More

    ಸಿಎಂಗೆ 2,100 ರೂ. ಚೆಕ್ ವಾಪಸ್ ಕೊಟ್ಟ ರೈತರು; ಹೆಕ್ಟೆರ್‌ಗೆ 17 ಸಾವಿರ ರೂ. ಪರಿಹಾರಕ್ಕೆ ರಾಜ್ಯ ರೈತ ಸಂಘ ಆಗ್ರಹ

    ಹಾವೇರಿ: ಭೀಕರ ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ರಾಜ್ಯ ಸರ್ಕಾರ ಕೇವಲ 2,000 ರೂ. ಬಿಡಿಗಾಸು ಕೊಡುವ ಮೂಲಕ ಅವಮಾನಿಸಿದೆ. ಹಾಗಾಗಿ, ಅದಕ್ಕೆ 100 ರೂ. ಸೇರಿಸಿ 2,100 ರೂ. ಚೆಕ್‌ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಾಪಸ್ ಕಳುಹಿಸುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
    ಸಮರ್ಪಕ ಬರ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಇಲ್ಲಿನ ದೇವಗಿರಿ ಜಿಲ್ಲಾಡಳಿತ ಭವನದ ಎದುರು ಹಮ್ಮಿಕೊಂಡಿರುವ ಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಗುರುವಾರ ಅವರು ಮಾತನಾಡಿದರು.
    ಅಹೋರಾತ್ರಿ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ 8,500 ರೂ. ಬರ ಪರಿಹಾರ ಕೊಡುವುದಾಗಿ ಘೋಷಿಸಿದೆ. ರಾಜ್ಯ ಸರ್ಕಾರವೂ 8,500 ರೂ. ಸೇರಿಸಿ ಹೆಕ್ಟೆರ್‌ಗೆ 17,000 ರೂ. ಪರಿಹಾರ ಕೊಡಬೇಕು ಎಂದು ನಮ್ಮ ಒತ್ತಾಯವಾಗಿದೆ. ಆದರೆ, ರಾಜ್ಯ ಸರ್ಕಾರ ಕೇವಲ 2,000 ರೂ. ಪರಿಹಾರ ನೀಡಿರುವುದು ಅತ್ಯಂತ ಘೋರವಾಗಿದೆ. ಅದನ್ನು ಪ್ರತಿರೋಧಿಸಲು ಇಂದು 70 ರೈತರು 2,100 ರೂ. ಚೆಕ್‌ಅನ್ನು ಸಿಎಂ ಸಿದ್ದರಾಮಯ್ಯನವರ ಖಾತೆಗೆ ಕಳುಹಿಸುತ್ತಿದ್ದೇವೆ ಎಂದರು.
    ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಭುವನೇಶ್ವರ ಶಿಡ್ಲಾಪುರ, ರುದ್ರಗೌಡ ಕಾಡನಗೌಡ್ರ, ಮಾಲತೇಶ ಪೂಜಾರ, ಗಂಗಣ್ಣ ಎಲಿ, ಶಿವಬಸಪ್ಪ ಗೋವಿ, ಮಹಮ್ಮದ್‌ಗೌಸ್ ಪಾಟೀಲ, ಶಿವಯೋಗಿ ಹೊಸಗೌಡ್ರ, ರಾಜು ತರ್ಲಘಟ್ಟ, ಮುತ್ತಣ್ಣ ಗುಡಗೇರಿ, ಚನ್ನಪ್ಪ ಮರಡೂರ, ಮಾಲತೇಶ ಬಾರಕೇರ, ಮಂಜುನಾಥ ಸಿದ್ದನಗೌಡ್ರ, ಮತ್ತಿತರರು ಇದ್ದರು.
    ನಾವೇ ಧ್ವಜಾರೋಹಣ ಮಾಡುತ್ತೇವೆ
    ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ನಾಲ್ಕು ದಿನ ಕಳೆದರೂ ರೈತರ ಸಮಸ್ಯೆ ಆಲಿಸಲು ಬಂದಿಲ್ಲ. ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಜ.26ರಂದು ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವರು ಧ್ವಜಾರೋಹಣ ಮಾಡಲು ಬಿಡುವುದಿಲ್ಲ. ಬದಲಾಗಿ ಮೈದಾನಕ್ಕೆ ಮುತ್ತಿಗೆ ಹಾಕಿ ನಾವೇ ಧ್ವಜಾರೋಹಣ ಮಾಡುತ್ತೇವೆ ಎಂದು ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts