More

    ಹಾವೇರಿ ಜಿಲ್ಲೆಯ ಸೊಗಡು ಬಿಂಬಿಸಿ

    ಹಾವೇರಿ: ಜಿಲ್ಲೆಯಲ್ಲಿ ದಾಸರು, ಶರಣರು, ಕವಿಗಳು ಹಾಗೂ ಸಾಹಿತಿಗಳು ಸೇರಿದಂತೆ ಅನೇಕ ಮಹನೀಯರು ಜನಿಸಿದ್ದಾರೆ. ಜಿಲ್ಲೆಯ ಸೊಗಡನ್ನು ಸಮ್ಮೇಳನದಲ್ಲಿ ಬಿಂಬಿಸಬೇಕು. ಸಮ್ಮೇಳನ ಅಚ್ಚುಕಟ್ಟಾಗಿರಲು ಮಂತ್ರಿಗಳು, ಶಾಸಕರು, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಹಾಗೂ ಪದಾಧಿಕಾರಿಗಳೊಂದಿಗೆ ರ್ಚಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಮಟ್ಟಿಗೆ ಸಮ್ಮೇಳನವು ಹಲವು ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಸಮ್ಮೇಳನವನ್ನು ವ್ಯವಸ್ಥಿತವಾಗಿ, ಅರ್ಥಪೂರ್ಣವಾಗಿ ಆಯೋಜಿಸಿ ಯಶಸ್ವಿಗೊಳಿಸಬೇಕು. ಸಮ್ಮೇಳನವು ದೇಶ ಹಾಗೂ ರಾಜ್ಯದ ಕನ್ನಡಿಗರ ಒಗ್ಗೂಡುವಿಕೆಯಾಗಿದೆ. ಕಲೆ, ಸಾಹಿತ್ಯ, ಸಂಸ್ಕೃತಿ ಪರಾಮಶಿಸುವ ಹಾಗೂ ಹಳೆಗನ್ನಡ, ಹೊಸಗನ್ನಡ ಸಮ್ಮಿಲನ, ಪ್ರತಿಭೆಗಳ ಗುರುತಿಸುವ ಕೆಲಸವಾಗಿದೆ. ಜಿಲ್ಲೆಯ ಪ್ರತಿಭೆಗಳಿಗೆ ಅವಕಾಶ ದೊರೆಯಲಿದೆ ಎಂದರು.

    ಕಸಾಪ ಅಧ್ಯಕ್ಷ ಮನು ಬಳಿಗಾರ ಮಾತನಾಡಿ, ಈಗಾಗಲೇ ಸಮ್ಮೇಳನಕ್ಕೆ ಸ್ಥಳ ಗುರುತಿಸಲಾಗಿದೆ. ಫೆ.26ರಿಂದ 3 ದಿನ ನಡೆಯುವ ಸಮ್ಮೇಳನದಲ್ಲಿ ಪ್ರತಿದಿನ 2ಲಕ್ಷದಂತೆ ಒಟ್ಟು ಆರು ಲಕ್ಷ ಜನ ಸೇರುವ ಸಾಧ್ಯತೆಯಿದೆ. ಕೋವಿಡ್ ನಿಯಮಗಳ ನಡುವೆ ಸಮ್ಮೇಳನ ಆಯೋಜಿಸಲಾಗುತ್ತಿದೆ. ಕರೊನಾ ಕಡಿಮೆಯಾಗುತ್ತದೆ ಎಂಬ ಸಕಾರಾತ್ಮಕ ದೃಷ್ಟಿಯಿಂದ ಖರ್ಚು ವೆಚ್ಚವಿಲ್ಲದ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು. ಸಮ್ಮೇಳನದಲ್ಲಿ ವಿಶ್ವದೆಲ್ಲೆಡೆಯಿಂದ ಕವಿಗಳು, ಸಾಹಿತಿಗಳು ಭಾಗವಹಿಸಲಿದ್ದಾರೆ. ವಸತಿಗಾಗಿ ದಾವಣಗೆರೆಯಿಂದ ಹುಬ್ಬಳ್ಳಿವರೆಗೆ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಸಾರಿಗೆ ವ್ಯವಸ್ಥೆ ಹೆಚ್ಚು ಮಾಡಬೇಕಾಗಿದೆ ಎಂದರು. ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಯಾವುದೇ ಲೋಪಗಳು ಆಗದಂತೆ ಸಮ್ಮೇಳನ ಆಯೋಜಿಸಬೇಕು. ವೇದಿಕೆ, ಆಹಾರ ಇತರ ವಿಷಯಗಳ ಕುರಿತು ತೀರ್ಮಾನ ಕೈಗೊಳ್ಳಲು ಆಯಾ ಸಮಿತಿಗಳು ಅನುಮತಿ ನೀಡಬೇಕು ಎಂದರು.

    ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀಲರಗಿ ಮಾತನಾಡಿ, ನಗರ ಪ್ರವೇಶಿಸುವ 3 ಪ್ರಮುಖ ರಸ್ತೆಗಳ ಅಭಿವೃದ್ಧಿ ಹಾಗೂ ಲೈಟಿಂಗ್ ವ್ಯವಸ್ಥೆಗೆ ಸರ್ಕಾರದಿಂದ 10 ಕೋಟಿ ರೂ. ಅನುದಾನ ಮಂಜೂರು ಮಾಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.

    ಸಭೆಯಲ್ಲಿ ಭಾಗವಹಿಸಿದ ಕವಿಗಳು, ಸಾಹಿತಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವೇದಿಕೆಗಳಿಗೆ ಕವಿಗಳ, ಶರಣರ ಹೆಸರು ಹಾಕುವಂತೆ, ಸಮ್ಮೇಳನದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ, ಈಗಾಗಲೇ ರಚಿಸಲಾದ ಸಮಿತಿಗಳಲ್ಲಿ ಕೆಲವರ ಹೆಸರು ಸೇರಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

    ಸಭೆಯಲ್ಲಿ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಎಸ್​ಪಿ ಕೆ.ಜಿ. ದೇವರಾಜ್, ಜಿಪಂ ಸಿಇಒ ಮೊಹಮ್ಮದ ರೋಶನ್, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಡಾ. ದಿಲೀಪ್ ಶಶಿ ಇತರರಿದ್ದರು.

    ಅಂದಾಜು 15 ಕೋಟಿ ರೂ. ವೆಚ್ಚ: ಸಮ್ಮೇಳನಕ್ಕೆ 15 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಸರ್ಕಾರದಿಂದ 10 ಕೋಟಿ ರೂ., ಸರ್ಕಾರಿ ನೌಕರರಿಂದ 1.5 ಕೋಟಿ ರೂ., ಸಂಘ-ಸಂಸ್ಥೆಗಳಿಂದ 1ಕೋಟಿ ರೂ. ಹಾಗೂ ಇತರ ಮೂಲಗಳಿಂದ 2ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಹೇಳಿದರು. ಜಿಲ್ಲಾ ಉಸ್ತವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು, ಕಸಾಪ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನೊಳಗೊಂಡ ಸ್ವಾಗತ, ಹಣಕಾಸು, ವೇದಿಕೆ ನಿರ್ವಣ, ವಸತಿ, ಪ್ರತಿನಿಧಿಗಳ ನೋಂದಣಿ, ಮೆರವಣಿಗೆ, ಪ್ರಚಾರ, ಆರೋಗ್ಯ, ಸಾಂಸ್ಕೃತಿಕ, ಮಹಿಳಾ ಸಮಿತಿ ಸೇರಿ 14ಸಮಿತಿ ರಚಿಸಲಾಗಿದೆ ಎಂದರು.

    ವಸ್ತುಸ್ಥಿತಿಗೆ ತಕ್ಕಂತೆ ವ್ಯಯಿಸಿ: ಕೋವಿಡ್​ನಿಂದಾಗಿ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಸಮ್ಮೇಳನವನ್ನು ಪ್ರತಿ ಬಾರಿಯಂತೆ 3 ದಿನ ಆಯೋಜಿಸಬೇಕೋ? ಅಥವಾ ದಿನ ಕಡಿಮೆಗೊಳಿಸಬೇಕೋ? ಎಂಬುದನ್ನು ತೀರ್ವನಿಸುವಂತೆ ಕಸಾಪ ಅಧ್ಯಕ್ಷ ಮನು ಬಳಿಗಾರ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಸಾಪ ಹಿರೇಕೆರೂರ ತಾಲೂಕಾಧ್ಯಕ್ಷ ರಾಮು ಮುದಿಗೌಡ್ರ, ನಮ್ಮ ಜಿಲ್ಲೆಯಲ್ಲಿಯೂ 3ದಿನ ಸಮ್ಮೇಳನ ನಡೆಸಬೇಕು. ಸರ್ಕಾರ ಅದಕ್ಕೆ ಅನುದಾನ ಕೊಡಬೇಕು ಎಂದರು. ಇದರಿಂದ ಸಭೆಯಲ್ಲಿ ಸ್ವಲ್ಪ ಗೊಂದಲ ಉಂಟಾಯಿತು. ಆಗ ಸಚಿವ ಬಸವರಾಜ ಬೊಮ್ಮಾಯಿ ಅವರು, ಸಮ್ಮೇಳನಕ್ಕೆ ಬೇಕಾದ ಹಣಕಾಸು ಕುರಿತು ಮುಖ್ಯಮಂತ್ರಿಯೊಂದಿಗೆ ರ್ಚಚಿಸಿ ಅಗತ್ಯ ಅನುದಾನ ಒದಗಿಸಲಾಗುವುದು. ಸಮ್ಮೇಳನಕ್ಕೆ ನಿಗದಿತ ಬಜೆಟ್ ಘೊಷಿಸದೇ ವಸ್ತುಸ್ಥಿತಿಗೆ ತಕ್ಕಂತೆ ಖರ್ಚು ಮಾಡಬೇಕು. ಬಜೆಟ್ ನೋಡಿಕೊಂಡು ಸಮ್ಮೇಳನ ಆಯೋಜಿಸುವ ಕೆಲಸವಾಗಬಾರದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts