More

    ಹೈಕಮಾಂಡ್‌ಗೆ ದುಂಬಾಲು ಬಿದ್ದ ಆಕಾಂಕ್ಷಿಗಳು; ಟಿಕೆಟ್‌ಗಾಗಿ ಬಯೋಡೇಟಾ ಹಿಡಿದು ಅಲೆದಾಟ

    ಕೇಶವಮೂರ್ತಿ ವಿ.ಬಿ. ಹಾವೇರಿ

    ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಗರಿಬಿಚ್ಚಿದ ಹಕ್ಕಿಗಳಂತಾಗಿದ್ದಾರೆ. ಹಗಲು-ರಾತ್ರಿ, ಬಿಸಿಲು-ಮಳೆ ಎನ್ನದೇ ಬಯೊಡೇಟಾ ಹಿಡಿದು ಆಗಾಗ ಬೆಂಗಳೂರು, ದೆಹಲಿ ಕಡೆ ಅಲೆದಾಡುತ್ತಿದ್ದಾರೆ. ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ದುಂಬಾಲು ಬೀಳುತ್ತಿದ್ದಾರೆ.
    ಜಿಲ್ಲೆಯ ಶಿಗ್ಗಾಂವಿ, ಹಾವೇರಿ ಮೀಸಲು ವಿಧಾನಸಭೆ ಕ್ಷೇತ್ರ, ರಾಣೆಬೆನ್ನೂರ, ಹಿರೇಕೆರೂರ, ಬ್ಯಾಡಗಿ, ಹಾನಗಲ್ಲ ಕ್ಷೇತ್ರಗಳಲ್ಲಿ ಎಲ್ಲ ಪಕ್ಷಗಳಲ್ಲೂ ಹತ್ತಾರು ಆಕಾಂಕ್ಷಿಗಳು, ‘ತಾವು ಇಂತಹ ಪಕ್ಷದ, ಇಂತಹ ಕ್ಷೇತ್ರದ ಪ್ರಬಲ ಆಕಾಂಕ್ಷಿ’ ಎಂದು ಕ್ಷೇತ್ರದ ತುಂಬ ಓಡಾಡುತ್ತಿದ್ದಾರೆ. ಜಾತ್ರೆ, ಉತ್ಸವ, ಕ್ರೀಡೆ, ಹಬ್ಬ- ಹರಿದಿನಗಳು ಬಂದೆ ಸಾಕು ನಾಮುಂದು ತಾಮುಂದು ಎಂಬಂತೆ ಕ್ಷೇತ್ರದ ತುಂಬೆಲ್ಲ ಬ್ಯಾನರ್, ಪೋಸ್ಟರ್ ಅಂಟಿಸುತ್ತಿದ್ದಾರೆ.
    ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲ ಆಕಾಂಕ್ಷಿಗಳು ಬೆಂಗಳೂರು, ದೆಹಲಿ ಮಟ್ಟದ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಹಾತೊರೆಯುತ್ತಿದ್ದಾರೆ. ಕೆಲವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಸಫಲರಾದರೆ, ಮತ್ತೆ ಕೆಲವರು ಭೇಟಿಯಾಗಲು ಸಾಧ್ಯವಾಗದೇ ಪೆಚ್ಚು ಮೋರೆ ಹಾಕಿಕೊಂಡು ಕ್ಷೇತ್ರಕ್ಕೆ ವಾಪಸಾಗುತ್ತಿದ್ದಾರೆ.
    ಕೆಲವರು ಅರ್ಹತೆ ಇಲ್ಲದಿದ್ದರೂ ಚುನಾವಣೆ ಬಂದ ಹಿನ್ನೆಲೆಯಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇಲ್ಲಸಲ್ಲದ ಕಥೆಗಳನ್ನು ಕಟ್ಟುತ್ತಿದ್ದಾರೆ. ಹೈಕಮಾಂಡ್ ನಾಯಕರ ಜತೆಗಿನ ಫೋಟೋಗಳನ್ನು ಇಟ್ಟುಕೊಂಡು ನನಗೆ ಅವರು ಪರಿಚಯ, ಇವರು ತೀರಾ ಆತ್ಮೀಯರು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.
    ಸದ್ಯಕ್ಕಂತೂ ಯಾವ ಪಕ್ಷಗಳೂ ಪಟ್ಟಿ ಬಿಡುಗಡೆ ಮಾಡುವ ಸಾಹಸಕ್ಕೆ ಕೈಹಾಕುವಂತೆ ಕಾಣುತ್ತಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಹಲವು ಸಮೀಕ್ಷೆಗಳು ನಡೆದಿದ್ದು, ಇನ್ನೂ ಕೆಲ ಗುಪ್ತ ಸಮೀಕ್ಷೆಗಳು ನಡೆಯುತ್ತಿದ್ದು, ಎಲ್ಲ ಪರಿಶೀಲನೆ ಮಾಡಿಯೇ ಟಿಕೆಟ್ ಅಂತಿಮಗೊಳಿಸುತ್ತಾರೆ. ಇದನ್ನು ಅರಿತಿರುವ ಆಕಾಂಕ್ಷಿಗಳು ಹೇಗಾದರೂ ಮಾಡಿ ಟಿಕೆಟ್ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಯಾರಿಗೆ ಟಿಕೆಟ್ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ. ಅಲ್ಲಿಯವರೆಗೂ ಆಕಾಂಕ್ಷಿಗಳ ಪ್ರಯತ್ನ ಮುಂದುವರಿಯಲಿದೆ.
    ನಾಯಕರ ಬೆನ್ನಹಿಂದೆ
    ಕ್ಷೇತ್ರ ಹಾಗೂ ಕ್ಷೇತ್ರದ ಸುತ್ತಮುತ್ತ ರಾಜ್ಯ, ರಾಷ್ಟ್ರ ಮಟ್ಟದ ಯಾವುದೇ ನಾಯಕರು, ಪದಾಧಿಕಾರಿಗಳು ಆಗಮಿಸುವುದು ಗೊತ್ತಾದರೆ ಸಾಕು ಅಲ್ಲಿಗೆ ಆಕಾಂಕ್ಷಿಗಳ ದಂಡು ಹಾಜರ್ ಆಗುತ್ತದೆ. ಅದರಲ್ಲೂ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ, ಸಲೀಂ ಅಹ್ಮದ್, ಬಿಜೆಪಿಯ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ, ಮತ್ತಿತರ ಪ್ರಮುಖ ಮುಖಂಡರು ಬರುತ್ತಿದ್ದಂತೆ ಆಕಾಂಕ್ಷಿಗಳು ಗರಿಗೆದರುತ್ತಾರೆ.
    ಬೆಂಬಲಿಗರ ದಂಡು
    ಆಕಾಂಕ್ಷಿಗಳು ಪಕ್ಷದ ಮುಖಂಡರು ಇದ್ದಲ್ಲಿಗೆ ತಮ್ಮ ಜತೆಗೆ ಬೆಂಬಲಿಗರ ದಂಡನ್ನೇ ಕರೆತರುತ್ತಾರೆ. ತಮ್ಮ ಪರವಾಗಿ ಭಾವಚಿತ್ರ ಹಾಗೂ ಟಿಕೆಟ್ ಆಕಾಂಕ್ಷಿ ಎಂಬ ಅಕ್ಷರ ಇರುವ ಪ್ಲೆಕ್ಸ್, ಪ್ಲೇಕಾರ್ಡ್ ಹಿಡಿದು ಜೈಕಾರ ಹಾಕಿಸಿಕೊಳ್ಳುತ್ತಾರೆ. ನೆಚ್ಚಿನ ನಾಯಕರಿಗಾಗಿ ಕ್ರೇನ್ ಮೂಲಕ ಬೃಹತ್ ಮಾಲೆಯನ್ನೂ ಹಾಕಿಸುತ್ತಾರೆ. ಇದರಿಂದ ಮುಖಂಡರು ಸಂಕೋಚಕ್ಕೆ ಒಳಗಾದ ಘಟನೆಗಳೂ ಜರುಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts