More

    ಟ್ರ್ಯಾಕ್ಟರ್ ಆರ್.ಸಿ. ವರ್ಗಾಯಿಸಲು ಕೋರ್ಟ್ ಸೂಚನೆ

    ಹಾವೇರಿ: ಗ್ರಾಹಕರ ಹೆಸರಿಗೆ ಟ್ರ್ಯಾಕ್ಟರ್ ಆರ್.ಸಿ. ವರ್ಗಾಯಿಸಲು ಹಾಗೂ ವ್ಹೀಲ್ ಡಿಸ್ಕ್ ಖರೀದಿ ಮೊತ್ತವನ್ನು 30 ದಿನದೊಳಗಾಗಿ ಪಾವತಿಸುವಂತೆ ಉಚ್ಚಂಗಿದುರ್ಗದ ಆಟೋ ಲಿಂಕ್ಸ್‌ವೊಂದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.
    ಹಾವೇರಿ ತಾಲೂಕಿನ ಕೂರಗುಂದ ಗ್ರಾಮದ ನಿಂಗಪ್ಪ ಚಿಕ್ಕಪ್ಪ ಕುರಿ ಎಂಬುವರು ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ಉಚ್ಚಂಗಿದುರ್ಗದ ಆಟೋ ಲಿಂಕ್ಸ್‌ವೊಂದರಲ್ಲಿ ಜನವರಿ 12, 2023ರಂದು ಟ್ರ್ಯಾಕ್ಟರ್ ಖರೀದಿಸಿದ್ದರು. ಈ ವೇಳೆ ವಾಹನದ ಮೂಲ ಮಾಲೀಕನ ಹೆಸರು ಕಡಿಮೆ ಮಾಡಿಸಿ ವಾಹನ ತಮ್ಮ ಹೆಸರಿಗೆ ವರ್ಗಾಯಿಸಲು ಹಣ ನೀಡಲಾಗಿತ್ತು. ಟ್ರ್ಯಾಕ್ಟರ್ ಖರೀದಿಸಿದ ಒಂದು ವಾರದಲ್ಲಿ ಟ್ರ್ಯಾಕ್ಟರ್ ಇಂಜಿನ್‌ನ ಎಡಭಾಗದ ದೊಡ್ಡ ವ್ಹೀಲ್‌ನ ಡಿಸ್ಕ್ ಬೆಂಡಾಗಿತ್ತು.
    ಈ ಕುರಿತು ದೂರವಾಣಿ ಮೂಲಕ ತಿಳಿಸಿದಾಗ ಹೊಸ ವ್ಹೀಲ್ ಡಿಸ್ಕ್ ಹಾಕಿ ಕೊಡುವುದಾಗಿ ಹೇಳಿದ್ದರಿಂದ ನಿಂಗಪ್ಪ ಉಚ್ಚಂಗಿದುರ್ಗಕ್ಕೆ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದರು. ಆಗ ಶೋರೂಂನವರು ತಮ್ಮ ಬಳಿ ವ್ಹೀಲ್ ಡಿಸ್ಕ್ ಇಲ್ಲ ಎಂದು ಹೇಳಿದ್ದರು. ಹಾಗಾಗಿ, ಟ್ರ್ಯಾಕ್ಟರ್ ವಾಪಸ್ ಪಡೆದು ಟ್ರ್ಯಾಕ್ಟರ್ ಖರೀದಿಗೆ ನೀಡಿದ ಹಣ ಹಿಂತಿರುಗಿಸಿಕೊಡುವಂತೆ ಒತ್ತಾಯಿಸಿದ್ದರು. ಹಾವೇರಿಯ ಟ್ರಾೃಕ್ಟರ್ ಶೋರೂಂವೊಂದರ ಹೆಸರು ಹೇಳಿ ಅಲ್ಲಿಗೆ ಹೋಗಿ ವ್ಹೀಲ್ ಡಿಸ್ಕ್ ಪಡೆದುಕೊಳ್ಳಿ, ನಂತರ ಹಣ ವರ್ಗಾವಣೆ ಮಾಡುತ್ತೇವೆ ಎಂದು ತಿಳಿಸಿದ್ದರು.
    ಹಾವೇರಿಯ ಟ್ರ್ಯಾಕ್ಟರ್ ಶೋರೂಂನಲ್ಲಿ ಕೇಳಿದಾಗ 12 ಸಾವಿರ ರೂ. ಮಾತ್ರ ವರ್ಗಾವಣೆ ಮಾಡಿದ್ದು, ವ್ಹೀಲ್ ಡಿಸ್ಕ್ ಬೆಲೆ 13,900 ರೂ. ಇತ್ತು. ನಿಂಗಪ್ಪ ಬಾಕಿ 1,900 ರೂ. ಪಾವತಿಸಿ ವ್ಹೀಲ್ ಡಿಸ್ಕ್ ಅಳವಡಿಸಿದ್ದರು. ಟ್ರ್ಯಾಕ್ಟರ್ ಆರ್‌ಸಿ ಕಾರ್ಡ್‌ನ್ನು ತಮಗೆ ನೀಡುವಂತೆ ವಿನಂತಿಸಿಕೊಂಡರೂ ನಿರಾಕರಿಸಿದ್ದರು. ಹಾಗಾಗಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
    ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್.ಈಶ್ವರಪ್ಪ ಹಾಗೂ ಮಹಿಳಾ ಸದಸ್ಯೆ ಉಮಾದೇವಿ ಹಿರೇಮಠ ನೇತೃತ್ವದ ತಂಡ, ಟ್ರ್ಯಾಕ್ಟರ್ ಆರ್.ಸಿ.ವರ್ಗಾಯಿಸಲು ಹಾಗೂ ವ್ಹೀಲ್ ಡಿಸ್ಕ್ ಖರೀದಿ ಮಾಡಲು ನೀಡಿದ 1,900 ರೂ., ವಾಹನ ಉಚ್ಚಂಗಿದುರ್ಗಕ್ಕೆ ತೆಗೆದುಕೊಂಡು ಹೋಗಲು ಖರ್ಚಾದ ಮೂರು ಸಾವಿರ ರೂ. ಸೇರಿ 4,900 ರೂ. ಮತ್ತು ಮಾನಸಿಕ ದೈಹಿಕ ವ್ಯಥೆಗೆ ಎರಡು ಸಾವಿರ ರೂ. ಹಾಗೂ ಪ್ರಕರಣದ ಖರ್ಚು ಎರಡು ಸಾವಿರ ರೂ.ಯನ್ನು 30 ದಿನದೊಳಗಾಗಿ ಪಾವತಿಸುವಂತೆ ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.6ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts