More

    ಬಹು ಬೆಳೆ ಪೈಲಟ್ ಯೋಜನೆಗೆ ಹಾವೇರಿ ಜಿಲ್ಲೆ ಆಯ್ಕೆ

    ಹಾವೇರಿ: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪ್ರಧಾನಮಂತ್ರಿ ರೂಪಿಸಿರುವ ಎಣ್ಣೆ ಹಾಗೂ ಬೆಳೆ ಕಾಳು ಬೆಳೆಗಳ ಬಹು ಬೆಳೆ ಯೋಜನೆಗೆ ಹಾವೇರಿ ಜಿಲ್ಲೆಯನ್ನು ರಾಜ್ಯದಲ್ಲಿ ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

    ಬುಧವಾರ ನಗರದಲ್ಲಿರುವ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕಚೇರಿ ಆವರಣದಲ್ಲಿ ರೈತರಿಗೆ ದ್ವಿದಳ ಧಾನ್ಯಗಳ ಬಿತ್ತನೆ ಬೀಜಗಳ ಕಿಟ್​ಗಳನ್ನು ವಿತರಿಸಿ ಅವರು ಮಾತನಾಡಿದರು.

    ಬಹು ಬೆಳೆ ಪದ್ಧತಿಯನ್ನು ಅನುಸರಿಸಿದರೆ ಒಂದಲ್ಲ ಒಂದು ಬೆಳೆ ರೈತನ ಕೈಹಿಡಿದು ನಿಶ್ಚಿತ ಆದಾಯದ ಜೊತೆಗೆ ರೈತರ ಆದಾಯ ದ್ವಿಗುಣಗೊಳ್ಳುತ್ತದೆ. ರೈತರ ಬದುಕು ಸುಧಾರಿಸುತ್ತದೆ ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ.

    ಮಿಶ್ರ ಬೆಳೆಗೆ ಪ್ರೋತ್ಸಾಹಿಸುವ ಹಾಗೂ ನೆರೆ ಹಾವಳಿ, ಅತಿವೃಷ್ಟಿ, ಅನಾವೃಷ್ಟಿಯಿಂದ ಒಂದು ಬೆಳೆ ನಾಶವಾದರೂ ಇನ್ನೊಂದು ಬೆಳೆ ರೈತರನ್ನು ಕೈಹಿಡಿದು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ಇದು ತಪ್ಪಿಸಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮಂಜೂರಾದ ಬಹು ಬೆಳೆ ಯೋಜನೆಯನ್ನು ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

    ಈ ಯೋಜನೆ ಕುರಿತು ದೇಶದಾದ್ಯಂತ ರೈತರೊಂದಿಗೆ ಕೃಷಿ ಸಚಿವರಾದ ನರೇಂದ್ರಸಿಂಗ್ ತೋಮರ್, ಕೈಲಾಸ್ ಚೌಧರಿ ಅವರು ಬುಧವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಜಿಲ್ಲೆಯ ಪ್ರಗತಿಪರ ರೈತ ಚಂದ್ರಕಾಂತ ಸಂಗೂರ ಭಾಗವಹಿಸಿದ್ದರು ಎಂದರು.

    ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ವಿಶೇಷ ಕಾಳಜಿ ವಹಿಸಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ರಾಜ್ಯದಲ್ಲಿ ಹಾವೇರಿ ಜಿಲ್ಲೆಗೆ ಈ ಯೋಜನೆಯನ್ನು ಮುಂಜೂರು ಮಾಡಿದ್ದಾರೆ. ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಈ ಬೆಳೆಯ ಅಂತರ ಬೆಳೆಯಾಗಿ ಅಥವಾ ಪ್ರತ್ಯೇಕ ಬೆಳೆಯಾಗಿ, ಸೋಯಾ, ತೊಗರಿ, ಶೇಂಗಾ, ಸೂರ್ಯಕಾಂತಿಯಂತಹ ಎಣ್ಣೆ ಹಾಗೂ ದ್ವಿದಳ ಧಾನ್ಯಗಳನ್ನು ಬೆಳದರೆ ನಿಶ್ಚಿತವಾದ ಆದಾಯ ಬರಲಿದೆ ಎಂದರು.

    ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಇತರರು ಉಪಸ್ಥಿತರಿದ್ದರು.

    2,441ಕ್ವಿಂಟಾಲ್ ಬೀಜ ವಿತರಣೆ: ಈ ಯೋಜನೆಯಡಿ ಜಿಲ್ಲೆಗೆ 2,44,44,240 ರೂ.ಗಳ ಮೊತ್ತದ, 2,441 ಕ್ವಿಂಟಾಲ್​ನಷ್ಟು ಅಂದರೆ 33,730 ದ್ವಿದಳ ಧಾನ್ಯಗಳ ಬೀಜಗಳ ಕಿಟ್ ಪೂರೈಕೆಯಾಗಿದೆ. ಅಂದಾಜು ಆರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆಯಬಹುದಾಗಿದೆ. ಎಲ್ಲ ತಾಲೂಕು ರೈತ ಸಂಪರ್ಕ ಕೇಂದ್ರಗಳಲ್ಲಿ ದ್ವಿದಳ ಧಾನ್ಯ ಹಾಗೂ ಎಣ್ಣೆ ಕಾಳುಗಳ ಬಿತ್ತನೆ ಬೀಜಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ಬಿ.ಸಿ. ಪಾಟೀಲ ತಿಳಿಸಿದರು.

    1,600 ಮೆಟ್ರಿಕ್ ಟನ್ ಡಿಎಪಿ ಪೂರೈಕೆ: ರಾಜ್ಯದಲ್ಲಿ ಎಲ್ಲಿಯೂ ಗೊಬ್ಬರದ ಕೊರತೆಯಿಲ್ಲ. ಅನಧಿಕೃತ ದಾಸ್ತಾನು ಮಾಡಿದ ಗೋದಾಮುಗಳನ್ನು ಪತ್ತೆಮಾಡಿ ದಾಳಿ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಧಾರವಾಡ ಜಿಲ್ಲೆಗೆ ಇಂದು ಅಥವಾ ನಾಳೆಯೊಳಗೆ 1,600 ಮೆಟ್ರಿಕ್ ಟನ್ ಡಿಎಪಿ ಸರಬರಾಜಾಗುತ್ತಿದೆ. ಸರ್ಕಾರ ಘೊಷಣೆ ಮಾಡಿದ ಪರಿಹಾರ ಧನಕ್ಕೆ ಶೇ. 75ರಷ್ಟು ರೈತರು ಅರ್ಜಿ ಸಲ್ಲಿಸಿದ್ದಾರೆ. ಉಳಿದ ರೈತರಿಗೆ ತಕ್ಷಣ ವಿತರಿಸಲು ಆದೇಶ ಮಾಡಲಾಗಿದೆ ಎಂದು ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts