More

    ಪರಿಶಿಷ್ಟ ಪಂಗಡಕ್ಕೆ ಸೇರಲು ಅಂಬಿಗರು ಅರ್ಹರು; ಶೀಘ್ರವೇ ಕೇಂದ್ರಕ್ಕೆ ಸ್ಪಷ್ಟೀಕರಣ ಸಲ್ಲಿಕೆ; ನರಸೀಪುರ ಶರಣ ಸಂಸ್ಕೃತಿ ಉತ್ಸವದಲ್ಲಿ ಸಿಎಂ ಭರವಸೆ

    ಹಾವೇರಿ/ ಗುತ್ತಲ: ಗಂಗಾಮತ, ಅಂಬಿಗ, ಕೋಲಿ, ಬೆಸ್ಥ ಸಮಾಜ ಸೇರಿದಂತೆ 39 ಉಪ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಂಪೂರ್ಣ ಅರ್ಹತೆ ಹೊಂದಿದ್ದಾರೆ. ಈ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಸ್ವತಃ ನಾನೇ ಎರಡು ಭಾರಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇನೆ. ಕೇಂದ್ರ ಸರ್ಕಾರ ಈ ಸಮುದಾಯಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಕೆಲ ಸ್ಪಷ್ಟೀಕರಣ ಕೋರಿ ರಾಜ್ಯಕ್ಕೆ ಹಿಂದಿರುಗಿಸಿದ್ದು, ಶೀಘ್ರದಲ್ಲೇ ಕೇಂದ್ರಕ್ಕೆ ಸ್ಪಷ್ಟೀಕರಣ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
    ತಾಲೂಕಿನ ಸುಕ್ಷೇತ್ರ ನರಸೀಪುರ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವ ಹಾಗೂ 6ನೇ ಶರಣ ಸಂಸ್ಕೃತಿ ಉತ್ಸವ, ಶಾಂತಮುನಿ ಸ್ವಾಮಿಗಳ 8ನೇ ಸ್ಮರಣೋತ್ಸವ, ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳ 8ನೇ ಪೀಠಾರೋಹಣ ವಾರ್ಷಿಕೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೊಣಿ ಮೇಲೆ ನಿಂತು ಹರಿಗೋಲವನ್ನು (ಹುಟ್ಟು) ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಗಂಗಾಮತಸ್ಥ, ಅಂಬಿಗ ಸೇರಿದಂತೆ 39 ಉಪ ಜಾತಿಗಳು ಹಿಂದುಳಿದ ವರ್ಗಕ್ಕೆ ಸೇರಿದ್ದು, ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂಬ ಹೋರಾಟ 1996ರಿಂದಲೇ ಆರಂಭವಾಗಿದೆ. ಬೀದರ್‌ನ ಶಾಸಕರಾಗಿದ್ದ ದಿ.ಜಿ.ನಾರಾಯಣರಾವ್ ಅವರು ನನಗೆ ಮನವಿ ಸಲ್ಲಿಸಿದ್ದರು. ಅಂದೇ ಈ ಸಮುದಾಯಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೇಂದ್ರದಿಂದ ಕೆಲ ಸ್ಪಷ್ಟೀಕರಣ ಕೋರಿ ರಾಜ್ಯ ಸರ್ಕಾರಕ್ಕೆ ಬಂದಿರುವುದಾಗಿ ತಿಳಿದಿದೆ. ಶೀಘ್ರವೇ ಪರಿಶಿಷ್ಟ ವರ್ಗದ ಇಲಾಖಾ ಅಧಿಕಾರಿಗಳ ಸಭೆ ನಡೆಸಿ, ಸ್ಪಷ್ಟೀಕರಣ ಕಳುಹಿಸಲಾಗುವುದು. ಕೇಂದ್ರ ಸರ್ಕಾರದಲ್ಲಿರುವ ನಮ್ಮ ರಾಜ್ಯದ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಅವರು ಇದಕ್ಕೆ ಪ್ರಯತ್ನಿಸಬೇಕು ಎಂದು ಹೇಳಿದರು.
    ಹಿಂದುಳಿದ ಸಮುದಾಯಕ್ಕೆ ಸೇರಿರುವ ಅಂಬಿಗರ ಸಮಾಜದ ಹಲವು ಸಮಸ್ಯೆಗಳನ್ನು ಆಲಿಸಿದ್ದೇನೆ. ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದೇನೆ. ಈ ಸಮುದಾಯದ ಅಭಿವೃದ್ಧಿಗೆ ಅಂಬಿಗರ ಚೌಡಯ್ಯ ನಿಗಮವನ್ನು ಸ್ಥಾಪಿಸಿದ್ದು ನಮ್ಮದೇ ಸರ್ಕಾರ. ಈ ಸಮಾಜಕ್ಕೆ ಆರ್ಥಿಕ ಶಕ್ತಿ ಬರಬೇಕು. ಯಾವ ಸಮಾಜಕ್ಕೆ ಆರ್ಥಿಕ, ಸಾಮಾಜಿಕ ಶಕ್ತಿ ಬರುವುದಿಲ್ಲವೋ ಆ ಸಮಾಜ ಮುಖ್ಯವಾಹಿನಿಗೆ ಬರುವುದಿಲ್ಲ. ಈ ಸಮಾರಂಭದಲ್ಲಿ ಹಲವು ಬೇಡಿಕೆಗಳನ್ನು ಸಮಾಜ ನನ್ನ ಮುಂದೆ ಇಟ್ಟಿದೆ. ವಸತಿ ಶಾಲೆಗೆ 5 ಕೋಟಿ ರೂ., ಮಠದ ಅಭಿವೃದ್ಧಿಗೆ 25 ಕೋಟಿ ರೂ. ಸೇರಿದಂತೆ ವಿವಿಧ ಬೇಡಿಕೆಗಳ ಪೈಕಿ ಎಲ್ಲವೂ ಸಾಧ್ಯವಾಗದಿದ್ದರೂ ಹಲವನ್ನು ನಾನು ಈಡೇರಿಸುತ್ತೇನೆ. ಸದಾ ಸಮಾಜದೊಂದಿಗೆ ಇರುತ್ತೇನೆ ಎಂದು ಭರವಸೆ ನೀಡಿದರು.
    ನಿಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ವಿದ್ಯೆಯಿಂದ ವಂಚಿತರಾಗಬಾರದು. ಅಕ್ಷರ ಸಂಸ್ಕೃತಿಯಿಂದ ವಂಚಿತ ಸಮುದಾಯ ತಲತಲಾಂತರಗಳಿಂದ ಶೋಷಣೆಗೀಡಾಗಿದೆ. ಎಲ್ಲರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು ಸಾರ್ಥಕವಾಗುತ್ತದೆ ಎಂದರು.
    ಕೇಂದ್ರ ಸಂಸದೀಯ ವ್ಯವಹಾರ, ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು, ಬಡತನಕ್ಕೆ ಉಂಬುವ ಚಿಂತೆ, ಉಣಲಾದಡೆ ಉಡುವ ಚಿಂತೆ, ಉಡಲಾದಡೆ ಇಡುವ ಚಿಂತೆ… ಎಂದು ನಿಜ ಶರಣರ ಅಂಬಿಗರ ಚೌಡಯ್ಯನವರ ವಚನವನ್ನು ಪಠಿಸಿ ಮಾತನಾಡಿದರು. ವಿವಿಧ ಹೆಸರಿನಲ್ಲಿ ಕರೆಯಲಾಗುವ ಗಂಗಾಮತ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂಬ ಬೇಡಿಕೆ ಇದೆ. ಕೆಲವು ಅಂಶಗಳ ಬಗ್ಗೆ ಆರ್‌ಜಿಐ ಮಾಹಿತಿಯನ್ನು ಕೇಳಿದೆ. ಈ ಬಗ್ಗೆ ರಾಜ್ಯ ಸರ್ಕಾರ ಈಗಾಲೇ ಕಳುಹಿಸಿರುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಅರ್ಜುನ ಮುಂಡಾ, ಆರ್‌ಜಿಐ ಅಧಿಕಾರಿಗಳು ಸಮಾಜದ ಮುಖಂಡರೊಂದಿಗೆ ಇದೇ ಜ.17ರಂದು ದೆಹಲಿಯಲ್ಲಿ ಸಭೆ ಕರೆದು ಅವರೊಂದಿಗೆ ಚರ್ಚಿಸಿ ನಿಮ್ಮ ಬೇಡಿಕೆ ಈಡೇರಿಕೆಗೆ ಪ್ರಮಾಣಿಕ ಪ್ರಯತ್ನ ಮಾಡಲಾಗುವುದೆಂದು ಭರವಸೆ ನೀಡಿದರು.
    ಕಾರ್ಯಕ್ರಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಜಿ ಅವರ 8ನೇ ಪೀಠಾರೋಹಣ ವಾರ್ಷಿಕೋತ್ಸವದ ಅಂಗವಾಗಿ ಮಠಾಧೀಶರು ಹಾಗೂ ಸಿಎಂ ಶ್ರೀಗಳಿಗೆ ಸಿಎಂ ರುದ್ರಾಕ್ಷಿ ಕಿರೀಟ ಹಾಕಿ, ಪುಷ್ಪವೃಷ್ಠಿಗೈದು ಆಶೀರ್ವಾದ ಪಡೆದರು.

    ಸಮಾರಂಭದಲ್ಲಿ ಇಳಕಲ್‌ನ ಗುರುಮಹಾಂತ ಸ್ವಾಮಿಜಿ, ಕುಂಚಗಿರಿಯ ಶಾಂತವೀರ ಸ್ವಾಮಿಜಿ, ಜ್ಞಾನಪ್ರಕಾಶ ಸ್ವಾಮೀಜಿ, ತಂಗಡಗಿಯ ಅನ್ನದಾನಿ ಬಸವಪ್ರಿಯ ಅಪ್ಪಣ್ಣ ಸ್ವಾಮಿಜಿ, ಹುಣಸಿಹಾಳದ ನಿಜಗುಣದೇವರು, ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯರು, ಬಸವ ಬೆಳವಿಯ ಶರಣಬಸವ ದೇವರು, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಬಿ.ಪಿ.ಹರೀಶ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣ ಕಮಕನೂರ, ಎನ್.ರವಿಕುಮಾರ, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯಕ್, ಮಾಜಿ ಶಾಸಕ ಶಿವರಾಜ ಸಜ್ಜನರ, ಕೊಟ್ರೇಶಪ್ಪ ಬಸೇಗೆಣ್ಣಿ, ಎಂ.ಎಂ.ಮೈದೂರ, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts