More

    ಜೆಡಿಎಸ್ ಮುಖಂಡರಿಂದ ಅಭಿವೃದ್ಧಿಗೆ ಅಡ್ಡಗಾಲು

    ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಆರೋಪ

    ಹಾಸನ: ಜಿಲ್ಲಾ ಪಂಚಾಯಿತಿ ಸದಸ್ಯರಲ್ಲದವರಿಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು ನನ್ನ ಅಧಿಕಾರಕ್ಕೆ ಜೆಡಿಎಸ್ ಮುಖಂಡರು ಅಡ್ಡಗಾಲಾಗುತ್ತಿದ್ದಾರೆ ಎಂದು ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಆರೋಪಿಸಿದರು.
    ಕಳೆದ ನಾಲ್ಕೂವರೆ ವರ್ಷದಿಂದ ದ್ವೇಷ ರಾಜಕಾರಣವನ್ನೇ ಮಾಡಿಕೊಂಡು ಬಂದಿರುವ ಜೆಡಿಎಸ್‌ನ ನಾಯಕರು ಉಳಿದ ಆರು ತಿಂಗಳಾದರೂ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದೇನೆ. ದಲಿತ ಮಹಿಳೆ ಅಧ್ಯಕ್ಷ ಸ್ಥಾನ ಅಲಂಕರಿಸಿರುವುದೇ ಅವರಿಗೆ ನುಂಗಲಾರದ ತುತ್ತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.
    ಸರ್ವ ಸದಸ್ಯರ ತುರ್ತು ಸಭೆ ಕರೆಯುವಂತೆ 22 ಸದಸ್ಯರ ಸಹಿ ಇರುವ ಪತ್ರವನ್ನು ಜಿಪಂ ಸಿಇಒಗೆ ಕಳುಹಿಸಿದ್ದಾರೆ. ಅದರಲ್ಲಿ ಬಿ.ಎಸ್. ಅಶೋಕ್ ಎಂಬುವರ ಸಹಿ ಇದ್ದು ಅವರು ಜಿಪಂ ಸದಸ್ಯರಲ್ಲ. ಆ ವ್ಯಕ್ತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎರಡು ವರ್ಷ ಗತಿಸಿವೆ. ಉಪಚುನಾವಣೆಯಲ್ಲಿ ಬಿಳಿಚೌಡಯ್ಯ ಎಂಬುವರು ಗೆದ್ದಿದ್ದಾರೆ. ಅದೇ ರೀತಿ ಬಾಗೂರು ಕ್ಷೇತ್ರದ ಶ್ವೇತಾ ಆನಂದ್ ಅವರ ನಕಲಿ ಸಹಿ ಮಾಡಲಾಗಿದೆ. ಕಾಂಗ್ರೆಸ್‌ನ ಶ್ವೇತಾ ಆನಂದ್ ಯಾವ ಸಹಿ ಮಾಡಿಲ್ಲ ಎಂದರು.
    ಕಾನೂನು ಹೋರಾಟ:
    ಜಿಪಂ ಅಧ್ಯಕ್ಷ ಸ್ಥಾನಕ್ಕೆ ಕಳಂಕ ತರುತ್ತಿರುವ ಎಲ್ಲರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ. ಈ ಕುರಿತು ವಕೀಲರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುತ್ತೇನೆ. ಜಿಪಂ ಸದಸ್ಯರ ಸಹಿ ಪರಿಶೀಲಿಸದೆ ಸ್ವೀಕಾರ ಮಾಡಿರುವ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ವಿರುದ್ಧವೂ ದೂರು ದಾಖಲಿಸುತ್ತೇನೆ ಎಂದು ಹೇಳಿದರು.
    ಬ್ಲಾೃಕ್ ಮೇಲ್‌ಗೆ ಹೆದರುವುದಿಲ್ಲ: ದಲಿತ ಮಹಿಳೆ ಜಿಪಂ ಅಧ್ಯಕ್ಷೆ ಆಗಿರುವುದನ್ನು ಸಹಿಸದೆ ಜೆಡಿಎಸ್ ಸದಸ್ಯರು ಹಾಗೂ ನಾಯಕರು ಬ್ಲಾೃಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಒಂದೂ ಸಭೆ ನಡೆಯಲು ಬಿಟ್ಟಿಲ್ಲ. ನಾವು ಕರೆದ ಸಭೆಗಳಿಗೆ ಗೈರು ಹಾಜರಾಗಿ ಅಭಿವೃದ್ಧಿಗೆ ತೊಡಕಾಗುತ್ತಿದ್ದಾರೆ ಎಂದು ಆರೋಪಿಸಿದರು.
    ಕಾಂಗ್ರೆಸ್ ಸಹಕಾರ ಮರೆಯಬಾರದು:
    ಎಚ್.ಡಿ. ದೇವೇಗೌಡರು ಪ್ರಧಾನಿ ಆಗಿದ್ದು, ಈಗ ರಾಜ್ಯ ಸಭೆಗೆ ಆಯ್ಕೆಯಾಗಿದ್ದು, ಪ್ರಜ್ವಲ್ ರೇವಣ್ಣ ಸಂಸದರಾಗಿದ್ದು ಕಾಂಗ್ರೆಸ್ ಸಹಕಾರದಿಂದ ಎಂಬುದನ್ನು ಅವರು ಮರೆಯಬಾರದು. ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದರು. ಹೈಕಮಾಂಡ್ ಸೂಚನೆಯಂತೆ ನಾವು ಚುನಾವಣೆಯಲ್ಲಿ ಜೆಡಿಎಸ್‌ಗೆ ಸಹಕಾರ ಕೊಟ್ಟೆವು. ಆದರೆ ಆ ಬಳಿಕ ಅವರು ದ್ವೇಷದ ರಾಜಕಾರಣ ಮುಂದುವರಿಸಿದ್ದಾರೆ. ಈ ಕುರಿತು ಬೆಂಗಳೂರಿಗೆ ತೆರಳಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜತೆಗೆ ಚರ್ಚಿಸುತ್ತೇನೆ. ಮುಂದೆ ಏನು ಮಾಡಬೇಕೆಂಬ ಕುರಿತು ಅವರಿಂದ ಸಲಹೆ ಪಡೆಯುತ್ತೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು ಜೆಡಿಎಸ್‌ಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಟಾಂಗ್ ನೀಡಿದರು.
    ಅವ್ಯವಹಾರ ತನಿಖೆ ನಡೆಸಲಿ: ಸಿಬ್ಬಂದಿ ವೇತನ, ತುಟ್ಟಿ ಭತ್ಯೆ, ಜಿಪಂಗೆ ಲಿಫ್ಟ್ ಅಳವಡಿಕೆಯಲ್ಲಿ ಭಾರಿ ಭ್ರಷ್ಟಾಚಾರ ಎಸಗಿದ್ದೇನೆಂದು ನನ್ನ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ. ಎಲ್ಲ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಲಿ ಎಂದು ನಾನೇ ಒತ್ತಾಯಿಸಿದ್ದೇನೆ. ಪ್ರವಾಸ ಭತ್ಯೆ ಎಂದು ನನಗೆ ಪ್ರತಿ ದಿನಕ್ಕೆ ಎರಡು ಸಾವಿರ ರೂ. ದೊರೆಯುತ್ತದೆ. ಅದನ್ನು ಬಿಟ್ಟು ಬೇರೆ ಯಾವ ಸವಲತ್ತನ್ನು ಸರ್ಕಾರದಿಂದ ಪಡೆಯುತ್ತಿಲ್ಲ. ಮಾಹಿತಿ ಇಲ್ಲದೆ ಮಾತನಾಡಿದರೆ ನಾನು ಸುಮ್ಮನಿರುವುದಿಲ್ಲ. ಇವರಿಗೆ ಹೆದರಿ ಮೂಲೆಯಲ್ಲಿ ಕೂರುವುದಿಲ್ಲ ಎಂದರು.
    ಬಾಗೂರು ಕ್ಷೇತ್ರ ಸದಸ್ಯೆ ಶ್ವೇತಾ ಆನಂದ್ ಮಾತನಾಡಿ, ಹೊಳೆನರಸೀಪುರದ ತಮ್ಮ ಮನೆಗೆ ಕರೆಸಿಕೊಂಡಿದ್ದ ಎಚ್.ಡಿ. ರೇವಣ್ಣ ಹಾಗೂ ಭವಾನಿ ಅವರು, ಜಿಪಂ ಸ್ಥಾಯಿ ಸಮಿತಿ ಸದಸ್ಯೆ ಮಾಡುತ್ತೇವೆಂದು ಹೇಳಿ ಎರಡು ವರ್ಷದ ಹಿಂದೆ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದರು. ಆದರೆ ಅದನ್ನು ಈ ರೀತಿ ಬಳಸಿಕೊಳ್ಳುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ನನ್ನ ಸಹಿ ದುರುಪಯೋಗ ಮಾಡಿಕೊಂಡಿರುವವರ ವಿರುದ್ಧ ಕಾನೂನು ಹೋರಾಟ ಪ್ರಾರಂಭಿಸುತ್ತೇನೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts