More

    ಧಾರವಾಡ ಲೋಕಸಭಾ ಕ್ಷೇತ್ರ; ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರ ಸ್ಪರ್ಧೆ ಘೋಷಣೆ

    ಬೆಂಗಳೂರು: ಧಾರವಾಡ ಲೋಕಸಭಾ ಕ್ಷೇತ್ರ ಈ ಬಾರಿ ರಾಜ್ಯದ ಗಮನ ಸೆಳೆಯುತ್ತಿದ್ದು, ಶಿರಹಟ್ಟಿಯ ಪಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿ ಕುತೂಹಲ ಕೆರಳಿಸಿದ್ದಾರೆ.

    ಬೆಂಗಳೂರಿನಲ್ಲಿ ತಮ್ಮ ಭಕ್ತರು, ಬೆಂಬಲಿಗರು, ಹಿತೈಷಿಗಳು, ಅಭಿಮಾನಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ತಮ್ಮ ಸ್ಪರ್ಧೆಯನ್ನು ಘೋಷಿಸಿದರು.

    ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ತಮ್ಮ ಸ್ಪರ್ಧೆಗೆ ಭಕ್ತರು, ಕ್ಷೇತ್ರದ ಮತದಾರರ ಒತ್ತಡವೇ ಕಾರಣ ಎಂದು ಹೇಳಿದರು.

    ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಕೈಯಲ್ಲಿ ನೋವು ಅನುಭವಿಸಿದ ಜನರ ಧ್ವನಿಯಾಗಿ ನಾನು ಹೋರಾಟ ನಡೆಸುತ್ತಿದ್ದೇನೆ. ಅವರ ಆಡಳಿತ ವಿನಾಶಕಾರಿಯಾಗಿದೆ. ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯವನ್ನು ಕಡೆಗಣಿಸಲಾಗಿದೆ. ವೀರಶೈವ-ಲಿಂಗಾಯತ ಮತ್ತು ಇತರ ಸಮುದಾಯಗಳನ್ನು ತುಳಿಯಲು ನೋಡುತ್ತಿದ್ದಾರೆ ಮತ್ತು ಲಿಂಗಾಯತ ಮಠಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಧಿಕಾರ ದರ್ಪ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಎಲೆಕ್ಷನ್ ಫಿಕ್ಸಿಂಗ್ ನಡೆದಿದೆ

    ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಧಾರವಾಡ ಕ್ಷೇತ್ರ ಮತ್ತು ಸುತ್ತಮುತ್ತಲಿನ ಭಾಗದ ಜನರು ಎರಡೂ ಪಕ್ಷಗಳು ಮ್ಯಾಚ್ ಫಿಕ್ಸಿಂಗ್‌ನಂತಹ ಚುನಾವಣಾ ಫಿಕ್ಸಿಂಗ್‌ಗೆ ಇಳಿದಿವೆ ಎಂದು ಭಾವಿಸುತ್ತಾರೆ ಎಂದರು.

    ಕಾವಿಧಾರಿಗಳು ಘೋಷಿಸಿದ ಧರ್ಮಯುದ್ಧ

    ಧಾರವಾಡದ ಮತದಾರರು ನನ್ನನ್ನೇ ಅಭ್ಯರ್ಥಿಯನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ಇದು ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಸ್ವಾರ್ಥ ರಾಜಕಾರಣಿಗಳ ವಿರುದ್ಧ ತಮ್ಮ ಘನತೆಗೆ ಬೆಲೆಕೊಡುವ ಮತ್ತು ‘ಕಾವಿಧಾರಿ’ಗಳು ಘೋಷಿಸಿದ ‘ಧರ್ಮ ಯುದ್ಧ’. ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸಲು ರಾಜಕೀಯಕ್ಕೆ ಬರುತ್ತಿದ್ದೇನೆ. ಧರ್ಮ ಯುದ್ಧವು ಕೇವಲ ಈ ಚುನಾವಣೆಗೆ ಸೀಮಿತವಾಗಿಲ್ಲ, ಜೀವ ಇರುವವರೆಗೂ ಮುಂದುವರೆಯಲಿದೆ. ನೊಂದವರ ಕಷ್ಟಕ್ಕೆ ಸ್ಪಂದಿಸಲು ಈ ನಿರ್ಧಾರ ಎಂದು ಹೇಳಿದರು.

    ಸಾಮಾಜಿಕ ಜಾಲತಾಣ ದುರ್ಬಳಕೆ

    ಅಧಿಕಾರದ ಮತ್ತು ಸಂಪತ್ತಿನ ಮದದಲ್ಲಿ ಪ್ರಲ್ಹಾದ್ ಜೋಶಿ ಬದುಕುತ್ತಿದ್ದಾರೆ. ಪ್ರಲ್ಹಾದ್ ಜೋಶಿ ಅವರ ಚೇಲಾಗಳು ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ. ಪ್ರಲ್ಹಾದ್ ಜೋಶಿ ಅವರೇ ನಿಮ್ಮ ಯಾವುದೇ ಕುತಂತ್ರ ನಮ್ಮ ಮುಂದೆ ನಡೆಯಲ್ಲ ಎಂದು ಕಿಡಿಕಾರಿದರು.

    ತಮ್ಮ ಸ್ಪರ್ಧೆ ಮತದಾರರ ತೀರ್ಮಾನ

    ಪ್ರಲ್ಹಾದ್ ಜೋಶಿ ದುರಾಡಳಿತ ಬಗ್ಗೆ ಹೈಕಮಾಂಡ್ ನಾಯಕರು ಗಮನಹರಿಸಿತ್ತಿಲ್ಲ. ಅವರಿಗೆ ಅದೇ ಬೇಕಾಗಿದೆ ಅನಿಸುತ್ತದೆ. ಕಾರಣ ತಾವು ರಾಜಕೀಯ ಪ್ರವೇಶ ಮಾಡಬೇಕಾಯಿತು. ಈ ಚುನಾವಣೆ ಎರಡು ರಾಷ್ಟ್ರೀಯ ಪಕ್ಷದ ವಿರುದ್ಧ ಸ್ವಾಭಿಮಾನದ ಯುದ್ಧ ಆಗಿದೆ. ಇದು ಮತದಾರರು ಮಾಡಿದ ತೀರ್ಮಾನ. ಹೀಗಾಗಿ ನನಗೆ ಸ್ಪರ್ಧೆ ಮಾಡುವಂತೆ ಮತದಾರರು ಒತ್ತಾಯ ಮಾಡಿದ್ದಾರೆ ಎಂದು ಹೇಳಿದರು.

    ಜೋಶಿ ಭಯದಿಂದ ಮಠಾಧೀಶರ ಹೇಳಿಕೆ

    ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂಧು ಮನವಿ ಮಾಡಿದ್ದಾರೆ. ಆದರೆ ಕೆಲವರು ನನ್ನ ಸ್ಪರ್ಧೆ ಹಿಂದೆ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಕೈವಾಡ ಇದೆ ಎಂದು ಹೇಳುತ್ತಿದ್ದಾರೆ. ಇದೆಲ್ಲ ಸುಳ್ಳು. ನನ್ನ ವಿರುದ್ಧ ಯಾರೇ ಮಠಾಧೀಶರು ಹೇಳಿಕೆ ಕೊಟ್ಟಿದ್ದರು ಅದು ಪ್ರಲ್ಹಾದ್ ಜೋಶಿ ಅವರ ಭಯಕ್ಕೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

    ನಾನು ಬ್ರಾಹ್ಮಣ ವಿರೋಧಿಯಲ್ಲ

    ನಾನು ಬ್ರಾಹ್ಮಣ ವಿರೋಧಿಯಲ್ಲ, ನಾನು ಬ್ರಾಹ್ಮಣ ಸಮುದಾಯದ ಅಭಿಮಾನಿ. ನಾನು ಭಾವೈಕ್ಯತೆ ಪೀಠದ ಸ್ವಾಮೀಜಿ ಆಗಿರುವುದರಿಂದ ನಾನು ಯಾವುದೇ ಜಾತಿಯನ್ನು ಟೀಕಿಸುವುದಿಲ್ಲ. ಯಾವುದೇ ಜಾತಿಗೂ ಅಭಿಮಾನ ತೋರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಕಾಂತೇಶ್‌ಗೆ ಟಿಕೆಟ್ ತಪ್ಪಿಸಿದ್ದು ಅವರೇ

    ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಒಂದೂವರೆ ವರ್ಷದಿಂದ ಹಾವೇರಿಯಲ್ಲಿ ಸಕ್ರಿಯರಾಗಿದ್ದರು. ಅವರಿಗೆ ಟಿಕೆಟ್ ತಪ್ಪಿಸಿರುವುದು ಪ್ರಲ್ಹಾದ್ ಜೋಶಿ. ನಾನು ಹಿಂದೆಯೇ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಪುತ್ರನಿಗೆ ಪ್ರಲ್ಹಾದ್ ಜೋಶಿಯನ್ನು ನಂಬಬೇಡಿ ಎಂದು ಹೇಳಿದ್ದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ ಎಂದು ಹೇಳಿದರು.

    ರಾಜ್ಯದಲ್ಲಿ ಲಿಂಗಾಯತ, ಗೌಡ ಜನಾಂಗ ಬಿಟ್ಟರೆ ಕುರುಬ ಸಮಾಜ ದೊಡ್ಡದಿದೆ. ಆದರೆ ಕುರುಬ ಸಮಾಜಕ್ಕೆ ಒಂದೇ ಒಂದು ಟಿಕೆಟ್‌ನ್ನೂ ಬಿಜೆಪಿ ನೀಡಿಲ್ಲ. ರೆಡ್ಡಿ, ಜಂಗಮ, ಲಂಬಾಣಿ ಸೇರಿ ನೂರಾರು ಸಮಾಜಗಳು ಅಲಕ್ಷ್ಯಕ್ಕೆ ಒಳಗಾಗಿವೆ. ಎಲ್ಲ ಸಮಾಜಗಳು ಇಂದು ಬಿಜೆಪಿಯಿಂದ ನೋವು ಅನುಭವಿಸಿವೆ. ಶೇ.2 ಇರುವ ಸಮುದಾಯದ ನಾಯಕರಿಗೆ ಎರಡು ಕ್ಯಾಬಿನೆಟ್ ಹುದ್ದೆ ನೀಡಿದ್ದಾರೆ.
    ಲಿಂಗಾಯತ ಸಮುದಾಯದವರಿಗೆ ಕ್ಯಾಬಿನೆಟ್ ಸ್ಥಾನದಲ್ಲಿ ಖಾತೆ ಕೊಟ್ಟಿದ್ದು ಬರೀ ರಾಜ್ಯ ಖಾತೆ ಅಷ್ಟೇ. ತೇಜಸ್ವಿ ಸೂರ್ಯ ಅವರನ್ನು ತುಮಕೂರಿನಲ್ಲಿ ನಿಲ್ಲಿಸಿ. ಸೋಮಣ್ಣ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಿಲ್ಲಿಸಬೇಕಿತ್ತು. ಆಗ ಯಾರ ತಾಕತ್ತು ಹೇಗಿದೆ ಎಂದು ಗೊತ್ತಾಗ್ತಿತ್ತು. ಲಿಂಗಾಯತ ಸಮುದಾಯದ ನಾಯಕರಿಗೆ ಎರಡು ಅಥವಾ ಮೂರು ಅವಧಿಯಲ್ಲಿ ಅವಕಾಶ ಕೊಡುತ್ತಾರೆ. ಬೇರೆ ಸಮುದಾಯದ ನಾಯಕರಿಗೆ ಹತ್ತು ಅವಧಿಯವರೆಗೆ ಅವಕಾಶ ಕೊಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪ್ರಲ್ಹಾದ್ ಜೋಶಿ ಹೀರೋ. ಅಭಿವೃದ್ಧಿ ವಿಚಾರದಲ್ಲಿ ಝಿರೋ. ತಮ್ಮ ಸಮುದಾಯದ ಬೆಳವಣಿಗೆ ಅಷ್ಟೇ ನೋಡುತ್ತಾರೆ. ಬೇರೆ ಸಮುದಾಯದವನ್ನು ಕಡೆಗಣಿಸುತ್ತಾರೆ. ನಮ್ಮ ಸಮುದಾಯವನ್ನು ತುಳಿದು ರಾಜಕಾರಣ ಮಾಡಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts