More

    ಇಂದಿರಾ ಕ್ಯಾಂಟೀನ್‌ಗೂ ಕಮಿಷನ್ ಕಾಟ ! ; ಬಿಲ್ ಪಾವತಿಗೆ ಪರ್ಸೆಂಟ್ ಕಮಿಷನ್ ಕೇಳಿದ ಅಧಿಕಾರಿಗಳು; ಟೆಂಡರ್ ರದ್ದತಿಗೆ ಡಿಸಿಗೆ ಪತ್ರ ಬರೆದ ವಿಶ್ವನಾಥ ರೆಡ್ಡಿ

    ಕೇಶವಮೂರ್ತಿ ವಿ.ಬಿ. ಹಾವೇರಿ

    ಮೈಸೂರು ದಸರಾದಲ್ಲಿ ಕಾರ್ಯಕ್ರಮ ನೀಡಲು ಖ್ಯಾತ ಸಾರೋದ್ ವಾದಕ ಪದ್ಮಶ್ರೀ ಪಂಡಿತ್ ತಾರಾನಾಥ ಅವರ ಬಳಿ ಅಧಿಕಾರಿಗಳು ಕಮಿಷನ್ ಕೇಳಿದ ಸುದ್ದಿ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್‌ನ ಬಿಲ್ ಪಾವತಿಗೂ ಅಧಿಕಾರಿಗಳು ಶೇ.10ರಷ್ಟು ಕಮಿಷನ್ ಕೇಳಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
    ಜಿಲ್ಲೆಯ ಹಾವೇರಿ, ಹಿರೇಕೆರೂರ ಹಾಗೂ ರಾಣೆಬೆನ್ನೂರಿನ ಮೂರು ಇಂದಿರಾ ಕ್ಯಾಂಟೀನ್‌ಗಳ ಒಂದು ವರ್ಷದ 35 ಲಕ್ಷ ರೂ.ಗೂ ಅಧಿಕ ಬಿಲ್ ಬಾಕಿ ಇದೆ. ಬಿಲ್ ಬಿಡುಗಡೆ ಮಾಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಥಳೀಯ ಸಂಸ್ಥೆಗಳಾದ ಹಾವೇರಿ ನಗರಸಭೆ, ರಾಣೆಬೆನ್ನೂರ ನಗರಸಭೆ ಹಾಗೂ ಹಿರೇಕೆರೂರ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಬಾಕಿ ಬಿಲ್ ಕ್ಲಿಯರ್ ಮಾಡಬೇಕೆಂದರೆ ಶೇ.10ರಷ್ಟು ಕಮಿಷನ್ ಕೊಡಬೇಕು ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಮೂರೂ ಇಂದಿರಾ ಕ್ಯಾಂಟೀನ್ ನಡೆಸುತ್ತಿರುವ ಯಾದಗಿರಿ ಜಿಲ್ಲೆ ಶಹಾಪುರದ ನಿರ್ಮಲಾ ದೇವಿ ಮಹಿಳಾ ಮಂಡಳದ ಕಾರ್ಯದರ್ಶಿ ವಿಶ್ವನಾಥ ರೆಡ್ಡಿ ದರ್ಶನಾಪುರ ನೇರವಾಗಿ ಆರೋಪಿಸಿದ್ದಾರೆ.
    ನಾನೇ ಐದು ಲಕ್ಷ ರೂ. ಡೆಪಾಸಿಟ್ ಮಾಡಿದ್ದೇನೆ. ರಾಣೆಬೆನ್ನೂರ ಕ್ಯಾಂಟೀನ್‌ಗೆ 2 ಲಕ್ಷ ರೂ. ಖರ್ಚು ಮಾಡಿ ಕೆಲ ಅಗತ್ಯ ವಸ್ತುಗಳನ್ನು ತರಿಸಿದ್ದೇನೆ. ಎಲ್ಲ ಹಣವನ್ನೂ ನಾನೇ ಕೈಯಿಂದ ಖರ್ಚು ಮಾಡಿ ಉದ್ಘಾಟನೆ ಮಾಡಿಸಿದ್ದೇನೆ. ಈವರೆಗೂ ಸರ್ಕಾರದಿಂದ ನನಗೆ ಒಂದು ರೂಪಾಯಿಯೂ ಬಂದಿಲ್ಲ. ಎರಡು ತಿಂಗಳಿಂದ ಕ್ಯಾಂಟೀನ್ ಸಿಬ್ಬಂದಿಗೆ ಸಂಬಳವನ್ನೂ ನೀಡಿಲ್ಲ. ಇದರಿಂದಾಗಿ ಕ್ಯಾಂಟೀನ್‌ಗಳು ಆಗಾಗ ಬಂದ್ ಆಗುತ್ತಿವೆ ಎನ್ನುತ್ತಾರೆ ವಿಶ್ವನಾಥ ರೆಡ್ಡಿ.
    ಆಗಸ್ಟ್ 5, 2022ರಂದು ಜಿಲ್ಲಾಧಿಕಾರಿಯವರು ನಮ್ಮ ಸಂಸ್ಥೆಗೆ ಟೆಂಡರ್ ನೀಡಿದ್ದು, ಇದೀಗ ಟೆಂಡರ್ ಅವಧಿ ಮುಗಿದಿದೆ. ಸಂಸ್ಥೆಯಿಂದ ಭರಿಸಿದ ವೆಚ್ಚ ಈವರೆಗೆ ಸಂದಾಯವಾಗದ ಕಾರಣ ಕ್ಯಾಂಟೀನ್ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಮ್ಮ ಸಂಸ್ಥೆಯ ಟೆಂಡರ್ ಆದೇಶವನ್ನು ರದ್ದುಪಡಿಸಿ ಎಂದು ಜಿಲ್ಲಾಧಿಕಾರಿಯವರಿಗೆ ಆಗಸ್ಟ್ 10, 2023ರಂದು ವಿಶ್ವನಾಥ ರೆಡ್ಡಿ ಪತ್ರ ಬರೆದಿದ್ದಾರೆ.
    ಕೂಲಿ ಕಾರ್ಮಿಕರು, ಬಡ ಶ್ರಮಿಕ ವರ್ಗದವರ ಹಸಿವು ನೀಗಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ನಡೆದಿರುವ ಕಮಿಷನ್ ದಂಧೆಗೆ ಸಿಎಂ ವಿಶೇಷ ಮುತುವರ್ಜಿ ವಹಿಸಿಕೊಂಡು ಬ್ರೇಕ್ ಹಾಕಬೇಕು. ಸುಸೂತ್ರವಾಗಿ ಕ್ಯಾಂಟೀನ್ ನಡೆಯುವಂತೆ ಕ್ರಮ ಜರುಗಿಸಬೇಕಿದೆ.

    80 ಸಾವಿರ ರೂ. ಪಡೆದ ಕಮಿಷನರ್ !
    ಹಿರೇಕೆರೂರ ಪಟ್ಟಣ ಪಂಚಾಯಿತಿಯ ಹಿಂದಿನ ಕಮಿಷನರ್ ಇಂದಿರಾ ಕ್ಯಾಂಟೀನ್ ಬಿಲ್ ಕ್ಲಿಯರ್ ಮಾಡಲು 1 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. 40 ಸಾವಿರ ರೂ. ಕೊಟ್ಟರೆ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಶೇ.10 ಪರ್ಸೆಂಟ್ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದರು. ಕೊನೆಗೆ 80 ಸಾವಿರ ರೂ. ಪಡೆದುಕೊಂಡರೂ ಬಿಲ್ ಕ್ಲಿಯರ್ ಮಾಡಲಿಲ್ಲ. ಕೆಲ ದಿನಗಳ ನಂತರ ಲೋಕಾಯುಕ್ತ ಪ್ರಕರಣವೊಂದರಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದರು. ಹಾವೇರಿ ಹಾಗೂ ರಾಣೆಬೆನ್ನೂರ ನಗರಸಭೆಯ ಅಧಿಕಾರಿಗಳೂ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದು, ಈವರೆಗೂ ಬಿಲ್ ಕ್ಲಿಯರ್ ಮಾಡಿಲ್ಲ ಎಂದು ವಿಶ್ವನಾಥ ರೆಡ್ಡಿ ಆರೋಪಿಸಿದ್ದಾರೆ.

    ಕೋಟ್:
    ಬಡವರಿಗೆ ಅನುಕೂಲವಾಗಲಿ ಎಂಬ ಸಿಎಂ ಸಿದ್ದರಾಮಯ್ಯನವರ ಕನಸಿಗೆ ಸ್ಥಳೀಯ ಸಂಸ್ಥೆಯ ಕೆಲ ಅಧಿಕಾರಿಗಳು ಉಲ್ಟಾ ಇದ್ದಾರೆ. ಸೇವೆ ಎಂಬ ಪದಕ್ಕೆ ತದ್ವಿರುದ್ಧವಾಗಿದ್ದಾರೆ. ಒಂದು ವರ್ಷದಿಂದ ಬಾಕಿ ಇರುವ ಸುಮಾರು 35 ಲಕ್ಷ ರೂ. ಹಣ ಪಾವತಿಸಲು ಶೇ.10ರಷ್ಟು ಕಮಿಷನ್ ಕೇಳುತ್ತಿದ್ದಾರೆ. ಇನ್ನಾದರೂ ಸರ್ಕಾರ ಬಾಕಿ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕು. ನನಗೆ ನ್ಯಾಯ ಕೊಡಿಸಬೇಕು.
    ವಿಶ್ವನಾಥ ರೆಡ್ಡಿ ದರ್ಶನಾಪುರ, ಇಂದಿರಾ ಕ್ಯಾಂಟೀನ್ ಟೆಂಡರ್‌ದಾರ

    ಕೋಟ್:
    ಡಿಯುಡಿಸಿಯಿಂದ ನನಗೆ ಮಾಹಿತಿ ಬಂದ ಪ್ರಕಾರ ಟೆಂಡರ್‌ದಾರರು ಈವರೆಗೆ ಬಿಲ್ ಸಬ್‌ಮಿಟ್ ಮಾಡಿಲ್ಲ. ಒಂದು ಬಾರಿಯೂ ಅವರು ನನ್ನನ್ನು ಭೇಟಿ ಮಾಡಿಲ್ಲ. ಈ ಸಮಸ್ಯೆ ಕುರಿತು ನನ್ನ ಗಮನಕ್ಕೆ ತಂದಿಲ್ಲ. ಬಿಲ್ ಸಬ್‌ಮಿಟ್ ಮಾಡಿ ನನ್ನನ್ನು ಭೇಟಿಯಾದರೆ ಕೂಡಲೇ ಸಮಸ್ಯೆ ಬಗೆಹರಿಸುತ್ತೇನೆ.
    ರಘುನಂದನ ಮೂರ್ತಿ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts