More

    ಡಕೋಟಾ ಎಕ್ಸ್‌ಪ್ರೆಸ್‌ ರಸ್ತೆಯಲ್ಲೇ ಸ್ಟಾಪ್ ! ಗುಜರಿ ಸೇರಬೇಕಾದ 120ಕ್ಕೂ ಅಧಿಕ ಬಸ್‌ನಲ್ಲೇ ಸಂಚಾರ; ಕೆಟ್ಟು ನಿಲ್ಲುವವು ನಿರಂತರ

    ಕೇಶವಮೂರ್ತಿ ವಿ.ಬಿ. ಹಾವೇರಿ

    ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರ ಅಚ್ಚುಮೆಚ್ಚಿನ ಸಾರಿಗೆ ಬಸ್‌ಗಳಲ್ಲಿ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಗುಜರಿಗೆ ಸೇರಬೇಕಾದ 120ಕ್ಕೂ ಅಧಿಕ ಡಕೋಟಾ ಬಸ್‌ಗಳು ಜಿಲ್ಲೆಯ ರಸ್ತೆ ತುಂಬ ಓಲಾಡುತ್ತ ಸಾಗುತ್ತಿರುವುದರಿಂದ ಸಾರಿಗೆ ಇಲಾಖೆಗೆ ನಿಶ್ಯಕ್ತಿ ಉಂಟಾದಂತೆ ಭಾಸವಾಗುತ್ತಿದೆ.
    ಹೌದು, ಇದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧೀನದಲ್ಲಿರುವ ಹಾವೇರಿ ವಿಭಾಗದ ಬಸ್‌ಗಳ ದುರಂತ ಕಥೆ. ಹಾವೇರಿ ವಿಭಾಗದ 6 ಡಿಪೋಗಳಲ್ಲಿ ಪ್ರಸ್ತುತ 518 ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಇದರಲ್ಲಿ 120ಕ್ಕೂ ಅಧಿಕ ಬಸ್‌ಗಳು 12ರಿಂದ 15 ಲಕ್ಷ ಕಿ.ಮೀ.ವರೆಗೆ ಓಡಾಡುವ ಮೂಲಕ ಬಳಲಿ, ಬೆಂಡಾಗಿವೆ. ಆದರೂ, ಇವುಗಳನ್ನೂ ಬಳಸಬೇಕಾದ ಅನಿವಾರ್ಯತೆ ಸಾರಿಗೆ ಇಲಾಖೆಗಿದೆ.
    2019ಕ್ಕೂ ಮೊದಲು ಪ್ರತಿವರ್ಷ 50ರಿಂದ 100 ಹೊಸ ಬಸ್‌ಗಳು ವಿಭಾಗಕ್ಕೆ ಸೇರ್ಪಡೆಯಾಗುತ್ತಿದ್ದವು. ಅಷ್ಟೇ ಪ್ರಮಾಣದ ಹಳೆಯ ಬಸ್‌ಗಳು ಗುಜರಿ ಸೇರುತ್ತಿದ್ದವು. ಆದರೆ, ಕೋವಿಡ್‌ನಿಂದಾಗಿ 2020ರ ನಂತರ ಹೊಸ ಬಸ್‌ಗಳು ಬರಲಿಲ್ಲ. 2019-20ರಲ್ಲಿ 62 ಹೊಸ ಬಸ್ ಬಂದಿದ್ದವು. ಅದಾದ ಬಳಿಕ ಮೂರು ವರ್ಷ ಒಂದೂ ಬಸ್ ಬರಲಿಲ್ಲ. 2023-24ರಲ್ಲಿ ಕೇವಲ 8 ಹೊಸ ಬಸ್ ಬಂದಿವೆ. ಇದೇ ಕಾರಣದಿಂದ ಗುಜರಿ ಸೇರಬೇಕಾದ ಬಸ್‌ಗಳಲ್ಲೇ ಪ್ರಾಣ ಹಿಡಿದು ಓಡಾಡುವಂತಾಗಿದೆ.
    ಅನೇಕ ಬಸ್‌ಗಳಲ್ಲಿ ಒಂದು ಭಾಗ ಇದ್ದರೆ ಮತ್ತೊಂದು ಭಾಗ ಇರುವುದಿಲ್ಲ. ಸ್ಟೇರಿಂಗ್, ಕ್ಲಚ್‌ಗಳು ಯಾವಾಗ ಕಿತ್ತು ಬರುತ್ತವೋ ಎಂಬಂತೆ ಗೋಚರಿಸುತ್ತವೆ. ಸಿಬ್ಬಂದಿ, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ದುಸ್ಥಿತಿ ಇದೆ. ಇಂತಹ ಬಸ್‌ಗಳಲ್ಲಿ ಸಂಚರಿಸುವಾಗ ಒಂದು ವೇಳೆ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಕಾಡುತ್ತಿದೆ. ಆದ್ದರಿಂದ ಇಂತಹ ಬಸ್‌ಗಳನ್ನು ಕೈಬಿಟ್ಟು ಪ್ರಯಾಣಿಕರ ಸುರಕ್ಷತೆ ಕಡೆಗೆ ಸಾರಿಗೆ ಇಲಾಖೆ ಗಮನಹರಿಸಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.
    ನಿಯಮ ಏನು ಹೇಳುತ್ತೆ ?
    ಸಾರಿಗೆ ಇಲಾಖೆಯ ನಿಯಮದ ಪ್ರಕಾರ 11 ಲಕ್ಷ ಕಿ.ಮೀ. ಓಡಿದ ಬಳಿಕ ಅಂತಹ ಬಸ್‌ಗಳನ್ನು ಗುಜರಿಗೆ ಹಾಕಬೇಕು. ಆದರೆ, ಆರ್‌ಟಿಒ ಫಿಟ್ನೆಸ್ ಸರ್ಟಿಫಿಕೇಟ್ ಕೊಟ್ಟರೆ ಆ ಬಸ್‌ಗಳನ್ನು ಓಡಿಸಲು ಅವಕಾಶವಿದೆ. ಅಲ್ಲದೇ, 11 ಲಕ್ಷ ಕಿ.ಮೀ. ದಾಟಿದ ಬಸ್‌ಗಳ ಚಾರ್ಸಿ ಮಾತ್ರ ಬಳಸುತ್ತೇವೆ. ಉಳಿದಂತೆ ಅದರ ಬಾಡಿ, ಇಂಜಿನ್, ಸೇರಿ ವಿವಿಧ ಭಾಗಗಳನ್ನು ಬದಲಾಯಿಸಿ ಬಳಸಾಗುತ್ತದೆ. ಹಾಗಾಗಿ, ಹೊಸ ಬಸ್ ಬರುವವರೆಗೆ ಮಾತ್ರ ಈ ಬಸ್‌ಗಳನ್ನು ಬಳಸಲಾಗುತ್ತದೆ ಎನ್ನುತ್ತಾರೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಮರಿದೇವರಮಠ.
    15- 16 ಲಕ್ಷ ಕಿಮೀ ಸಂಚಾರ
    ಸಾರಿಗೆ ಇಲಾಖೆ ನಿಯಮದ ಪ್ರಕಾರ 11 ಲಕ್ಷ ಕಿ.ಮೀ. ಓಡಿದ ಬಳಿಕ ಆ ಬಸ್‌ಗಳನ್ನು ಗುಜರಿಗೆ ಹಾಕಬೇಕು ಎಂಬುದು ದಾಖಲಾಗಿದೆ. ಆದರೆ, ಇದನ್ನು ಮೀರಿ 15, 16 ಲಕ್ಷ ಕಿ.ಮೀ.ವರೆಗೂ ಸಂಚರಿಸಿದ ನೂರಾರು ಬಸ್‌ಗಳು ಇನ್ನೂ ರಸ್ತೆ ಮೇಲೆ ರಾಜಾರೋಷವಾಗಿ ಓಡಾಡುತ್ತಿವೆ. 11 ವರ್ಷದಲ್ಲಿ 365 ಹೊಸ ಬಸ್ ಬಂದಿದ್ದರೆ, 378 ಬಸ್ ಗುಜರಿ ಸೇರಿವೆ. 14ರಿಂದ 15 ಲಕ್ಷ ಕಿ.ಮೀ. ಓಡಿರುವ ಸುಮಾರು 50 ಬಸ್‌ಗಳು ಈಗಲೂ ಚಾಲ್ತಿಯಲ್ಲಿವೆ.
    ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತವೆ
    ಗುಜರಿ ಸೇರಬೇಕಿರುವ ಬಸ್‌ಗಳನ್ನು ರಸ್ತೆಗೆ ಇಳಿಸಿದ ಪರಿಣಾಮ ಆಗಾಗ ರಸ್ತೆ ಮಧ್ಯದಲ್ಲೇ ಬಸ್‌ಗಳು ಕೆಟ್ಟು ನಿಲ್ಲುವುದು ಮಾಮೂಲಾಗಿದೆ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
    ಕೋಟ್:
    ಸಾರಿಗೆ ಸಚಿವರೇ ಹೇಳಿರುವಂತೆ ಈಗಾಗಲೇ 5 ಸಾವಿರ ಬಸ್‌ಗಳ ಖರೀದಿ ಪ್ರಕ್ರಿಯೆ ನಡೆದಿದೆ. ಫೆಬ್ರವರಿ ಅಂತ್ಯದೊಳಗೆ ಜಿಲ್ಲೆಗೆ 50 ಹೊಸ ಬಸ್ ಬರಲಿವೆ. ಅವರು ಬಂದ ಬಳಿಕ ಸುಮಾರು 30 ಬಸ್‌ಗಳನ್ನು ಗುಜರಿಗೆ ಹಾಕುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
    – ಶಶಿಧರಸ್ವಾಮಿ ಮರಿದೇವರಮಠ, ವಿಭಾಗೀಯ ನಿಯಂತ್ರಣಾಧಿಕಾರಿ

    ಕೋಟ್:
    ಬೆಂಗಳೂರು ಬಿಎಂಟಿಸಿಯಲ್ಲಿ ಬಳಸಿ ಹಳೆಯದಾದ ಬಸ್‌ಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಕಳುಹಿಸಲಾಗುತ್ತಿದೆ. ಹಾಗಾಗಿ, ಪದೇಪದೆ ಬಸ್‌ಗಳು ದುರಸ್ಥಿಗೆ ಒಳಗಾಗುತ್ತಿವೆ. ಮೊನ್ನೆ ರಾಣೆಬೆನ್ನೂರಿಂದ ಹಾವೇರಿ ಬಸ್ ಹತ್ತಿದ್ದೆ. ಎರಡು ಕಿಮೀ ಸಾಗುವಷ್ಟರಲ್ಲಿ ಬಸ್ ಕೆಟ್ಟು ನಿಂತಿತು. ನಿರ್ವಾಹಕರು ಮತ್ತೊಂದು ಬಸ್ ಹಿಡಿದು ಕಳುಹಿಸುವಷ್ಟರಲ್ಲಿ ಅರ್ಧ ಗಂಟೆ ತಡವಾಗಿತ್ತು. ಸರ್ಕಾರ ಹಳೆಯ ಬಸ್‌ಗಳನ್ನು ಬಿಟ್ಟು ಹೊಸ ಬಸ್ ಸೌಕರ್ಯ ಒದಗಿಸಬೇಕು.
    – ಸಿದ್ದು ಮಠದ, ಪ್ರಯಾಣಿಕ

    ಜಿಲ್ಲೆಯ ಬಸ್‌ಗಳ ವಯಸ್ಸು
    ವರ್ಷ ಹಾವೇರಿ ಹಿರೇಕೆರೂರ ರಾಣೆಬೆನ್ನೂರ ಹಾನಗಲ್ಲ ಬ್ಯಾಡಗಿ ಸವಣೂರ
    0-1 06 00 02 00 00 00
    5-6 15 14 09 12 05 05
    9-10 08 07 17 10 10 08
    12-13 08 11 08 06 06 07
    13-14 04 05 00 00 00 00
    14-15 07 06 00 00 00 00

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts