More

    ಎಲ್ಲೆಡೆ ರಂಜಾನ್ ಸಂಭ್ರಮಾಚರಣೆ; ಶುಭ್ರ ಬಟ್ಟೆ ಧರಿಸಿ, ಅಲ್ಲಾಹುವಿಗೆ ವಿಶೇಷ ಪ್ರಾರ್ಥನೆ; ಪರಸ್ಪರ ಶುಭ ಕೋರಿದ ಮುಸ್ಲಿಮರು

    ಹಾವೇರಿ: ಪ್ರೀತಿ, ಭ್ರಾತೃತ್ವ ಹಾಗೂ ಸಮಾನತೆಯ ಸಂದೇಶ ಸಾರುವ, ದಾನ, ಧರ್ಮಗಳ ಪ್ರತೀಕವಾಗಿರುವ ರಂಜಾನ್ (ಈದ್ ಉಲ್ ಫಿತ್ರ್) ಹಬ್ಬವನ್ನು ಗುರುವಾರ ಜಿಲ್ಲೆಯಾದ್ಯಂತ ಮುಸ್ಲಿಂ ಸಮಾಜದವರು ಶ್ರದ್ದೆ, ಭಕ್ತಿ ಹಾಗೂ ಸಡಗರದಿಂದ ಆಚರಿಸಿದರು.
    ರಂಜಾನ್ ಮಾಸ ಪೂರ್ತಿ ಕಠಿಣ ಉಪವಾಸ ವ್ರತಾಚರಣೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಮುಸ್ಲಿಂ ಸಮಾಜದವರು, ಚಂದ್ರ ದರ್ಶನದ ಬಳಿಕ ಗುರುವಾರ ಸಂಭ್ರಮದಿಂದ ಹಬ್ಬ ಆಚರಿಸಿದರು. ಹೊಸ ಬಟ್ಟೆಗಳನ್ನು ಧರಿಸಿ, ಸುಗಂಧ ದ್ರವ್ಯಗಳನ್ನು ಸಿಂಪಡಿಸಿ, ಅತಿಥಿ ಸತ್ಕಾರ, ಪರಸ್ಪರ ಆಲಿಂಗನ, ಹಸ್ತಲಾಘವದಿಂದ ಪರಸ್ಪರ ಶುಭಕೋರಿದರು. ಜ್ಲಿಲೆಯ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ ಸುರಕುಂಬಾ, ಬಿರಿಯಾನಿ, ಮತ್ತಿತರ ವಿವಿಧ ಬಗೆಯ ಆಹಾರ ಸೇವಿಸಿದರು.
    ಬೆಳ್ಳಂ ಬೆಳಗ್ಗೆ ಹಬ್ಬದ ಅಂಗವಾಗಿ ಮಕ್ಕಳಾದಿಯಾಗಿ ಸಹಸ್ರಾರು ಮುಸ್ಲಿಮರು ಶುಭ್ರ ಬಟ್ಟೆ ಧರಿಸಿ, ಹಾವೇರಿ ನಗರದ ಈದ್ಗಾ ಮಸೀದಿ ಮೈದಾನಕ್ಕೆ ಆಗಮಿಸಿದರು. ನಾಡಿನ ಶ್ರೇಯೋಭಿವೃದ್ಧಿಗಾಗಿ ಅಲ್ಲಾಹುವಿಗೆ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಳೆ ಬೆಳೆ ಚೆನ್ನಾಗಿ ಆಗಲಿ. ರೈತರ ಬದುಕು ಹಸನಾಗಲಿ. ಕೆರೆ, ಕಟ್ಟೆಗಳು ತುಂಬಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಧರ್ಮ ಗುರುಗಳು (ಮೌಲ್ವಿಗಳು) ಸಮಾಜ ಬಾಂಧವರಿಗೆ ಹಬ್ಬದ ಮಹತ್ವ ಹಾಗೂ ಇಸ್ಲಾಂ ಧರ್ಮದ ತತ್ವಗಳ ಕುರಿತು ಸಂದೇಶ ಸಾರಿದರು.
    ವೃದ್ಧರು, ಯುವಕರು, ವಿಕಲಚೇತನರು, ಮಕ್ಕಳು ಪಾಲ್ಗೊಂಡಿದ್ದರು ವಿಶೇಷವಾಗಿತ್ತು. ಎಲ್ಲರೂ ಪರಸ್ಪರ ಆಲಿಂಗನ ಮಾಡುವ ಮೂಲಕ ‘ಈದ್ ಮುಬಾರಕ್’ ಎಂದು ಶುಭ ಕೋರಿದರು. ಬಳಿಕ ಆವರಣದಲ್ಲಿದ್ದ ಭಿಕ್ಷುಕರು, ಬಡವರಿಗೆ ದಾನ ಮಾಡಿದರು.
    ಈ ವೇಳೆ ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ, ಉಪಾಧ್ಯಕ್ಷ ಚಮನ್‌ಷರೀಫ್ ಮುಲ್ಲಾ, ಅನ್ವರ್‌ಸಾಬ ಕಡೇಮನಿ, ಕಾರ್ಯದರ್ಶಿ ಮುಜಫರ್ ಕೊಟ್ಟಿಗೇರಿ, ಖಜಾಂಚಿ ಗುಲಾಬ್‌ಹುಸೇನ್ ಬಂಕಾಪುರ, ಸದಸ್ಯರಾದ ಜಮೀರ್ ಜಿಗರಿ, ಬಾಬುಲಾಲ ಬಾಲೇಬಾಯಿ, ಇಸ್ಮಾಯಿಲ್ ಲಭ್ಯೇರ್, ಸಾಧಿಕ್ ಸವಣೂರ, ಖಮರ್ ಕಲ್ಯಾಣಿ, ವಸೀಂ ಸನ್ನುಖಾನವರ, ಹಜರತ್ ಅಲಿ ತಹಶೀಲ್ದಾರ್, ಸಾದಿಕ್ ಮುಲ್ಲಾ, ಉಸಮಾನಸಾಬ ಪಟವೇಗಾರ, ಸಾದಿಕ್ ಕೊತ್ವಾಲ್, ವಲಿ ಅತ್ತಾರ, ಮನಸೂರ ಮುಲ್ಲಾ, ನಪ್ತಾರ್ ಗುಡಗೇರಿ, ಖಾದರ್ ಧಾರವಾಡ, ಸಾದಿಕ್ ಮೇಲಮೂರಿ, ಖಾಸಿಂ ಅಗಡಿ, ಸೇರಿದಂತೆ ಸಾವಿರಾರು ಮುಸ್ಲಿಮರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts