More

    ಗಡ್ಡದೇವರಮಠ ನಾಮಪತ್ರ ಸಲ್ಲಿಕೆ ಭರಾಟೆ ಜೋರು; ಬೃಹತ್ ಮೆರವಣಿಗೆಯಲ್ಲಿ ಸಹಸ್ರಾರು ಜನ ಭಾಗಿ; ಕಾಂಗ್ರೆಸ್ ಪರ ಜೈಕಾರ ಹಾಕಿದ ಕಾರ್ಯಕರ್ತರು

    ಹಾವೇರಿ: ನಗರದಲ್ಲಿ ಬುಧವಾರ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿ ನಡೆಯಿತು. ಸಚಿವರು, ಶಾಸಕರು ಸೇರಿದಂತೆ ಸಹಸ್ರಾರು ಜನರು ರೋಡ್ ಶೋನಲ್ಲಿ ಪಾಲ್ಗೊಂಡು ಕಾಂಗ್ರೆಸ್ ಪಕ್ಷದ ಶಕ್ತಿಪ್ರದರ್ಶನ ಮಾಡಿದರು.
    ನಗರದ ಹುಕ್ಕೇರಿ ಮಠದ ಆವರಣದ ಸುತ್ತಮುತ್ತ ಏಳೆಂಟು ಸಾವಿರ ಜನ ಜಮಾಯಿಸಿದ್ದರು. ಮಠದಿಂದ ಆರಂಭವಾದ ಬೃಹತ್ ಮೆರವಣಿಗೆ ಎಂಜಿ ರಸ್ತೆ, ಮೈಲಾರ ಮಹದೇವಪ್ಪ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ, ಜೆ.ಪಿ. ಸರ್ಕಲ್, ಗುರುಭವನ, ಮುನ್ಸಿಪಲ್ ಮೈದಾನದವರೆಗೆ ಸಾಗಿತು. ಹಾವೇರಿ ಮತ್ತು ಗದಗ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ಕಾರ್ಯಕರ್ತರು ಮೆರವಣಿಗೆಗಾಗಿ ಆಗಮಿಸಿದ್ದರು. ಕೇಸರಿ, ಹಸಿರು ಶಾಲು ಧರಿಸಿ, ಕಾಂಗ್ರೆಸ್ ಧ್ವಜ ಹಿಡಿದು ‘ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಜಯವಾಗಲಿ’.. ‘ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ’ ಎಂದು ಘೋಷಣೆ ಕೂಗಿದರು. ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿತ್ತು.
    ಕರಡಿ ಮಜಲು, ಡೊಳ್ಳು ಕುಣಿತ, ಚಂಡೆ ಮದ್ದಳೆ, ಕಂಸಾಳೆ, ಗೊಂಬೆ ಕುಣಿತ, ರಾಮ, ಲಕ್ಷ್ಮಣ, ಸೀತೆಯರ ವೇಷಧಾರಿಗಳು, ಸೇರಿದಂತೆ ವಿವಿಧ ವಾದ್ಯ ತಂಡಗಳು, ಕಲಾವಿದರು ಮೆರವಣಿಗೆಗೆ ರಂಗು ತಂದರು.
    ಆನಂದಸ್ವಾಮಿ ಗಡ್ಡದೇವರಮಠ ಅವರೊಂದಿಗೆ ಸಚಿವರಾದ ಎಚ್.ಕೆ.ಪಾಟೀಲ, ಶಿವಾನಂದ ಪಾಟೀಲ ಹಾಗೂ ಇತರ ಪ್ರಮುಖ ನಾಯಕರು ಪ್ರಚಾರ ವಾಹನ ಏರಿ ಮತಯಾಚನೆ ಮಾಡಿದರು. ಜನರತ್ತ ಕೈಬೀಸಿ, ಕೈಮುಗಿದು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡಿಕೊಂಡರು. ಮೆರವಣಿಗೆಯಲ್ಲಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪತ್ನಿ ದೀಪಾ, ತಾಯಿ ಜಯಲಕ್ಷ್ಮೀ ಗಡ್ಡದೇವರಮಠ ಹಾಗೂ ಕುಟುಂಬದವರು ಭಾಗವಹಿಸಿದ್ದರು.
    ಮೆರವಣಿಗೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಡಿ.ಆರ್.ಪಾಟೀಲ, ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಶಾಸಕರಾದ ಸಲೀಂ ಅಹ್ಮದ್, ಜಿ.ಎಸ್.ಪಾಟೀಲ, ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವಮಠ, ಸೋಮಣ್ಣ ಬೇವಿನಮರದ., ಅಜೀಮ್‌ಪೀರ್ ಖಾದ್ರಿ, ಪ್ರಕಾಶಗೌಡ ಪಾಟೀಲ, ಮಾಜಿ ಸಂಸದರು, ಮಾಜಿ ಶಾಸಕರು, ವಿವಿಧ ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts