More

    ಕ್ರಾಫರ್ಡ್ ಆಸ್ಪತ್ರೆಗೆ ಶೀಘ್ರ ವೈದ್ಯರ ನೇಮಕ

    ಸಚಿವ ಕೆ.ಗೋಪಾಲಯ್ಯ ಭರವಸೆ

    ಸಕಲೇಶಪುರ: ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಶೀಘ್ರದಲ್ಲೇ ವೈದ್ಯರ ನೇಮಕಾತಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕರೊನಾ ನಿಯಂತ್ರಣ ಕ್ರಮ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಾಲೂಕು ಆಸ್ಪತ್ರೆಯಲ್ಲಿ 11 ವೈದ್ಯರ ಅವಶ್ಯಕತೆಯಿದ್ದು, ಕೇವಲ 4 ವೈದ್ಯರು ಕೆಲಸ ಮಾಡುತ್ತಿದ್ದಾರೆ. ವೈದ್ಯಕೀಯ ಸಚಿವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಖಾಲಿ ಸ್ಥಾನ ತುಂಬಲಾಗುವುದು ಎಂದರು.
    ತಾಲೂಕು ವೈದ್ಯಾಧಿಕಾರಿ ಮಹೇಶ್ ಮಾತನಾಡಿ, ಕರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, 445 ಹಳ್ಳಿ ಹಾಗೂ 23 ವಾರ್ಡ್‌ಗಳಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ. 110 ಆಶಾ ಹಾಗೂ 258 ಅಂಗನವಾಡಿ ಕಾರ್ಯಕರ್ತೆಯರು ಮತ್ತು 29 ಆರೋಗ್ಯ ಸಹಾಯಕರು ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
    ತಾಲೂಕಿನಲ್ಲಿ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಒಂದು ಸಾರ್ವಜನಿಕ ಆಸ್ಪತ್ರೆ ಇದೆ. ಆದರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್‌ಗಳ ಕೊರತೆ ಇದೆ ಎಂದರು.
    ವಲಯ ಅರಣ್ಯಾಧಿಕಾರಿ ರವೀಂದ್ರ ಮಾತನಾಡಿ, ತಾಲೂಕಿನಲ್ಲಿ 65 ಕಾಡಾನೆಗಳಿದ್ದು ಮುಂದಿನ ದಿನಗಳಲ್ಲಿ ಅವುಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಪ್ರತಿ ವರ್ಷ 5 ಆನೆಗಳು ಜನ್ಮ ಪಡೆಯುತ್ತಿವೆ. ಇದರಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಹೇಳಿದರು.
    ತಾಪಂ ಸದಸ್ಯ ಯಡೇಹಳ್ಳಿ ಆರ್.ಮಂಜುನಾಥ್ ಮಾತನಾಡಿ, ಕಾಡಾನೆಗಳ ಹಾವಳಿಯಿಂದ ಸಾಕಷ್ಟು ಪ್ರಾಣ ಹಾನಿ ಸಂಭವಿಸಿದೆ. ಆನೆ ಸ್ಥಳಾಂತರ ಅಥವಾ ಇತರ ಯೋಜನೆಗಳು ಆರಂಭದಲ್ಲೇ ವಿಫಲವಾಗುತ್ತಿವೆ. ಯಾವ ಸರ್ಕಾರಗಳೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಕಾಡಾನೆ ಹಾವಳಿ ತಡೆಗೆ ರೈಲ್ವೆ ಕಂಬಿಗಳನ್ನು ಅಳವಡಿಸಲಾಗುತ್ತಿದೆ. ಸಕಲೇಶಪುರ ಭಾಗದಲ್ಲಿ 20 ಕಿ.ಮೀ. ರೈಲ್ವೆ ಕಂಬಿಗಳನ್ನು ಹಾಕಲಾಗುವುದು. ಆನೆ ಸ್ಥಳಾಂತರಕ್ಕೆ ಸಾಕಷ್ಟು ಚರ್ಚೆ ನಡೆದಿದೆಯಾದರೂ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ. ಈ ನಿಟ್ಟಿನಲ್ಲಿ ಪತ್ರ ವ್ಯವಹಾರ ಮುಂದುವರಿದಿದೆ ಎಂದು ತಿಳಿಸಿದರು.
    ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಆರ್.ಶ್ರೀನಿವಾಸ್‌ಗೌಡ, ತಾಪಂ ಅಧ್ಯಕ್ಷ ಶ್ವೇತಾ ಪ್ರಸನ್ನ, ಜಿಪಂ ಸಿಇಒ ಬಿ.ಎ.ಪರಮೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಮ್ ಬಾಬು, ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಸಚಿವರ ಆಪ್ತ ಕಾರ್ಯದರ್ಶಿ ಕಾಂತರಾಜು, ತಹಸೀಲ್ದಾರ್ ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts