More

    ಮರ್ಕಟ ಬಿಡುಗಡೆಗೆ ಜನತಾ ಕರ್ಫ್ಯೂ ಅಡ್ಡಿ

    ಹಟ್ಟಿಚಿನ್ನದಗಣಿ: ರಂಗಭೂಮಿ, ಕಿರುಚಿತ್ರ, ಧಾರವಾಹಿ, ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿರುವ ಇಲ್ಲಿನ ಕಲಾವಿದ ವೀರಭದ್ರ(ಭದ್ರಿ) ನಾಯಕನಟನಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರ ‘ಮರ್ಕಟ’ದ ಬಿಡುಗಡೆಗೆ ಜನತಾ ಕರ್ಫ್ಯೂ ಅಡ್ಡಿಯಾಗಿದೆ.

    ಹೈದರಾಬಾದ್ ಕರ್ನಾಟಕದ ಬೆರಳೆಣಿಕೆಯಷ್ಟು ನಟರು ಚಂದನವನದಲ್ಲಿ ಬೆಳಕಿಗೆ ಬರುತ್ತಿದ್ದು ಈ ಪೈಕಿ ಭದ್ರಿ ಕೂಡ ಒಬ್ಬರು. ಚಾಲೇಂಜಿಂಗ್ ಸ್ಟಾರ್ ದರ್ಶನ್ ಮಾರ್ಗದರ್ಶನದಲ್ಲಿ ಬೆಳೆಯುತ್ತಿರುವ ಈ ಪ್ರತಿಭೆ ಅಭಿನಯಿಸಿದ ‘ಮರ್ಕಟ’ ಸಿನಿಮಾದ ಧ್ವನಿ ಸುರುಳಿ ಮಾರ್ಚ್‌ನಲ್ಲಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಸಮ್ಮುಖದಲ್ಲಿ ಬಿಡುಗಡೆಯಾಗಿತ್ತು. ಚಿತ್ರ ಬಿಡುಗಡೆ ಮಾಡಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್ ಆಗಿದೆ.

    ನಡೆದು ಬಂದ ದಾರಿ
    ಹಟ್ಟಿ ಬಳಿಯ ಗೌಡೂರು ಗ್ರಾಮದ ವೀರಭದ್ರ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲಿ ಪೂರ್ಣಗೊಳಿಸಿ, ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪಿಯುಸಿ, ಪದವಿ ಅಭ್ಯಾಸ ಮುಗಿಸಿದ್ದಾರೆ. ಬಿಡುವಿನ ವೇಳೆಯಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತ ಡಾನ್ಸ್ ಕಲಿತು, 2009-10ರಲ್ಲಿ ಸಿದ್ಧಗಂಗಾ ಮಠದಲ್ಲಿ ಏರ್ಪಡಿಸಿದ್ದ ಏಕಲವ್ಯ ನಾಟಕದಲ್ಲಿ ಬೇಡನ ಪಾತ್ರ ಅಭಿನಯಿಸಿ, ಮಿಂಚಿದ್ದಾರೆ. ‘ದ್ರೌಪದಿ ವಸ್ತ್ರಾಪಹರಣ’ ನಾಟಕದಲ್ಲಿ ಧರ್ಮರಾಯನ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಕಿನ್ನರಿ ಧಾರವಾಹಿಯಲ್ಲಿ ಹೂ ಮಾರುವವನ ಪಾತ್ರ, ಪುಟ್ಟಗೌರಿಯಲ್ಲಿ ಬರ್ತಡೇ ಪಾರ್ಟಿ ಬಾಯ್ ಪಾತ್ರ ಅಭಿನಯಿಸಿ ಗಮನ ಸೆಳೆದಿದ್ದರು. ಜನಶ್ರೀ ವಾಹಿನಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದರ್ಶನ ಬಿಗ್ ಫ್ಯಾನ್ ಅವಾರ್ಡ್‌ಗೆ ಆಯ್ಕೆಯಾಗಿದ್ದಾರೆ. ನಂತರ ಸಿನಿಮಾಕ್ಕೆ ಪ್ರವೇಶ ಪಡೆದ ಭದ್ರಿ, ನಮ್ಮೂರ ಹುಡುಗರು, ಈ ಹೂ ನಿನಗಾಗಿ ಸಿನಿಮಾಗಳಲ್ಲಿ ಖಳ ನಾಯಕ ಪಾತ್ರ ನಿರ್ವಹಿಸಿದ್ದಾರೆ. ಕಲ್ಲೂರ ಕ್ರಾಸ್ ಎಂಬ ಹಾರರ್ ಮೂವಿಯಲ್ಲಿ ದೆವ್ವದ ಪಾತ್ರ ನಿರ್ವಹಿಸಿ ಗಮನ ಸೆಳೆದ್ದಿದ್ದಾರೆ. ಪ್ರೋಡಕ್ಸ್‌ನ್ ನಂಬರ-02 ಚಿತ್ರದಲ್ಲಿ ಖ್ಯಾತ ಖಳನಟ ಶೋಭರಾಜ್, ರಮೇಶ ಭಟ್, ಉಮೇಶ ಜತೆ ಗಾಸಿಫ್ (ಶಕುನಿ)ಹರಡುವ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ವಿಜಯ ವೆಂಕಟ ನಟಿಸಿರುವ, ಮಂಜು ವಿಷ್ಣುವರ್ಧನ ನಿರ್ದೇಶನದ ಸ್ನೇಹಚಕ್ರ ಚಿತ್ರದಲ್ಲಿ ಭದ್ರಿ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ.

    ಹಳ್ಳಿ ಪರಿಸರದಲ್ಲಿ ಬಡತನ ಉಂಡುಟ್ಟು ಬೆಳೆದಿದ್ದೇನೆ. ಸಿದ್ಧಾಗಂಗಾ ಮಠ ಅಕ್ಷರ, ಅನ್ನ, ಆಶ್ರಯ ನೀಡಿದೆ. ಕಷ್ಟಪಟ್ಟು ನಟನೆ, ನೃತ್ಯ, ಕಲಿತು, ಶ್ರೀಮಠದ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ನೀಡಿದ್ದೇನೆ. ಸಣ್ಣ-ಪುಟ್ಟ ಪಾತ್ರಗಳ ಅವಕಾಶ ಬಳಸಿಕೊಂಡಿದ್ದೇನೆ. 12 ಚಿತ್ರಗಳಲ್ಲಿ ನಟಿಸಿದ್ದು, ಚಿತ್ರಿಕರಣ ಇಲ್ಲದಿದ್ದಾಗ ತುಮಕೂರಿನ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದೇನೆ. ಚೊಚ್ಚಲ ಚಿತ್ರ ಮರ್ಕಟಕ್ಕೆ ಲಾಕ್‌ಡೌನ್ ಅಡ್ಡಿಯಾಗಿದೆ.
    | ವೀರಭದ್ರ(ಭದ್ರಿ), ಮರ್ಕಟ ಚಿತ್ರದ ನಾಯಕ ನಟ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts