More

    ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ರಶ್ನೋತ್ತರ ಮಾಲಿಕೆ ವಿತರಣೆ; ಡಾ.ಮಹೇಶ ನಾಲವಾಡ ಫೌಂಡೇಶನ್‌ನಿಂದ ಉಚಿತ ಸೇವೆ

    ಹಾವೇರಿ: ಡಾ.ಮಹೇಶ ನಾಲವಾಡ ಪ್ರತಿಷ್ಠಾನದ ವತಿಯಿಂದ ಜಿಲ್ಲೆಯ ಸರ್ಕಾರಿ ಶಾಲೆಗಳ 8,890 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲವಾಗುವ ‘ಕಾಶ್ಯಪ್’ ಹೆಸರಿನ ಪ್ರಶ್ನೋತ್ತರ ಮಾಲಿಕೆಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಫೌಂಡೇಶನ್ ಸಂಸ್ಥಾಪಕ ಡಾ.ಮಹೇಶ ನಾಲವಾಡ ಹೇಳಿದರು.
    ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯದ ನಾಲ್ಕು ವರ್ಷದ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳು. ಎಸ್ಸೆಸ್ಸೆಲ್ಸಿ ನಂತರ ಮುಂದೇನು ? ಎಂಬ ಪ್ರಶ್ನೆಗೆ ದಿಕ್ಸೂಚಿ ಸಲಹೆಗಳು. ಆರೋಗ್ಯ ಸಲಹೆಗಳನ್ನು ಕಾಶ್ಯಪ್ ಮಾಲಿಕೆ ಒಳಗೊಂಡಿದೆ ಎಂದರು.
    ಅಖಂಡ ಧಾರವಾಡ ಜಿಲ್ಲೆಯಲ್ಲಿ ಸುಮಾರು 40 ಸಾವಿರ ಪುಸ್ತಕ ಹಂಚಿಕೆ ಗುರಿ ಇದ್ದು, ಗದಗ ಜಿಲ್ಲೆಯಲ್ಲಿ ಈಗಾಗಲೇ 4,709 ಪುಸ್ತಕ ವಿತರಿಸಲಾಗಿದೆ. ಹಾವೇರಿ ಜಿಲ್ಲೆಯ ಸರ್ಕಾರಿ ಶಾಲೆಯ 11,082 ವಿದ್ಯಾರ್ಥಿಗಳ ಪೈಕಿ ಸದ್ಯಕ್ಕೆ 8,890 ಪುಸ್ತಕ ವಿತರಿಸುತ್ತೇವೆ. ಎರಡನೇ ಹಂತದಲ್ಲಿ ಉರ್ದು ಶಾಲೆ ಮಕ್ಕಳಿಗೂ ತಲುಪಿಸಲಾಗುವುದು. ನಂತರ ಬೇಡಿಕೆಗೆ ಅನುಗುಣವಾಗಿ ಅನುದಾನಿತ ಖಾಸಗಿ ಶಾಲೆಗಳಿಗೆ ನೀಡಲಾಗುವುದು ಎಂದು ವಿವರಿಸಿದರು.
    12 ವರ್ಷಗಳಿಂದ ಸಮಾಜ ಸೇವೆಯಲ್ಲಿ ನಿರತವಾಗಿರುವ ಫೌಂಡೇಶನ್‌ನಿಂದ ಸದೃಢ ಭಾರತಕ್ಕಾಗಿ ಶ್ರವಣ ತಪಾಸಣೆ, ಅಪೌಷ್ಟಿಕತೆ ನಿವಾರಣೆ, ಕೋವಿಡ್ ಸೋಂಕಿನ ಕುರಿತು ಜಾಗೃತಿ, ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಹುಬ್ಬಳ್ಳಿ ಎಪಿಎಂಸಿ ಮಾಜಿ ಅಧ್ಯಕ್ಷ ಬಸಣ್ಣ ಗಾಣಗೇರ, ಅಖಿಲಕುಮಾರ ಹಲಗತ್ತಿ ಇದ್ದರು.
    29ರಂದು ಕಾರ್ಯಕ್ರಮಕ್ಕೆ ಚಾಲನೆ
    ನಗರದ ಹುಕ್ಕೇರಿ ಮಠದ ಕಲ್ಯಾಣ ಮಂಟಪದಲ್ಲಿ ಡಿ.29ರಂದು ಬೆಳಗ್ಗೆ 11 ಗಂಟೆಗೆ ಪುಸ್ತಕ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಡಿಡಿಪಿಐ ಸುರೇಶ ಹುಗ್ಗಿ, ಇತರರು ಪಾಲ್ಗೊಳ್ಳುವರು ಎಂದು ಡಾ.ನಾಲವಾಡ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts