More

    ಅಧಿವೇಶನದಲ್ಲಿ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ ಕುರಿತು ಚರ್ಚೆ; ಮುಂದಿನ ವಾರ ಅಧಿಕಾರಿಗಳೊಂದಿಗೆ ಸಭೆ; ಸಹಕಾರ ಸಚಿವ ಕೆ.ಎನ್.ರಾಜಣ್ಣ ಭರವಸೆ

    ಹಾವೇರಿ: ತಾನು ಬೆಳೆದ ಬೆಳೆಯ ಬೆಲೆ ನಿಗದಿಪಡಿಸುವ ಅವಕಾಶವೂ ರೈತರಿಗೆ ಇಲ್ಲವಾಗಿದೆ. ಸಾಲ ಸೂಲ ಮಾಡಿ ಬೆಳೆಯುವ ರೈತರ ಬದುಕು ಸದೃಢವಾಗಬೇಕಿದೆ. ಸರ್ಕಾರ ಹಾಗೂ ಸಹಕಾರಿ ಸಂಸ್ಥೆಗಳು ರೈತರ ನೆರವಿಗೆ ಧಾವಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಾದ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ ಕುರಿತು ಮುಂದಿನ ವಾರ ನಡೆಯುವ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಭರವಸೆ ನೀಡಿದರು.
    ತಾಲೂಕಿನ ಅಗಡಿ ಗ್ರಾಮದಲ್ಲಿ ಶನಿವಾರ ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ನಬಾರ್ಡ್ ಪ್ರಾಯೋಜಕತ್ವದಲ್ಲಿ 2.26 ಕೋಟಿ ರೂ. ವೆಚ್ಚದಲ್ಲಿ ಅಗಡಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ನಿರ್ಮಿಸಲಾದ ನೂತನ ಗೋದಾಮು ಹಾಗೂ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಯ ಸಾಧಕ ಬಾಧಕಗಳ ಬಗ್ಗೆ ಕೂಡ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು. ಸಚಿವ ಶಿವಾನಂದ ಪಾಟೀಲ ಅವರಿಗೆ 2003ರಲ್ಲಿ ವಿಜಯಪುರದಿಂದ ಬಾಗಲಕೋಟೆಗೆ ಬ್ಯಾಂಕ್ ಪ್ರತ್ಯೇಕಗೊಳಿಸಿದ ಅನುಭವವಿದೆ. ಎಚ್.ಕೆ.ಪಾಟೀಲ ಅವರು ಸಹಕಾರಿ ಕ್ಷೇತ್ರದಲಿ ಸಾಕಷ್ಟು ಅನುಭವವಿದೆ. ಅವರಿಬ್ಬರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಧಾರವಾಡದಿಂದ ಡಿಸಿಸಿ ಬ್ಯಾಂಕ್ ಪ್ರತ್ಯೇಕಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
    ರೈತರು ಭೂಮಿ, ಬಂಡವಾಳ, ಪರಿಶ್ರಮ ಹಾಕಿದರೂ ಕೊಳ್ಳುವವ ಬೆಲೆ ನಿರ್ಣಯಿಸುತ್ತಾನೆ. ಫಸಲನ್ನು ಮಾರುಕಟ್ಟೆಗೆ ಪೂರೈಕೆ ಮಾಡಿದಾಗ ವ್ಯಾಪಾರಿಗಳು ದರ ನಿರ್ಧರಿಸುತ್ತಾರೆ. ರೈತರ ಅಸಹಾಯಕತೆಯನ್ನು ಮಧ್ಯವರ್ತಿಗಳು ದುರಯಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
    ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ದೇಶದಲ್ಲಿ ಸಹಕಾರ ಚಳವಳಿಗೆ ಅಖಂಡ ಧಾರವಾಡ ಜಿಲ್ಲೆಯ ಕೊಡುಗೆ ಅನನ್ಯವಾದದ್ದು. ಈ ಚಳವಳಿಯಿಂದಾಗಿ ಅಕ್ಕಿ, ಗೋಧಿ, ಸಕ್ಕರೆಯನ್ನು ಹೊರದೇಶಗಳಿಗೆ ಕಳುಹಿಸುತ್ತಿದ್ದೇವೆ. ರಾಜ್ಯದಲ್ಲಿ 6 ಸಾವಿರಕ್ಕಿಂತ ಹೆಚ್ಚು ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಅಖಂಡ ಧಾರವಾಡ ಜಿಲ್ಲೆಯಲ್ಲೇ ಅಗಡಿ ಕೃಷಿ ಪತ್ತಿನ ಸಹಕಾರ ಸಂಘ ಮಾದರಿಯಾಗಿದೆ. ಇಲ್ಲಿ ರೈತರು 14 ಕೋಟಿ ರೂ. ಡೆಪಾಸಿಟ್ ಮಾಡಿದ್ದಾರೆ ಎಂದರು.
    ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣನವರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗೆಣ್ಣಿ ಮಾತನಾಡಿದರು.
    ಸಮಾರಂಭದಲ್ಲಿ ಗ್ರಾಮದ ಸಹಕಾರಿ ಸಂಘದ ಅಧ್ಯಕ್ಷ ಬಸಪ್ಪ ಬಸೇಗೆಣ್ಣಿ ಅಧ್ಯಕ್ಷತೆ ವಹಿಸಿದ್ದರು. ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಸಹಕಾರ ಸಂಘಗಳ ನಿಬಂಧಕ ಡಾ.ಸುರೇಶಗೌಡ ಪಾಟೀಲ, ಕೆ.ಮುನಿಯಪ್ಪ, ಹಾವೆಮುಲ್ ಅಧ್ಯಕ್ಷ ಬಸವರಾಜ ಅರಬಗೊಂಡ, ಸಹಕಾರ ಸಂಘಗಳ ಉಪನಿಬಂಧಕ ಅಜ್ಮತ್ ಉಲ್ಲಾಖಾನ್, ರಂಗನಾಥ ಎಸ್., ಗ್ರಾಪಂ ಅಧ್ಯಕ್ಷೆ ಪ್ರೇಮವ್ವ ಹೊಂಬರಡಿ, ಶಿವಬಸಪ್ಪ ಬಸೇಗೆಣ್ಣಿ, ಮಂಜವ್ವ ಅಳ್ಳಳ್ಳಿ, ಮಂಜುನಾಥ ಮಣ್ಣೂರ, ಪ್ರಭುದೇವ ಪಟ್ಟಣಶೆಟ್ಟಿ, ರುದ್ರಪ್ಪ ಅಂತ್ರದ, ವಿ.ಎಸ್.ರಿತ್ತಿ ಗಾಣಗೇರ, ಮತ್ತಿತರರು ಉಪಸ್ಥಿತರಿದ್ದರು.
    ಎರಡು ವರ್ಷದಲ್ಲಿ ಆಗಲಿ
    ಜಿಪಂ, ತಾಪಂ ಮತ್ತು ಗ್ರಾಪಂಗಳಲ್ಲಿ ಸಾಮಾಜಿಕ ನ್ಯಾಯವನ್ನು ನಾವು ಜಾರಿಗೆ ತಂದಿದ್ದೇವೆ. ಸಹಕಾರ ಕ್ಷೇತ್ರದಲ್ಲೂ ಮೀಸಲಾತಿ ತರುವ ಮೂಲಕ ಸಚಿವ ರಾಜಣ್ಣ ಅವರು ಸಾಮಾಜಿಕ ನ್ಯಾಯ ತಂದಿದ್ದಾರೆ. ಸಹಕಾರಿ ಸಂಸ್ಥೆಗಳಲ್ಲಿ ಅಧಿಕಾರಿಗಳು ಸ್ನೇಹಿತರಾಗಬೇಕು. ಧಾರವಾಡದಿಂದ ಹಾವೇರಿ ಮತ್ತು ಗದಗ ಪ್ರತ್ಯೇಕಗೊಂಡು ಜಿಲ್ಲೆಯಾಗಿ 25 ವರ್ಷಗಳಾದರೂ ಪ್ರತ್ಯೇಕ ಜಿಲ್ಲಾ ಬ್ಯಾಂಕ್ ಸ್ಥಾಪನೆ ಸಾಧ್ಯವಾಗಿಲ್ಲ. ಇಲ್ಲಿಯವರೇ ಮುಖ್ಯಮಂತ್ರಿಯಾದರೂ ಅದು ಸಾಧ್ಯವಾಗಿಲ್ಲ. ಈ ಬಗ್ಗೆ ಕೇವಲ ಪತ್ರ ಬರೆದರೆ ಆಗಲ್ಲ, ಹತ್ತಾರು ಬಾರಿ ಸಂಬಂಧಪಟ್ಟವರನ್ನು ಭೇಟಿಯಾಗಬೇಕು. ಎರಡು ವರ್ಷದಲ್ಲಿ ಪ್ರತ್ಯೇಕ ಜಿಲ್ಲಾ ಬ್ಯಾಂಕ್ ಮಾಡಲು ನಿರ್ಧರಿಸಿ. ನಾವು ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡುತ್ತೇವೆ ಎಂದು ಸಚಿವ ಎಚ್.ಕೆ.ಪಾಟೀಲ ಸಹಕಾರ ಸಚಿವರಿಗೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts