More

    ಹಾಲು ಉತ್ಪಾದಕರಿಗೆ ‘ಹಾವೆಮುಲ್’ ಉಡುಗೊರೆ; ಲೀಟರ್ ಹಾಲಿಗೆ 3 ರೂ. ಸಹಾಯಧನ

    ಹಾವೇರಿ: ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾವೆಮುಲ್)ದ ನೂತನ ಆಡಳಿತ ಮಂಡಳಿ ರಚನೆಯಾದ ಬಳಿಕ ಮೊದಲ ಬಾರಿಗೆ ಜಿಲ್ಲೆಯ ಹಾಲು ಉತ್ಪಾದಕರಿಗೆ ಬಂಪರ್ ಕೊಡುಗೆ ನೀಡಿದೆ. ಹಾಲು ಉತ್ಪಾದಕರಿಗೆ ಫೆ.1ರಿಂದ ಲೀಟರ್‌ಗೆ 3 ರೂ. ಸಹಾಯಧನ ನೀಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ತಿಳಿಸಿದರು.
    ನಗರದ ಪಶು ಆಸ್ಪತ್ರೆ ಆವರಣದ ಹಾವೆಮುಲ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 15ನೇ ಹಾಲು ಒಕ್ಕೂಟವಾಗಿ ಹಾವೆಮುಲ್ ರಚನೆಯಾದ ಬಳಿಕ, ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 3.36 ಕೋಟಿ ರೂ. ಲಾಭದಲ್ಲಿದೆ. ಒಕ್ಕೂಟವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
    ಅತಿವೃಷ್ಠಿಯಿಂದಾಗಿ ಮೇವಿನ ಕೊರತೆ, ಪಶು ಆಹಾರದ ಬೆಲೆ ಹೆಚ್ಚಾಗಿದೆ. ಜತೆಗೆ ಚರ್ಮಗಂಟು ರೋಗದಿಂದಾಗಿ ಹಾಲು ಉತ್ಪಾದಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ, ಫೆ.1ರಿಂದ ಹಾಲು ಶೇಖರಣೆ ದರವನ್ನು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಿಸಿ, ಈ ಮೊತ್ತವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು. ಹೈನುಗಾರರಿಗೆ ಪ್ರತಿ ಲೀಟರ್ ಆಕಳು ಹಾಲಿಗೆ 28 ರೂ.ನಿಂದ 31 ರೂ.ಗೆ ಹೆಚ್ಚಿಸಲಾಗಿದೆ. ಎಮ್ಮೆಯ ಹಾಲಿಗೆ 42ರಿಂದ 45 ರೂ.ಗೆ ಹೆಚ್ಚಿಸಲಾಗಿದೆ. ಇದರ ಜತೆಗೆ ಸರ್ಕಾರದಿಂದ ಪ್ರತಿ ಲೀಟರ್‌ಗೆ 5 ರೂ. ಪ್ರೋತ್ಸಾಹ ಧನ ಸಿಲಗಿದೆ ಎಂದರು.
    ಸುದ್ದಿಗೊಷ್ಠಿಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ, ನಿರ್ದೇಶಕ ಹನುಮಂತಗೌಡ ಭರಮಣ್ಣವರ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಎಸ್.ವಿ.ಸಂತಿ, ಇತರರಿದ್ದರು.
    ಸಂಘಗಳಿಗೆ 1 ರೂ. ಪ್ರೋತ್ಸಾಹ ಧನ
    ಜಿಲ್ಲೆಯ 425 ಹಾಲು ಉತ್ಪಾದಕ ಸಂಘಗಳ ಮೂಲಕ ಈಗಾಗಲೇ ಸಂಗ್ರಹವಾಗುತ್ತಿರುವ ಹಾಲಿಗಿಂತ ಹೆಚ್ಚುವರಿಯಾಗಿ ಹಾಲು ಸಂಗ್ರಹಿಸುವ ಹಾಲು ಉತ್ಪಾದಕ ಸಂಘಗಳಿಗೆ ಫೆ.1ರಿಂದ ಪ್ರತಿ ಲೀಟರ್‌ಗೆ 1 ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಖಾಸಗಿ ಹಾಲು ಕಂಪನಿಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಜತೆಗೆ ಪ್ರಸ್ತುತ ನಿತ್ಯ 1.20 ಲಕ್ಷ ಲೀ. ಹಾಲು ಸಂಗ್ರಹಿಸಲಾಗುತ್ತಿದ್ದು, 2 ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಸಂಘಗಳ ಪ್ರೋತ್ಸಾಹ ಧನ ಹೆಚ್ಚಿಸಲಾಗಿದೆ ಎಂದು ಬಸವರಾಜ ಅರಬಗೊಂಡರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts