More

    ಹಸು ಮೇಯಿಸುತ್ತಿದ್ದವರ ಮೇಲೆ ಚಿರತೆ ದಾಳಿ

    ಕನಕಪುರ/ಮಾಗಡಿ: ಒಂದೆಡೆ ಚಿರತೆಗಳನ್ನು ಬೋನು ಇಟ್ಟು ಸೆರೆ ಹಿಡಿಯುವ ಪಕ್ರಿಯೆ ನಡೆಯುತ್ತಿದ್ದರೂ ರಾಮನಗರ ಜಿಲ್ಲೆಯ ವಿವಿಧೆಡೆ ಚಿರತೆಗಳ ಹಾವಳಿ ಜಾಸ್ತಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮಂಗಳವಾರ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಚಿರತೆ ದಾಳಿಯಿಂದ ಗಾಯಗೊಂಡಿದ್ದಾರೆ. ಒಂದು ಕುರಿ ಚಿರತೆಗೆ ಬಲಿಯಾಗಿದೆ. ಚಿರತೆಗಳು ನರಭಕ್ಷಕವಾಗುತ್ತಿರುವುದು ಆತಂಕ ಇಮ್ಮಡಿಗೊಳಿಸಿದೆ.

    ಕನಕಪುರ ತಾಲೂಕಿನ ಮರಳವಾಡಿ ಸಮೀಪದ ಆನೆಹೊಸಹಳ್ಳಿಯಲ್ಲಿ ಹಸು ಮೇಯಿಸುತ್ತಿದ್ದ ರೈತನನ್ನು ಗಾಯಗೊಳಿಸಿದೆ. ಹೊಸಹಳ್ಳಿಯ ಮಾದೇಗೌಡ (70) ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬೆಳಗ್ಗೆ ಜಮೀನಿನ ಬಳಿ ಹಸು ಮೇಯಿಸುತ್ತಿದ್ದಾಗ ಪ್ರತ್ಯಕ್ಷವಾದ ಚಿರತೆ ಹಸು ಮೇಲೆ ಎರಗಿದೆ. ಹಸು ರಕ್ಷಿಸಲು ಹೋದ ಮಾದೇಗೌಡರ ತಲೆ, ಎದೆ, ಕೈಗಳಿಗೆ ಗಾಯಗಳಾಗಿವೆ. ಗಾಬರಿಗೊಂಡ ಹಸು ಕೊಂಬಿನಿಂದ ಪ್ರತಿದಾಳಿಗೆ ಮುಂದಾದಾಗ ಚಿರತೆ ಓಡಿದೆ. ಮಾದೇಗೌಡರ ಕಿರುಚಾಟ ಕೇಳಿದ ಸುತ್ತಮುತ್ತಲ ಗ್ರಾಮಸ್ಥರು ಅವರನ್ನು ಮರಳವಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಲಯ ಅರಣ್ಯಾಧಿಕಾರಿ ದಿನೇಶ್, ಡಿಆರ್‌ಎಫ್‌ಒ ರಮೇಶ್, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇದೇ ಮೊದಲು: ಈ ಭಾಗದಲ್ಲಿ ಚಿರತೆ ದಾಳಿ ನಡೆದಿರುವುದು ಇದೇ ಮೊದಲು. ಈಗಾಗಲೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಬಿಳಿಕಲ್ಲು ಅರಣ್ಯ ಪ್ರದೇಶದಿಂದ ಎರಡು ಚಿರತೆಗಳು ಬಂದಿವೆ. ಆನೆಹೊಸಹಳ್ಳಿ ಬಳಿಯೂ ಚಿರತೆ ಸೆರೆಗೆ ಬೋನು ಇಡಲಾಗಿದೆ. ಇದಕ್ಕೂ ಮೊದಲು ಮಲ್ಲಿಗೆಮೆಟ್ಟಿಲು ಬಳಿಯೂ ಬೋನು ಇಡಲಾಗಿತ್ತು. ಈ ಘಟನೆ ನಡೆದ ಸ್ಥಳದ ಸಮೀಪವೂ ಈಗ ಬೋನು ಇಡಲಾಗುವುದು. ಗಾಯಗೊಂಡ ವ್ಯಕ್ತಿಗೆ ಇಲಾಖೆಯಿಂದ ದೊರೆಯುವ ಪರಿಹಾರ ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ದಿನೇಶ್ ಹಾಗೂ ಡಿಆರ್‌ಎಫ್‌ಒ ರಮೇಶ್ ತಿಳಿಸಿದ್ದಾರೆ.

    ಮಾಗಡಿಯ ತೊರೆಚೇನಹಳ್ಳಿ ಬಳಿ ದಾಳಿ: ಮತ್ತೊಂದು ಪ್ರಕರಣದಲ್ಲಿ ಮಾಗಡಿ ತಾಲೂಕಿನ ತೊರೆಚೇನಹಳ್ಳಿ ಬಳಿ ಮಂಗಳವಾರ ಸಂಜೆ ಹಸು, ಕುರಿ ಮೇಯಿಸಲು ತೆರಳಿದ್ದ ಇಬ್ಬರ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ. ಕುರಿಯೊಂದನ್ನು ತಿಂದು ಹಾಕಿದೆ.

    ಗ್ರಾಮದ ರೈತ ಬೈಲನರಸಯ್ಯ ಮತ್ತು ಸುಮಲತಾ ಹಸು, ಕುರಿಗಳನ್ನು ಮೇಯಿಸಲು ತೆರಳಿದ್ದ ವೇಳೆ, ಕುರಿಯೊಂದನ್ನು ಚಿರತೆ ತಿನ್ನುತ್ತಿದ್ದುದನ್ನು ನೋಡಿ, ಬಿಡಿಸಲು ಹೋದಾಗ ಆಕೆಯ ಎಡಗಾಲಿಗೆ ಗಾಯ ಮಾಡಿದೆ. ಆಕೆ ಕಿರುಚುತ್ತಿದ್ದಂತೆ ಅಲ್ಲಿಗೆ ತೆರಳಿದ ಬೈಲನರಸಯ್ಯ ಅವರ ಎಡಗಾಲನ್ನೂ ಗಾಯಗೊಳಿಸಿದೆ. ಚಿರತೆಯಿಂದ ತಪ್ಪಿಸಿಕೊಳ್ಳಲು ಬಂಡೆಯ ಮೇಲೆ ಓಡಿಹೋದ ನಂತರ ಚಿರತೆ ಕಾಲ್ಕಿತ್ತಿದೆ. ಗಾಯಗೊಂಡ ಇಬ್ಬರಿಗೂ ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಗ್ರಾಮಸ್ಥರು ಚಿಕಿತ್ಸೆ ಕೊಡಿಸಿದ್ದಾರೆ.

    ಆರ್‌ಐ ನಟರಾಜು, ಅರಣ್ಯ ಇಲಾಖೆ ಸಿಬ್ಬಂದಿ ಚಿದಾನಂದ್, ಗ್ರಾಪಂ ಸದಸ್ಯೆ ಶಿಲ್ಪಾ ಲೋಕೇಶ್, ಶಾಸಕರ ಆಪ್ತ ಕಾರ್ಯದರ್ಶಿ ವೆಂಕಟೇಶ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಚಿರತೆ ಉಪಟಳದಿಂದಾಗಿ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನತೆಗೆ ನೆಮ್ಮದಿಯಿಲ್ಲದಂತಾಗಿದೆ. ನರಭಕ್ಷಕ ಚಿರತೆಗಳನ್ನು ಗುಂಡಿಕ್ಕಿ ಸಾಯಿಸಲು ಸರ್ಕಾರ ಅನುಮತಿ ನೀಡಬೇಕು. ಇಲ್ಲದಿದ್ದರೆ ನಮ್ಮನ್ನೆಲ್ಲ ಬೇರೆಡೆಗೆ ಸ್ಥಳಾಂತರಿಸಿ ಸೌಕರ್ಯ ಒದಗಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರ, ಅರಣ್ಯ ಇಲಾಖೆ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ.

    ಬೋನಿಗೆ ಬಿದ್ದ ಎರಡು ಚಿರತೆಗಳು: ಬೊಡಗನಪಾಳ್ಯ ಹಾಗೂ ತಗ್ಗಿಕುಪ್ಪೆ ಬಳಿ ಇಟ್ಟಿದ್ದ ಬೋನಿಗೆ ಎರಡು ಚಿರತೆಗಳು ಬಿದ್ದಿವೆ. ಕೊತ್ತಗಾನಹಳ್ಳಿ ವೃದ್ಧೆ ಗಂಗಮ್ಮ ಹಾಗೂ ಕದರಯ್ಯನಪಾಳ್ಯದಲ್ಲಿ ಬಾಲಕ ಹೇಮಂತ್ ಚಿರತೆ ದಾಳಿಗೆ ಬಲಿಯಾಗಿದ್ದರು. ಈ ಎರಡೂ ಗ್ರಾಮಗಳ ಮಧ್ಯದಲ್ಲಿರುವ ಬೊಡಗನಪಾಳ್ಯದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನನ್ನು ಗ್ರಾಮಸ್ಥರು ಸ್ಥಳಾಂತರಿಸಿ ಬೇರೆ ಕಡೆ ಇಟ್ಟಿದ್ದಾಗ ಚಿರತೆ ಬಂಧಿಯಾಗಿದೆ.

    ಬೋಡಗನಪಾಳ್ಯದಲ್ಲಿ ಸೋಮವಾರ ಸಂಜೆ ಜ್ಯೋತಿ ಎಂಬ ಯುವತಿ ಮೆದೆಯಲ್ಲಿ ಹುಲ್ಲು ಹಿರಿಯುತ್ತಿದ್ದಾಗ ಚಿರತೆ ದಾಳಿಗೆ ಮುಂದಾಗಿದೆ. ಯುವತಿ ಕಿರುಚಿದಾಗ ಪರಾರಿಯಾಗಿದೆ. ಎಚ್ಚೆತ್ತ ಗ್ರಾಮಸ್ಥರು ಅರಣ್ಯ ಇಲಾಖೆ ಮುತ್ತುರಾಯನಗುಡಿ ಪಾಳ್ಯ ಕಾಲನಿ ಬಳಿ ಇಟ್ಟಿದ್ದ ಬೋನನ್ನು ರಾತ್ರಿ 8 ಗಂಟೆ ಸಮಯದಲ್ಲಿ
    ಗ್ರಾಮದ ಬಳಿ ಇಟ್ಟು ಒಳಗೆ ಮೇಕೆ ಮರಿ ಕಟ್ಟಿದ್ದಾರೆ. ರಾತ್ರಿ 11 ಗಂಟೆ ಸಮಯದಲ್ಲಿ ಒಂದು ಗಂಡು-ಒಂದು ಹೆಣ್ಣು ಚಿರತೆ ಒಟ್ಟಾಗಿ ಬಂದಿದ್ದು, 11 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಒಂದು ಗಂಟೆಗಳ ಕಾಲ ಗ್ರಾಮದ ಸುತ್ತಮುತ್ತ ಓಡಾಡುತ್ತಿದ್ದುದನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಇಲಾಖೆ ಸಿಬ್ಬಂದಿ ಆಗಮಿಸಿ ಚಿರತೆಯನ್ನು ಓಡಿಸಿದ್ದಾರೆ.

    ಮತ್ತೊಂದು ಚಿರತೆ ಸೆರೆ ಮುತ್ತುರಾಯನಗುಡಿ ಪಾಳ್ಯ ಕಾಲನಿಯಲ್ಲಿ 2 ವರ್ಷದ ಹೆಣ್ಣು ಚಿರತೆ ತಗ್ಗಿಕುಪ್ಪೆ ಕೆರೆ ಬಳಿ ಮಂಗಳವಾರ ಬೆಳಗ್ಗೆ ಬೋನಿಗೆ ಬಿದ್ದಿದೆ. ತಗ್ಗಿಕುಪ್ಪೆ, ಕರಗದಹಳ್ಳಿ, ಜೋಗಿಪಾಳ್ಯ, ಕೆಬ್ಬೆಪಾಳ್ಯ, ಬೆಟ್ಟದಾಸಿಪಾಳ್ಯ ಸೇರಿ ಸುತ್ತಮುತ್ತಲ ಗ್ರಾಮಸ್ಥರ ನೆಮ್ಮದಿ ಹಾಳು ಮಾಡಿತ್ತು. ತಗ್ಗಿಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ 6 ತಿಂಗಳಿಂದ ಸುತ್ತಮುತ್ತಲ ಗ್ರಾಮಗಳ ಬಳಿ ಹಗಲಿನಲ್ಲಿಯೇ ಪ್ರತ್ಯಕ್ಷವಾಗುತ್ತಿತ್ತು. ಇದರಿಂದ ರೈತರು ಜಾನುವಾರುಗಳನ್ನು ಮೇಯಿಸಲು ಜಮೀನಿನ ಬಳಿ ಹೋಗಲು ಹೆದರುತ್ತಿದ್ದರು. ಸಮಸ್ಯೆ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದನಂತರ ಗ್ರಾಮದ ಬಳಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸಿಕ್ಕಿಬಿದ್ದಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

    ಸೆರೆ ಸಿಕ್ಕ ಚಿರತೆ ನರಭಕ್ಷಕ ಇರಬಹುದೇ ಎಂಬ ಸಂಶಯ ಗ್ರಾಮಸ್ಥರದ್ದಾಗಿದೆೆ. ಅರಣ್ಯ ಇಲಾಖೆಯವರು ಬೋನು ಇಟ್ಟು ಹೋದರೆ ಮತ್ತೆ ಚಿರತೆ ಸೆರೆ ಸಿಕ್ಕ ನಂತರವಷ್ಟೇ ಬರುತ್ತಾರೆ. ಚಿರತೆ ಸೆರೆ ಹಿಡಿಯಲು ಚಂದಾ ಎತ್ತಿ ಮೇಕೆ ಖರೀದಿಸಿ ಬೋನಿನಲ್ಲಿ ಇಡುವಂತಾಗಿದೆ ಎಂದು ಮುತ್ತುರಾಯನಪಾಳ್ಯ ಕಾಲನಿಯ ಲಕ್ಷ್ಮೀಕಾಂತ್ ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ತೊರೆಚೇನಹಳ್ಳಿ ಲೋಕೇಶ್ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts