ರಾಜಾ’; ಕಂಬನಿ ಮಿಡಿದ ಯಾಲಕ್ಕಿ ನಗರಿ ಜನತೆ

    ಹಾವೇರಿ: ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಮಿಂಚಿನ ಓಟದ ಮೂಲಕ ಯಾಲಕ್ಕಿ ಕಂಪಿನ ನಗರಿಯ ಜನರ ಮನಸ್ಸು ಗೆದ್ದಿದ್ದ ‘ಹಾವೇರಿ ಕಾ ರಾಜಾ-49’ ಹೆಸರಿನ ಕೊಬ್ಬರಿ ಹೋರಿ ಶುಕ್ರವಾರ ಬಾರದ ಲೋಕಕ್ಕೆ ತೆರಳಿದೆ.
    ನಗರದ ಕಲ್ಲು ಮಂಟಪ ಓಣಿಯ ನಿವಾಸಿಗಳಾದ ಜಗದೀಶ ಕನವಳ್ಳಿ ಹಾಗೂ ರಾಜು ಕನವಳ್ಳಿ ಕುಟುಂಬದವರು ಪ್ರೀತಿಯಿಂದ ಸಾಕಿ ಸಲುಹಿದ್ದ 22 ವರ್ಷದ ಹೋರಿ ಅನಾರೋಗ್ಯಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದೆ. ಸ್ವಂತ ಮಗನಂತೆ ಸಕಿದ್ದ ಈ ಹೋರಿ ನಿಧನಕ್ಕೆ ಕುಟುಂಬದವರು ಸೇರಿದಂತೆ ನೂರಾರು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
    ಹಾವೇರಿ ಕಾ ರಾಜಾ ಹಾವೇರಿ, ಅಕ್ಕಿ ಆಲೂರು, ಹಾನಗಲ್ಲ, ಶಿರಸಿ, ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಜರುಗಿದ ನೂರಾರು ಕೊಬ್ಬರಿ ಹೋರಿ ಸ್ಪರ್ಧೆಗಳಲ್ಲಿ 40 ಗ್ರಾಂ ಚಿನ್ನದ ಪದ, ಎರಡು ಬೈಕ್, ನಾಲ್ಕು ಟ್ರಜರಿ, ಸೈಕಲ್, ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿತ್ತು. ಈ ಹೋರಿ ಅಖಾಡಕ್ಕೆ ಹೊರಟರೆ ಎಲ್ಲರ ಕಣ್ಣು ಇದರ ಮೇಲೆ ಇರುತ್ತಿತ್ತು.
    ಹೀಗೆ ಎಲ್ಲರ ಪ್ರೀತಿ ಗಳಿಸಿದ್ದ ಹೋರಿ ನಿಧನಕ್ಕೆ ಹಾವೇರಿ ಜನತೆ, ಅಭಿಮಾನಿ ಬಳಗದವರು ಕಣ್ಣೀರಿನ ವಿದಾಯ ಹೇಳಿದರು. ನಗರದ ಕಲ್ಲು ಮಂಟಪ ಓಣಿಯ ಬಸವೇಶ್ವರ ದೇವಸ್ಥಾನದಿಂದ ಪೂಜೆ ನೆರವೇರಿಸಿ, ವಾದ್ಯ ಮೇಳದೊಂದಿಗೆ ಎಂ.ಜಿ. ರಸ್ತೆ, ಪಿ.ಬಿ. ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಪಿಬಿ ರಸ್ತೆಯ ಕನವಳ್ಳಿ ಅವರ ಜಮೀನಿನಲ್ಲಿ ಶಾಸ್ತ್ರೋಕ್ತವಾಗಿ ಅಂತಿಮ ವಿಧಿ ವಿಧಾನ ನೆರವೇರಿಸಿದರು.
    ಈ ವೇಳೆ ಚನ್ನಬಸಯ್ಯ ಯಳಂಬಲಿಮಠ, ಶಿವಯೋಗಿ ಹೂಗಾರ, ಸಂಪತಕುಮಾರಿ ಹಿರೇಮಠ, ಸೇರಿದಂತೆ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

    ದೈವ ಸ್ವರೂಪಿ ಹೋರಿ:
    ಬಸವಣ್ಣನ ದೈವ ಸ್ವರೂಪಿ ಹಾವೇರಿ ಕಾ ರಾಜಾನನ್ನು 12 ವರ್ಷದಿಂದ ನಮ್ಮ ಮನೆ ಮಗನಂತೆ ಸಾಕಿದ್ದೆವು. ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರೂ ಕಾಳಜಿಯಿಂದ ನೋಡಿಕೊಂಡಿದ್ದೆವು. ಆದರೂ ಆತ ಬದುಕಲಿಲ್ಲ. ಮನೆಯ ಸದಸ್ಯನನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ.
    ಜಗದೀಶ ಕನವಳ್ಳಿ, ಹೋರಿ ಮಾಲೀಕ, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts