More

    ಸಮಾಜಕ್ಕಾಗಿ ಬದುಕಿದವರು ಲಿಂ. ಶಿವಲಿಂಗ ಸ್ವಾಮೀಜಿ; ರುದ್ರಪ್ಪ ಲಮಾಣಿ

    ಹಾವೇರಿ: ಸಂತ ಮಹಾತ್ಮರು ಮಾಡುವ ಅನುಷ್ಠಾನದ ಬಲದಿಂದ ಗಳಿಸುವ ಶಕ್ತಿಯನ್ನು ಭಕ್ತರ ಉದ್ಧಾರಕ್ಕಾಗಿ ಬಳಸಿ, ಸಮಾಜದ ಉದ್ಧಾರವೇ ಮಹಾತ್ಮರ ಜೀವನದ ಪರಮ ಗುರಿ ಎಂದು ಭಾವಿಸಿ, ವಿರಕ್ತ ಪರಂಪರೆಗೆ ಮಾದರಿಯಾಗಿ ಬದುಕಿದವರು ಹುಕ್ಕೇರಿಮಠ ಲಿಂ. ಶಿವಲಿಂಗ ಸ್ವಾಮೀಜಿ ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
    ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಿಂ. ಶಿವಲಿಂಗ ಸ್ವಾಮೀಜಿ 107ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಜಗತ್ತಿನಲ್ಲಿನ ಎಲ್ಲ ಧರ್ಮಗಳು, ಮತ್ತು ಧರ್ಮ ಗುರುಗಳು ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿದರೆ, ಮಾನವೀಯತೆ ಮತ್ತು ಕಾಯಕ ಸಿದ್ಧಾಂತವನ್ನು ಪ್ರತಿಪಾದಿಸಿದ ಏಕೈಕ ಧರ್ಮಗುರು ಎಂದರೆ ಅವರು ಮಹಾನ್ ಮಾನವತಾವಾದಿ ಬಸವಣ್ಣನವರು, ಅಂತಹ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ, ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದೆ ಎಂದರು.
    ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಅರಿವಿನ ಬೆಳಕು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾಯಿಸಬೇಕು. ಅಂತಹ ಅರಿವಿನ ಬೆಳಕನ್ನು ತೋರಿದ ಲಿಂ.ಶಿವಲಿಂಗ ಸ್ವಾಮೀಜಿ ನನಗೆ ಯಾವಾಗಲೂ ಆಧ್ಯಾತ್ಮಿಕ ಗುರುವಾಗಿದ್ದು, ಸದಾ ಸನ್ಮಾರ್ಗವನ್ನು ತೋರಿದ್ದಾರೆ. ಅವರ ಆಶೀರ್ವಾದವೇ ನನ್ನ ಸರ್ವತೋಮುಖ ಬೆಳವಣಿಗೆಗೆ ಕಾರಣ ಎಂದರು.
    ಕರಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜಯೋಗಿ ಸೇವಾ ಸಮಿತಿ, ರೆಡ್ ಕ್ರಾಸ್ ಸಂಸ್ಥೆ ಹಾಗೂ ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ ಜರುಗಿತು. ಕಾಂತೇಶ ತಳವಾರ ಶ್ರೀಗಳ ಕುರಿತು ಉಪನ್ಯಾಸ ನೀಡಿದರು.
    ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಎಸ್.ಎಸ್. ಮುಷ್ಠಿ, ಸಂಜಯ ಕೋರೆ, ಪಿ.ಡಿ. ಶಿರೂರ, ಆನಂದ ಅಟವಾಳಗಿ, ವಿಜಯ ಕೂಡ್ಲಪ್ಪನವರ, ರವಿ ಹಿಂಚಿಗೇರಿ, ರತ್ನಾ ಪುನಿತ್, ಮಹಾಂತೇಶ ಮಳಿಮಠ, ಆರ್.ಎಸ್. ಮಾಗನೂರ, ಜಗದೀಶ ತುಪ್ಪದ, ಶಿವಯೋಗಿ ವಾಲಿಶೆಟ್ಟರ, ಎಸ್.ಎಸ್.ಮಠಪತಿ, ನಿರಂಜನ ತಾಂಡೂರ, ಎಸ್.ವಿ.ಹಿರೇಮಠ, ಎಸ್.ಬಿ.ಅಣ್ಣಿಗೇರಿ, ಡಾ.ಸವಿತಾ ಹಿರೇಮಠ, ಚನ್ನಮ್ಮ ಅಂತರವಳ್ಳಿ, ರೇಣುಕಾ ಮಡಿವಾಳರ ಮತ್ತಿತರರು ಉಪಸ್ಥಿತರಿದ್ದರು.
    ವೀರಣ್ಣ ಅಂಗಡಿ ಸ್ವಾಗತಿಸಿದರು. ಎಸ್.ಎನ್. ಮಳೆಪ್ಪನವರ ನಿರೂಪಿಸಿದರು. ಎಸ್.ವಿ. ಹಿರೇಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts