More

    ಹೊಸ ತಿರುವು ನೀಡಲು ಹಾಸನ ಜನತೆ ಸಜ್ಜು

    ಕಡೂರು: ಕುಟುಂಬ ರಾಜಕಾರಣದಿಂದ ಬೇಸತ್ತ ಜನ ಈ ಬಾರಿಯ ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಹೊಸ ತಿರುವು ನೀಡಲು ನಿರ್ಧರಿಸಿದ್ದಾರೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ ಶಿವಲಿಂಗೇಗೌಡ ತಿಳಿಸಿದರು.

    ತಾಲೂಕಿನ ಮಚ್ಚೇರಿ ಬಳಿಯ ಬೆಂಕಿಲಕ್ಷ್ಮಯ್ಯ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕಡೂರು ಮತ್ತು ಬೀರೂರು ಬ್ಲಾಕ್ ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ದೇವೇಗೌಡರು ಎರಡು ಬಾರಿ ಮತ್ತು ಮೊಮ್ಮಗ ಪ್ರಜ್ವಲ್ ಒಂದು ಬಾರಿ ಸಂಸದರಾಗಿ ಕಡೂರು ಕ್ಷೇತ್ರಕ್ಕೆ ಇವರುಗಳ ಕೊಡುಗೆ ಏನು ಎಂಬುದನ್ನ ಜನತೆ ಕೇಳುತ್ತಿದ್ದಾರೆ. ಜಾತ್ಯಾತೀತ ಎಂದು ತಮ್ಮ ಪಕ್ಷಕ್ಕೆ ಹೆಸರನ್ನು ಇಟ್ಟುಕೊಂಡು ಮಾಜಿ ಪ್ರಧಾನಿ ದೇವೇಗೌಡರು ಕೋಮುವಾದಿ ಪಕ್ಷದೊಂದಿಗೆ ವಂಶ ಪಾರಂಪರಿಕ ರಾಜಕಾರಣ ಮಾಡಲು ಹೋಗಲು ಕುಟುಂಬದ ಮಕ್ಕಳೇ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಬಿಜೆಪಿ ಸುಳ್ಳಿನ ಪಕ್ಷವಾಗಿದ್ದು. ಮೋದಿ ಅವರ ಆಡಳಿತದಲ್ಲಿ ಜನರನ್ನು ಮೋಸ ಮಾಡುತ್ತಲೇ ಬಂದಿದೆ. ಜಾತಿ ಸಂಘರ್ಷ, ಭಾವನಾತ್ಮಕವಾಗಿ ಜನರನ್ನು ತಪ್ಪು ದಾರಿಗೆ ಎಳೆಯುವುದೇ ಇವರ ಸಾಧನೆಯಾಗಿದೆ ಎಂದರು.
    ನನ್ನನ್ನು ಆರ್ಥಿಕ ತಜ್ಞ ಎಂದು ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ. ನಾನು ಅಧ್ಯಯನ ಮಾಡದೆ ಮಾತನಾಡಿಲ್ಲ. ಕರ್ನಾಟಕದ ಜನತೆ ನನ್ನ ಮಾತುಗಳನ್ನು ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿ ಒಪ್ಪಿದರೆಷ್ಟು? ಬಿಟ್ಟರೆಷ್ಟು?. ರಾಜ್ಯಗಳು ಸಂಕಷ್ಟಕ್ಕೆ ಸಿಲುಕಿದರೆ ಕೇಂದ್ರ ಸರ್ಕಾರ ನೆರವು ನೀಡಬೇಕು. ಅದಕ್ಕೆ ಕಾನೂನು ಇದೆ. ಆದರೆ ಸಿದ್ದರಾಮಯ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲೇ ಕೇಂದ್ರ ಸರ್ಕಾರ ಯಾವ ನೆರವನ್ನೂ ರಾಜ್ಯಕ್ಕೆ ನೀಡಲಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟಿಗೆ ಮೊರೆ ಹೋಗಿದೆ. ಈ ರೀತಿ ಕೇಸ್ ಹಾಕಿಸಿಕೊಳ್ಳಲು ನಾಚಿಕೆಯಾಗುವುದಿಲ್ಲವೆ. ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದವರು ಕೊಡಲಿಲ್ಲ. ಮತ್ತೆ ಯಾವ ಮುಖವಿಟ್ಟುಕೊಂಡು ಇಲ್ಲಿಗೆ ಬರುತ್ತೀರಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
    ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ ನಾವು ತಪ್ಪು ಮಾಡಿದೆವು ಎನಿಸುತ್ತಿದೆ. ಪ್ರತಿ ಕಾಂಗ್ರೆಸ್ ಕಾರ್ಯಕರ್ತರೂ ಪ್ರಾಮಾಣಿಕವಾಗಿ ದುಡಿದು ಸಂಸದರನ್ನಾಗಿಸಿದ ನಂತರ ಪ್ರಜ್ವಲ್ ಅವರು ಕ್ಷೇತ್ರಕ್ಕೇನು ಮಾಡಿದರು? ಎಷ್ಟು ಬಾರಿ ಇಲ್ಲಿಗೆ ಬಂದರು ಎಂಬುದರ ಬಗ್ಗೆ ಇಲ್ಲಿನ ಜನತೆ ಆಕ್ರೋಶಗೊಂಡಿದ್ದಾರೆ. ಇಂತಹವರನ್ನು ಸಂಸದರನ್ನಾಗಿಸಿ ನಾವು ಪಡೆದದ್ದೇನು ಎಂಬುದೇ ತಿಳಿಯಲಿಲ್ಲ. ಇಂತಹವರು ನಮಗೆ ಬೇಕೇ ಎಂದ ಅವರು, ವಂಶಪಾರಂಪರ್ಯ ರಾಜಕಾರಣವನ್ನು ಧೈರ್ಯವಾಗಿ ಎದುರಿಸಿದ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸೋಣ ಎಂದರು.
    ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ಕೇವಲ ಅಧಿಕಾರಕ್ಕಾಗಿ ಆಸೆಪಡುವ ಜಾತ್ಯಾತೀತ ಕುಟುಂಬವನ್ನು ಸೋಲಿಸಿ, ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಚುನಾವಣೆಯನ್ನು ಎದುರಿಸಲು ಕಾರ್ಯಕರ್ತರು ಸಜ್ಜಾಗಬೇಕಿದೆ. ಕಾಂಗ್ರೆಸ್ ಪರವಾದ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಜ್ಯ ಸರ್ಕಾರದ ಜನಪರ ಯೋಜನೆಗಳು ಮತ್ತು ಗ್ಯಾರಂಟಿಗಳ ಅನುಷ್ಠಾನ ಹೆಚ್ಚು ವರದಾನವಾಗಿದೆ. ಬಯಲು ಪ್ರದೇಶವಾದ ಈ ಭಾಗದಲ್ಲಿ ನೀರಾವರಿ ಯೋಜನೆಗಳಿಗೆ, ಅಡಿಕೆ ಮತ್ತು ತೆಂಗು ಬೆಳೆಗೆ ಬೆಂಬಲ ಬೆಲೆ ದೊರಕಿಸಿಕೊಡಲು ಪ್ರಾಮಾಣಿಕವಾಗಿ ವಿಶೇಷ ಆದ್ಯತೆ ನೀಡಿ ಕೆಲಸ ಮಾಡಲಾಗುವುದು ಎಂದರು.
    ಮತಿಘಟ್ಟ ಗ್ರಾಪಂ ಅಧ್ಯಕ್ಷ ರೇವಣ್ಣ, ಜೆಡಿಎಸ್ ಮುಖಂಡ ಮುಬಾರಕ್ ಸೇರಿದಂತೆ ಕೆಲ ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
    ಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಅಂಶುಮಂತ್, ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಎಚ್.ಲಕ್ಷ್ಮಣ್, ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಸೂರು ಚಂದ್ರಮೌಳಿ, ಆಸಂ ಕಲ್ಲೇಶ್, ಮುಖಂಡರಾದ ಬೀರೂರು ದೇವರಾಜ್, ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ತೋಟದಮನೆ ಮೋಹನ್‌ಕುಮಾರ್, ಈರುಳ್ಳಿ ರಮೇಶ್, ಶಿವಾನಂದಸ್ವಾಮಿ, ಎನ್.ಬಷೀರ್ ಸಾಬ್, ಗೋಪಾಲ್, ಮಹೇಶ್, ಎಂ.ಎಚ್.ಚಂದ್ರಪ್ಪ, ಕೆ.ಜಿ.ಶ್ರೀನಿವಾಸ್‌ಮೂರ್ತಿ, ಅರಕಲಗೂಡು ಪ್ರಸನ್ನ, ಯರದಕೆರೆ ರಾಜಪ್ಪ, ಷಣ್ಮುಗಾ ಭೋವಿ, ಸರಸ್ವತೀಪುರ ಗ್ರಾಪಂ ಅಧ್ಯಕ್ಷ ಕಂಸಾಗರ ಸೋಮಶೇಖರ್, ಅಬೀದ್ ಪಾಷ, ಇಮ್ರಾನ್‌ಖಾನ್, ಲೋಲಾಕ್ಷಿ ಬಾಯಿ ಇತರರಿದ್ದರು.

    ವಾಜಪೇಯಿ ಕರೆದಾಗ ಬರೊಲ್ಲ ಎಂದಿದ್ರೂ
    ಜೆಡಿಎಸ್ ನಾಯಕರ ಕುಟುಂಬ ಆಡಳಿತ ಧೋರಣೆಯ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ ಸೇರಿದೆ. ನನ್ನನ್ನು ಸೋಲಿಸಲು ಅವರ ಇಡೀ ಕುಟುಂಬವೇ ನಿಂತರೂ ಅರಸೀಕೆರೆ ಜನತೆ ಕೈಬಿಡಲಿಲ್ಲ. ಕೋಮುವಾದಿ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ವಾಜಪೇಯಿ ಅವರಿಗೆ ದೇವೇಗೌಡರು ಹೇಳಿದ್ದರು. ಇದೀಗ ಯಾವುದೋ ಪುರುಷಾರ್ಥಕ್ಕೆ ಬಿಜೆಪಿ ಪಕ್ಷದ ಜತೆ ಅಪವಿತ್ರ ಮೈತ್ರಿ ಮಾಡಿಕೊಳ್ಳುವ ಸ್ಥಿತಿಗೆ ಜೆಡಿಎಸ್ ಪಕ್ಷ ಬಂದಿದೆ. ಆ ಪಕ್ಷದ ಹಿಂದಿನ ಧೋರಣೆಗಳ ಜತೆ ಪ್ರಸ್ತುತ ನಡೆಯನ್ನು ವಿಮರ್ಶೆ ಮಾಡುವ ಕಾಲ ಈಗ ಜನತೆಯ ಎದುರಿದೆ. ಸಿದ್ದರಾಮಯ್ಯ ಸರ್ಕಾರದ ಆಡಳಿತ, ಜನಪರ ಯೋಜನೆಗಳನ್ನು ಜನತೆ ಒಪ್ಪಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಬಡವರ ಪಕ್ಷವಾಗಿ ಇಂದಿಗೂ ಉಳಿದುಕೊಂಡಿದೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts