More

    ಹಾವೇರಿ ಗೋಲಿಬಾರಿಗೆ 12 ವರ್ಷ

    ಹಾವೇರಿ: 12ನೇ ವರ್ಷದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ನಗರದ ಹೊಸಮನಿ ಸಿದ್ದಪ್ಪ ವೃತ್ತದ ಸಮೀಪದಲ್ಲಿರುವ ಹುತಾತ್ಮ ರೈತರಾದ ಸಿದ್ಲಿಂಗಪ್ಪ ಚೂರಿ, ಪುಟ್ಟಪ್ಪ ಹೊನ್ನತ್ತಿ ಅವರ ವೀರಗಲ್ಲಿಗೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಘಟಕದ ವತಿಯಿಂದ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

    ಬೀಜ, ಗೊಬ್ಬರಕ್ಕಾಗಿ ನಡೆದ ಗಲಾಟೆಯಲ್ಲಿ ಗೋಲಿಬಾರ್ ನಡೆದು ಇಂದಿಗೆ 12 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕರೊನಾ ಭೀತಿಯಿಂದಾಗಿ ಸರಳವಾಗಿ ರೈತ ಹುತಾತ್ಮ ದಿನ ಆಚರಿಸಲಾಯಿತು.

    ಸಂಘಟನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಹಾವೇರಿ ಗೋಲಿಬಾರ್ ನಡೆದು 12 ವರ್ಷ ಕಳೆದು 13ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ ಎಂದು ಹೇಳಲು ಮನಸ್ಸಿಗೆ ನೋವಾಗುತ್ತಿದೆ. ಅಂದು ಬೀಜ, ಗೊಬ್ಬರಕ್ಕಾಗಿ ಚಳವಳಿ ಮಾಡುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆದು ಇಬ್ಬರು ರೈತರು ಮೃತಪಟ್ಟಿದ್ದರು. ಹಾಗಾಗಿ ಜೂ. 10ರಂದು ಜಿಲ್ಲೆಯ ಪಾಲಿಗೆ ಕರಾಳ ದಿನವಾಗಿದ್ದು ಆ ದಿನವನ್ನು ರೈತ ಹೋರಾಟ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಕರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.

    ಜಿಲ್ಲೆಯಲ್ಲಿ ತುಂಗಾ ಮೇಲ್ದಂಡೆ ಕಾಲುವೆಗೆ ರೈತರು ಜಮೀನು ಕಳೆದುಕೊಂಡು 18 ವರ್ಷ ಗತಿಸಿದರೂ ಸಾವಿರಾರು ರೈತರಿಗೆ ಇನ್ನೂವರೆಗೂ ಭೂ ಪರಿಹಾರ ಕೊಟ್ಟಿಲ್ಲ. ಅನೇಕ ಸಲ ನೀರಾವರಿ ಇಲಾಖೆ ವಿರುದ್ಧ ಹೋರಾಟ ಮಾಡಿದರೂ ರೈತರಿಗೆ ನ್ಯಾಯ ಸಿಕ್ಕಿಲ್ಲ. ಅಹೋರಾತ್ರಿ ಧರಣಿ ಮಾಡಿದ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲರು ರೈತರಿಗೆ ನ್ಯಾಯ ಕೊಡಿಸುವುದಾಗಿ ಹೇಳಿದ್ದರು. ಅದೂ ಹುಸಿಯಾಗಿದೆ. ಜಮೀನು ಕಳೆದುಕೊಂಡ ರೈತರು ಬೀದಿಪಾಲಾಗಿದ್ದಾರೆ ಎಂದರು.

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹಣ ಸಮರ್ಪಕವಾಗಿ ವಿತರಣೆಯಾಗಿಲ್ಲ. ಶೇ. 30ರಷ್ಟು ರೈತರು ಅವಕಾಶ ವಂಚಿತರಾಗಿದ್ದು, ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ತಕ್ಷಣ ಎಲ್ಲ ರೈತರ ಖಾತೆಗೆ ಹಣ ಜಮಾ ಮಾಡಬೇಕು. ರೈತರು ಸಾಲ ಪಡೆಯಲು ಅವಶ್ಯವಾಗಿರುವ ಉಪನೋಂದಣಿ ಕಚೇರಿಗಳಲ್ಲಿ ರೈತರಿಗೆ ಇಸಿ (ಋಣಭಾರ ಪತ್ರ) ಕೊಡಲು ಕ್ರಮಕೈಗೊಳ್ಳಬೇಕು. ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಾದ ಹತ್ತಿ, ಭತ್ತ, ಮೆಕ್ಕೆಜೋಳಕ್ಕೆ ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಿ ಸರ್ಕಾರವೇ ಖರೀದಿ ಕೇಂದ್ರ ತೆರೆಯಬೇಕು. ಮೆಕ್ಕೆಜೋಳ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ತಕ್ಷಣ ಖರೀದಿ ಕೇಂದ್ರ ತೆರೆಯಬೇಕು ಎಂದರು.

    ಲಾಕ್​ಡೌನ್​ನಿಂದ ಯಾವ ಬೆಳೆಗಳಿಗೂ ಬೆಲೆ ಸಿಗದೇ ರೈತರು ಬೇಕಾಬಿಟ್ಟಿ ದರಕ್ಕೆ ಮಾರಾಟ ಮಾಡಿ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಆದ್ದರಿಂದ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಬೆಳೆ ವಿಮೆಯ ಬಾಕಿ ಹಣ ಕೊಡಿಸಬೇಕು. ಕೃಷಿ ಇಲಾಖೆಯಲ್ಲಿ ಕೃಷಿ ಪರಿಕರಗಳಾದ ಕೂರಿಗೆ ನೇಗಿಲು, ಕಂಟಿವೇಟರ್​ಗಳಿಗೆ ಸಹಾಯಧನ ನಿಲ್ಲಿಸಿದ್ದು, ರೈತರಿಗೆ ಅನಾನುಕೂಲವಾಗಿದೆ. ಕ್ರಿಮಿನಾಶಕ, ಜಿಂಕ್, ಬೋರಾನ್, ಜಿಪ್ಸ್ಂ ಸಿಗುತ್ತಿಲ್ಲ, ಹೀಗಾಗಿ ಕೃಷಿ ಪರಿಕರಗಳಿಗೆ ಸಹಾಯಧನ ಒದಗಿಸಬೇಕು. ಮೆಕ್ಕೆಜೋಳ ಬೆಳೆದ ರೈತರಿಗೆ ರಾಜ್ಯ ಸರ್ಕಾರ 5000 ರೂ. ಪ್ರೋತ್ಸಾಹಧನ ಘೊಷಣೆ ಮಾಡಿದ್ದು, ಸಮರ್ಪಕವಾಗಿ ಎಲ್ಲ ರೈತ ಖಾತೆಗಳಿಗೂ ಜಮಾ ಮಾಡಬೇಕು ಎಂದು ಒತ್ತಾಯಿದರು.

    ರೈತ ಸಂಘಟನೆಯ ಪ್ರಮುಖರಾದ ಅಡಿವೆಪ್ಪ ಆಲದಕಟ್ಟಿ, ಮಂಜುಳಾ ಅಕ್ಕಿ, ಶಿವಬಸಪ್ಪ ಗೋವಿ, ಮಹ್ಮದಗೌಸ್ ಪಾಟೀಲ, ಬಸವನಗೌಡ ಗಂಗಪ್ಪನವರ, ಸುರೇಶ ಚಲವಾದಿ, ಮಾಲತೇಶ ಪರಪ್ಪನವರ, ಕಿರಣಕುಮಾರ ಗಡಿಗೋಳ, ಗಂಗಣ್ಣ ಎಲಿ, ರುದ್ರಗೌಡ ಕಾಡನಗೌಡ್ರ, ಪ್ರಭುಗೌಡ ಪಾಟೀಲ, ಕರಬಸಪ್ಪ ಅಗಸಿಬಾಗಿಲು, ಮರಿಗೌಡ ಪಾಟೀಲ, ಶಂಕ್ರಪ್ಪ ಶಿರಗಂಬಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts