More

    ಬೇಲಿ ವಿಚಾರಕ್ಕೆ ಹತ್ಯೆಗೈದವರಿಗೆ ಜೀವಾವಧಿ ಶಿಕ್ಷೆ

    ಹಾವೇರಿ: ಮನೆಯ ಬೇಲಿ ವಿಚಾರಕ್ಕೆ ಸಂಬಂಧಿಕರ ನಡುವೆ ಉಂಟಾದ ಜಗಳದ ಸಂದರ್ಭದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆಗೈದಿದ್ದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹಾವೇರಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
    ಶಿಗ್ಗಾಂವಿ ತಾಲೂಕು ಅರಟಾಳ ಗ್ರಾಮದ ಬಳಿಯ ನೀರಗುಡ್ಡ ಪ್ಲಾಟ್ ನಿವಾಸಿಗಳಾದ ಯಮನಪ್ಪ ರಾಜಪ್ಪ ಲಮಾಣಿ, ರಾಮು ಯಮನಪ್ಪ ಲಮಾಣಿ ಹಾಗೂ ಕೃಷ್ಣ ಯಮನಪ್ಪ ಲಮಾಣಿ ಶಿಕ್ಷೆಗೀಡಾದವರು. ಸೋಮಪ್ಪ ರಾಜಪ್ಪ ಲಮಾಣಿ ಎಂಬಾತನ ಹತ್ಯೆಯಾಗಿತ್ತು.
    ಪ್ರಕರಣ ವಿವರ :
    2017ರ ಜೂನ್ 29ರಂದು ಅರಟಾಳ ಗ್ರಾಮದ ಬಳಿಯ ನೀರಗುಡ್ಡ ಪ್ಲಾಟ್‌ನಲ್ಲಿ ಅಕ್ಕಪಕ್ಕದ ಮನೆಯ ಮಧ್ಯದಲ್ಲಿ ಇದ್ದ ಬೇಲಿಯ ವಿಚಾರವಾಗಿ ಜಗಳ ಏರ್ಪಟ್ಟಿತ್ತು. ಸೋಮಪ್ಪ ರಾಜಪ್ಪ ಲಮಾಣಿ ಬೇಲಿಯನ್ನು ಸ್ವಲ್ಪ ತಳ್ಳಿದ್ದರು. ಇದರಿಂದ ಆಕ್ರೋಶಗೊಂಡ ಆತನ ಸಂಬಂಧಿಗಳಾದ ಯಮನಪ್ಪ, ರಾಮು ಹಾಗೂ ಕೃಷ್ಣ ಕಟ್ಟಿಗೆಯ ರಾಫ್ಟರ್‌ನಿಂದ ಸೋಮಪ್ಪನಿಗೆ ಹೊಡೆದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸೋಮಪ್ಪ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮೃತಪಟ್ಟಿದ್ದರು. ಜಗಳ ಬಿಡಿಸಲು ಹೋಗಿದ್ದ ಸೋಮಪ್ಪನ ಮಗನ ಮೇಲೆ ಚಂದ್ರು ಯಮನಪ್ಪ ಲಮಾಣಿ ಹಾಗೂ ಗಂಗವ್ವ ಯಮನಪ್ಪ ಲಮಾಣಿ ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದರು.
    ಈ ಕುರಿತು ಸೋಮಪ್ಪ ಲಮಾಣಿ ಪುತ್ರ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಂದಿನ ಸಿಪಿಐ ಸಂತೋಷ ಪವಾರ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ವರದಿ ಸಲ್ಲಿಸಿದ್ದರು.
    ಈ ಕುರಿತು ವಿಚಾರಣೆ ನಡೆಸಿದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್.ಲಕ್ಷ್ಮೀನಾರಾಯಣ ಅವರು ಅಪರಾಧಿಗಳಾದ ಯಮನಪ್ಪ ಲಮಾಣಿ, ರಾಮು ಲಮಾಣಿ, ಕೃಷ್ಣ ಲಮಾಣಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 37,500 ರೂ. ದಂಡ ವಿಧಿಸಿದರು. ನಾಲ್ಕನೇ ಆರೋಪಿ ಚಂದ್ರು ಲಮಾಣಿ ಹಾಗೂ ಐದನೇ ಆರೋಪಿ ಗಂಗವ್ವ ಲಮಾಣಿಗೆ ಮೂರು ವರ್ಷಗಳ ಕಾರಾಗೃಹವಾಸ ಶಿಕ್ಷೆ ಹಾಗೂ ತಲಾ 12,500 ರೂ. ದಂಡ ವಿಧಿಸಿ ಇತ್ತೀಚೆಗೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸರೋಜಾ ಕೂಡಲಗಿಮಠ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts