More

    ಕೋಟಿ ರೂಪಾಯಿಗೆ ಹಾನಗಲ್ಲ ಮಠದ ಆಸ್ತಿ ಅಡಮಾನ ?; ಹುಬ್ಬಳ್ಳಿಯ ಮೂಜಗು ಶ್ರೀಗಳಿಗೆ ಭಕ್ತರಿಂದ ಹಲವು ಪ್ರಶ್ನೆ; ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ

    ಹಾವೇರಿ: ಹಾನಗಲ್ಲ ಭಕ್ತರಿಗೆ ಗೊತ್ತಿಲ್ಲದಂತೆ ಹಾನಗಲ್ಲ ಕುಮಾರೇಶ್ವರ ವಿರಕ್ತ ಮಠದ ಆಸ್ತಿಯನ್ನು ಸಹಕಾರಿ ಬ್ಯಾಂಕ್‌ವೊಂದರಲ್ಲಿ ಒಂದು ಕೋಟಿ ರೂ.ಗೆ ತೋರ ಒತ್ತಿ ಇಡಲಾಗಿದೆ ಎಂಬ ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಯಾವ ಉದ್ದೇಶಕ್ಕಾಗಿ ಮಠದ ಆಸ್ತಿ ಒತ್ತೆ ಇಡಲಾಗಿದೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಜಿ ಅವರನ್ನು ಶ್ರೀಮಠದ ಭಕ್ತರು ಸಾಮಾಜಿಕ ಜಾಲತಾಣದ ಮೂಲಕ ಪ್ರಶ್ನಿಸುತ್ತಿದ್ದಾರೆ.
    ಹುಬ್ಬಳ್ಳಿಯ ಮೂಜಗು ಅವರು ಹಾನಗಲ್ಲ ಕುಮಾರೇಶ್ವರ ವಿರಕ್ತ ಮಠಕ್ಕೂ ಪೀಠಾಧಿಕಾರಿಯಾಗಿದ್ದು, ಇಲ್ಲ ಅವರ ಹೆಸರು ಶ್ರೀ ಕುಮಾರಸ್ವಾಮೀಜಿ ಎಂದು ಇದೆ. ಬಾದಾಮಿಯ ವೀರ ಪುಲಕೇಶಿ ಸಹಕಾರ ಬ್ಯಾಂಕ್‌ನಲ್ಲಿ ಮಠದ ಆಸ್ತಿ ಪತ್ರಗಳನ್ನು ತೋರ ಒತ್ತೆ ಇಟ್ಟು ಒಂದು ಕೋಟಿ ರೂ. ಪಡೆಯಲಾಗಿದೆ. ಈ ತೋರ ಒತ್ತೆ ಇಟ್ಟವರು ಯಾರು ? ಯಾವ ಉದ್ದೇಶಕ್ಕಾಗಿ ಹಣ ಪಡೆಯಲಾಗಿದೆ ? ಒತ್ತೆ ಇಡಿಸಿದವರು ಯಾರು ? ಎಂಬಿತ್ಯಾದಿ ಪ್ರಶ್ನೆಗಳು ಈಗ ಉದ್ಭವವಾಗಿವೆ.
    ಶ್ರೀ ಮಠದ ಹಿರಿಯರಿಗೂ ಒಂದು ಕೋಟಿ ರೂ.ಗೆ ಒತ್ತೆ ಇಟ್ಟಿರುವುದು ಗೊತ್ತಿಲ್ಲವಂತೆ. ಮಠದ ಸಲಹಾ ಸಮಿತಿಯ ಕೆಲವರು ಮಠದ ಆಸ್ತಿ ಖರೀದಿಸಿದ್ದಾರೆ. ಹಾನಗಲ್ಲ, ಅಕ್ಕಿಆಲೂರ, ಬೆಳಗಾಲಪೇಟ, ಹುಬ್ಬಳ್ಳಿ, ಹಾವೇರಿ, ಶಿಕಾರಿಪುರ ಸೇರಿದಂತೆ ನಾಡಿನ ಹಲವು ಕಡೆಗಳಲ್ಲಿ ಶ್ರೀಮಠದ ಆಸ್ತಿಗಳಿವೆ. ವಿರಕ್ತ ಮಠಗಳು ಸಮಸ್ತ ಸಮಾಜದ ಆಸ್ತಿಯೋ ಸ್ವಾಮೀಜಿಯ ಆಸ್ತಿಯೋ ? ಎಂದು ಭಕ್ತರು ಜಾಲತಾಣಗಳಲ್ಲಿ ಖಾರವಾಗಿ ಪ್ರಶ್ನಿಸತೊಡಗಿದ್ದಾರೆ.
    ಚಿಟಿಗೆ ಹೊಡೆದರೆ ಕೋಟಿ ರೂ. ತರುವ ಲಕ್ಷ ಲಕ್ಷ ಭಕ್ತರು, ಶ್ರೀಮಠವೆಂದರೆ ಜೀವಕೊಡುವ ಭಕ್ತರು ಇರುವಾಗ ಈ ಪ್ರಮಾದವೇಕೆ ? ವಿಷಯ ಗೊತ್ತಿದ್ದರೂ ಶ್ರೀಮಠದ ಶ್ರೇಯೋಭಿವೃದ್ಧಿಗಾಗಿ ನೇಮಕಗೊಂಡ ಹಿರಿಯರ ಮೌನಕ್ಕೆ ಕಾರಣಗಳೇನು ? ಅಭಿಮಾನವಿದ್ದರೆ ಮಠಕ್ಕೆ ಕೈಲಾದಷ್ಟು ದಾನ ಮಾಡಬೇಕೇ ವಿನಃ, ಮಠದ ಆಸ್ತಿಗಳನ್ನು ಹಣ ಕೊಟ್ಟು ಖರೀದಿಸಿ ಅದನ್ನೇ ಸೇವೆ ಎಂದರೆ ಅದು ಹೇಗೆ ಸೇವೆ ಆದೀತು.. ಎಂಬ ಮಾತುಗಳು ಚರ್ಚೆಯ ಪ್ರಮುಖ ಅಂಶಗಳಾಗಿವೆ.
    ಯಾವ್ಯಾವ ಆಸ್ತಿ ?
    ಹಾನಗಲ್ಲ ವಿರಕ್ತ ಮಠದ 17 ಎಕರೆ ಜಮೀನು, ಕಲ್ಯಾಣ ಮಂಟಪ, ಮಠ, ಕುಮಾರಸ್ವಾಮೀಜಿ ಅವರ ಮೂಲ ಗದ್ದುಗೆ ತೋರ ಒತ್ತೆಯಲ್ಲಿ ಒಳಗೊಂಡಿದೆ ಎಂದು ಶ್ರೀಮಠದ ಭಕ್ತರು ತಿಳಿಸಿದ್ದಾರೆ.

    ಕೋಟ್:
    ಮಠದ ಆಸ್ತಿ ಅಡ ಇಟ್ಟಿರುವುದು ನಿಜ. ಆದರೆ, ಅದರಿಂದ ಮಠದ ಅಭಿವೃದ್ಧಿ ಏನೂ ಮಾಡಿಲ್ಲ. ಯಾವ ಉದ್ದೇಶಕ್ಕೆ ಒತ್ತೆ ಇಡಲಾಗಿದೆ ಎಂಬುದು ಶ್ರೀಮಠದ ಭಕ್ತರೆಲ್ಲರ ಪ್ರಶ್ನೆಯಾಗಿದೆ.
    > ಸಿ.ಎಚ್.ಹಿರೇಮಠ, ಮಠದ ಜಾತ್ರಾ ಮಹೋತ್ಸವ ಕ್ಯಾಶಿಯರ್

    ಕೋಟ್:
    ನಾನು ಶ್ರೀಮಠದ ವಾರಸುದಾರ. ಉತಾರದಲ್ಲಿ ನಾನೇ ಅದರ ಮಾಲೀಕ. ಹಾಗಾಗಿ, ಬ್ಯಾಂಕ್‌ನಲ್ಲಿ ವ್ಯವಹಾರ ಮಾಡಲು ನನಗೆ ಅಧಿಕಾರವಿದೆ. ಸಂದರ್ಭ ಬಂದಿದೆ. ಹಾಗಾಗಿ, ವ್ಯವಹಾರ ಮಾಡಿದ್ದೇವೆ. ಯಾವ ಕಾರಣಕ್ಕೆ ಎಂಬುದು ಆಂತರಿಕ ವಿಷಯ. ಸೂಕ್ತ ಸಮಯದಲ್ಲಿ ಭಕ್ತರ ಹಾಗೂ ಮಠದ ಸಮಿತಿ ಸದಸ್ಯರ ಸಭೆ ಕರೆದು ಅದನ್ನೆಲ್ಲ ಹೇಳಿಕೊಳ್ಳುತ್ತೇವೆ. ಅದನ್ನು ಬಹಿರಂಗಪಡಿಸುವುದು ಏನಿದೆ.
    > ಶ್ರೀ ಕುಮಾರ ಸ್ವಾಮೀಜಿ (ಮೂಜಗು, ಹುಬ್ಬಳ್ಳಿ), ಹಾನಗಲ್ಲ ವಿರಕ್ತ ಮಠದ ಪೀಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts