More

    ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಕಡಿಮೆ; ಸಾವಿರಕ್ಕೆ 600 ಸ್ತ್ರೀಯರು; ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ ಹೇಳಿಕೆ

    ಹಾವೇರಿ: ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಹಾವೇರಿ ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ತುಂಬಾ ಕಡಿಮೆ ಇದೆ. ಜಿಲ್ಲೆಯಲ್ಲಿ ಮಹಿಳಾ ಮತದಾರರ ನೋಂದಣಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿನಿಯರು ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.
    ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ನೋಂದಣಿ ಜಾಗೃತಿ ಹಾಗೂ ಚುನಾವಣಾ ಪ್ರಕ್ರಿಯೆ ಕುರಿತಂತೆ ವಿದ್ಯಾರ್ಥಿಗಳಿಗೆ ಹಾಗೂ ಯುವ ಮತದಾರರಿಗೆ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ನಗರದ ಕೆಎಲ್‌ಇ ಗುದ್ಲೆಪ್ಪ ಹಳ್ಳಿಕೇರಿ ಪದವಿಪೂರ್ವ ಕಾಲೇಜು ಹಾಗೂ ಹುಕ್ಕೇರಿ ಮಠದ ಶಿವಲಿಂಗೇಶ್ವರ ಮಹಿಳಾ ಕಾಲೇಜಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು.
    ಬೇರೆ ಜಿಲ್ಲೆಗಳಲ್ಲಿ ಒಂದು ಸಾವಿರ ಪುರುಷ ಮತದಾರರಿಗೆ 900 ಮಹಿಳಾ ಮತದಾರರಿದ್ದಾರೆ. ಆದರೆ, ಜಿಲ್ಲೆಯಲ್ಲಿ ಒಂದು ಸಾವಿರ ಪುರುಷರ ಮತದಾರರರಿಗೆ ಆರು ನೂರು ಮಹಿಳಾ ಮತದಾರರ ಅನುಪಾತವಿದೆ. ಜಿಲ್ಲೆಯಲ್ಲಿ ಮಹಿಳಾ ಮತದಾರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದರು.
    18 ವರ್ಷ ತುಂಬಿದ ಪ್ರತಿಯೊಬ್ಬ ಯುವಕ-ಯುವತಿಯರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೊಸದಾಗಿ ಯುವಕರು/ಯುವತಿಯರು ಮತ್ತು ಸಾರ್ವಜನಿಕರ ನಮೂನೆ-6ರಲ್ಲಿ ಹೆಸರು ಸೇರ್ಪಡೆಗಾಗಿ, ನಮೂನೆ-7ರಲ್ಲಿ ಹೆಸರು ಕಡಿಮೆಗೊಳಿಸಲು, ಹೆಸರು ಇತ್ಯಾದಿ ತಿದ್ದುಪಡಿ ಮತ್ತು ಹೆಸರು ವರ್ಗಾವಣೆ ಬಯಸಿದ್ದಲ್ಲಿ ನಮೂನೆ-8ರಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿಗಳನ್ನು ಭರ್ತಿಮಾಡಿ ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ (ಬಿಎಲ್‌ಒ) ರವರಿಗೆ ಸಲ್ಲಿಸಬಹುದು ಅಥವಾ ನೇರವಾಗಿ ಮನೆಯಿಂದಲೇ ಮೊಬೈಲ್ ಮೂಲಕ ಭಾರತ ಚುನಾವಣಾ ಆಯೋಗದ ಅಧಿಕೃತ ‘ವೋಟರ್ ಹೆಲ್ಪಲೈನ್ ಆ್ಯಪ್’ ಅನ್ನು ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದು. ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳದ ಎಲ್ಲರನ್ನೂ ಮತದಾರರಾಗಿ ನೋಂದಾಯಿಸಲು ಜಾಗೃತಿ ಮೂಡಿಸುವಂತೆ ಯುವತಿಯರಿಗೆ ಕರೆ ನೀಡಿದರು.
    ಪ್ರತಿಯೊಬ್ಬ ವಿದ್ಯಾರ್ಥಿಗಳು ಕೇವಲ ಪಠ್ಯದ ಮೇಲೆ ಅವಲಂಬಿತವಾಗದೇ ಸಮಾಜದ ಆಗುಹೋಗುಗಳ ಬಗ್ಗೆ ಅರಿವು ಹೊಂದಬೇಕು. ದೇಶದ ಅಭಿವೃದ್ಧಿ, ಸಾಮಾಜಿಕ ಬೆಳೆವಣಿಗೆಯಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ನೀವು ಮತದಾರರಾಗಿ ನೋಂದಾಯಿಸಿಕೊಂಡರೆ ಮತದಾನದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಮತದಾನದಲ್ಲಿ ಪಾಲ್ಗೊಂಡರೆ ನಿಮ್ಮ ಗ್ರಾಮ, ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸುವ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರ ನಿಮಗೆ ದೊರಕುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
    ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಜಿಎಚ್ ಕಾಲೇಜು ಪ್ರಾಂಶುಪಾಲ ಜ್ಯೋತಿಬಾ ಶಿಂಧೆ, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts