More

    ಅದ್ಧೂರಿ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ; ಕರ್ನಾಟಕ ನಾಮಕರಣಕ್ಕೆ 50 ವರ್ಷ ಹಿನ್ನೆಲೆ ವಿಶೇಷ ತಯಾರಿ; ಎಡಿಸಿ ಪೂಜಾರ ವೀರಮಲ್ಲಪ್ಪ ಹೇಳಿಕೆ

    ಹಾವೇರಿ: ಕರ್ನಾಟಕ ರಾಜ್ಯೋತ್ಸವ ಸಮಾರಂಭ ಹಾಗೂ ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ನಾಮಕಾರಣ ಮಾಡಿದ 50ನೇ ವರ್ಷಾಚರಣೆ ಅಂಗವಾಗಿ ನವೆಂಬರ್ 1ರಂದು ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ, ಅದ್ಧೂರಿಯಾಗಿ ಆಚರಿಸಲಾಗುವುದು. ಕಾರ್ಯಕ್ರಮಗಳ ಆಯೋಜನೆಗೆ ಎಲ್ಲ ಅಧಿಕಾರಗಳು ಜವಾಬ್ದಾರಿಯಿಂದ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಇಲಾಖಾವಾರು ಪರಿಶೀಲನೆ ನಡೆಸಿದರು. ಅಧಿಕಾರಿಗಳು ರಾಜ್ಯೋತ್ಸವ ಸಮಾರಂಭಕ್ಕೆ ಗೈರಾಗಬಾರದು. ಅತ್ಯಂತ ಶಿಸ್ತಿನಿಂದ ಕಾರ್ಯಕ್ರಮ ನಿರ್ವಹಿಸಬೇಕು ಎಂದರು. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದರು.
    ಮೆರವಣಿಗೆ ನಂತರ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭವಾಗುವುದು. ರಾಷ್ಟ್ರಗೀತೆ, ಧ್ವಜಾರೋಹಣ, ಧ್ವಜವಂದನೆ, ಸಚಿವರ ಸಂದೇಶ ಇರಲಿದೆ. ನವೆಂಬರ್ 1, 1973ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ 50 ಕಾರ್ಯಕ್ರಮ ಆಯೋಜಿಸಬೇಕು. ಈ ಕಾರ್ಯಕ್ರಮದಲ್ಲಿ ಕನ್ನಡಾಂಬೆಗೆ ನುಡಿ ನಮನ ಕಾರ್ಯಕ್ರಮ ಆಯೋಜಿಸಬೇಕು ಎಂದು ಸೂಚಿಸಿದರು.
    ಕಾರ್ಯಕ್ರಮದಲ್ಲಿ ಕೃಷಿ, ಪರಿಸರ, ಪತ್ರಿಕೋದ್ಯಮ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಸಮಾಜ ಸೇವೆ, ವಾಣಿಜ್ಯೋದ್ಯಮ, ಪೌರಕಾರ್ಮಿಕ, ಸಾಹಿತ್ಯ, ಸಂಗೀತ, ಜಾನಪದ, ರಂಗಭೂಮಿ, ನಾಟ್ಯ, ನೃತ್ಯ, ಚಿತ್ರಕಲೆ/ ಶಿಲ್ಪಕಲೆ, ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಾವೇರಿ ಜಿಲ್ಲೆಯ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಹಾಗೂ ಅಪಘಾತ ರಹಿತವಾಗಿ ಚಾಲನೆ ಮಾಡಿದ 50 ಜನ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
    ಸಭೆಯಲ್ಲಿ ಡಿಡಿಪಿಐ ಗಿರೀಶ ಪದಕಿ, ಡಿಡಿಪಿಯು ಡಾ.ಉಮೇಶಪ್ಪ ಎಚ್., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಶ್ರೀನಿವಾಸ ಆಲದರ್ತಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
    ಮೆರವಣಿಗೆಯಲ್ಲಿ 11 ಸ್ತಬ್ಧಚಿತ್ರ
    ನ.1ರಂದು ಬೆಳಗ್ಗೆ 8 ಗಂಟೆಗೆ ಮೈಲಾರ ಮಹದೇವ ವೃತ್ತದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಜತೆಗೆ ವಿವಿಧ 11 ಇಲಾಖೆಗಳ ಸ್ಥಬ್ದಚಿತ್ರಗಳ ಮೆರವಣಿಗೆ ಆರಂಭವಾಗಲಿದೆ. ಸ್ತಬ್ಧಚಿತ್ರಗಳನ್ನು ಅತ್ಯಂತ ಆಕರ್ಷಕವಾಗಿ ವಿನ್ಯಾಸಗೊಳಿಸಬೇಕು. ತಾಯಿ ಭುವನೇಶ್ವರಿ ರಥವನ್ನು ಹೂವಿನ ಅಲಂಕಾರಗೊಳಿಸಿ ಜನಪದ ಕಲಾತಂಡಗಳೊಂದಿಗೆ ಶಿಸ್ತಿನಿಂದ ಮೆರವಣಿಗೆಯಲ್ಲಿ ಸಾಗುವಂತೆ ವ್ಯವಸ್ಥೆಗೊಳಿಸಬೇಕು ಎಂದು ಎಡಿಸಿ ವೀರಮಲ್ಲಪ್ಪ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts