More

    ಚ.ಪಟ್ಟಣದ 15 ಜನರಿಗೆ ಸೋಂಕು


    ಹಾಸನ:
    ಜಿಲ್ಲೆಯಲ್ಲಿ ಸೋಮವಾರ 15 ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಕರೊನಾ ಸೋಂಕಿತರ ಸಂಖ್ಯೆ 172ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.


    ಪೊಲೀಸ್ ಪೇದೆ, ಐದು ವರ್ಷದ ಬಾಲಕ ಸೇರಿ ಸೋಮವಾರ 15 ಪ್ರಕರಣ ಪತ್ತೆಯಾಗಿದ್ದು, ಎಲ್ಲರೂ ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವರಾಗಿದ್ದಾರೆ. ಮುಂಬೈನಿಂದ ಬಂದಿದ್ದ 6 ಹಾಗೂ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ಒಂಬತ್ತು ಜನರಲ್ಲಿ ಕರೊನಾ ದೃಢಪಟ್ಟಿದೆ. ಎಲ್ಲ ಪೊಲೀಸರಿಗೂ ಸ್ವಾೃಬ್ ಪರೀಕ್ಷೆ ನಡೆಸುತ್ತಿರುವುದರಿಂದ ಆ ವರದಿಯಲ್ಲಿ ನುಗ್ಗೇಹಳ್ಳಿ ಠಾಣೆಯ ಪೇದೆಯೊಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


    ಮುಂಬೈನಿಂದ ಫೋರ್ಸ್‌ ಟ್ರಾವೆಲರ್‌ನಲ್ಲಿ 6 ಜನರು ಬಂದಿದ್ದು, ಅವರಲ್ಲಿ 49 ವರ್ಷದ ಪುರುಷ, 32 ಹಾಗೂ 43 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಉಳಿದ ಮೂವರು ಹಾಸ್ಟೆಲ್ ಕ್ವಾರಂಟೈನ್‌ನಲ್ಲಿದ್ದಾರೆ. ಮೇ 25ರಂದು ಕಾರಿನಲ್ಲಿ ಬಂದಿದ್ದ 31 ವರ್ಷದ ಮಹಿಳೆ ಹಾಗೂ 5 ವರ್ಷದ ಬಾಲಕನಿಗೆ ಕರೊನಾ ದೃಢಪಟ್ಟಿದೆ. 28 ವರ್ಷದ ನುಗ್ಗೇಹಳ್ಳಿ ಠಾಣೆಯ ಪೇದೆಗೆ ಸೋಂಕು ತಗುಲಿದ್ದು ಅವರು ಕಗ್ಗೇರೆ, ಕಾರೆಹಳ್ಳಿ ಚೆಕ್‌ಪೋಸ್ಟ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಉಳಿದ ಒಂಬತ್ತು ಜನರೂ ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವರಾಗಿದ್ದು, ಹಾಸ್ಟೆಲ್ ಕ್ವಾರಂಟೈನ್‌ನಲ್ಲಿ ನಡೆದ ಎರಡನೇ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಹೇಳಿದರು.


    2424 ಜನರ ಆಗಮನ: ಹೊರ ರಾಜ್ಯದಿಂದ ಇಲ್ಲಿಯವರೆಗೆ ಹಾಸನಕ್ಕೆ 2424 ಜನರು ಬಂದಿದ್ದಾರೆ. 1524 ಜನರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಿದ್ದು, 900 ಜನ ಹಾಸ್ಟೆಲ್ ಕ್ವಾರಂಟೈನ್‌ನಲ್ಲಿ ಇದ್ದಾರೆ. 7 ದಿನಗಳ ಬಳಿಕ ಇವರೆಲ್ಲರನ್ನೂ ಮನೆಗೆ ಕಳುಹಿಸಲಾಗುವುದು. ರೋಗ ಲಕ್ಷಣ ಇಲ್ಲದೆ ಇರುವವರಿಗೆ ಯಾವುದೇ ಪರೀಕ್ಷೆ ನಡೆಸದೆ ಹೋಂ ಕ್ವಾರಂಟೈನ್‌ಗೆ ಕಳುಹಿಸಬೇಕೆಂದು ಸರ್ಕಾರ ನಿರ್ದೇಶಿಸಿದ್ದು, ಯಾವುದಾದರೂ ರೋಗಲಕ್ಷಣ ಕಂಡು ಬಂದರೆ ಮಾತ್ರ ಅಂತಹವರಿಗೆ ಸೂಕ್ಷ್ಮ ತಪಾಸಣೆ ನಡೆಸಲಾಗುತ್ತದೆ. ಮಹಾರಾಷ್ಟ್ರದಿಂದ ಬರುವವರಿಗೆ ಮಾತ್ರ ಏಳು ದಿನಗಳ ಹಾಸ್ಟೆಲ್ ಕ್ವಾರಂಟೈನ್ ಮಾಡಲಾಗುತ್ತಿದ್ದು, ಇತರ ರಾಜ್ಯದಿಂದ ಜಿಲ್ಲೆಗೆ ಬರುವವರು ಹೋಂ ಕ್ವಾರಂಟೈನ್ ಆಗಬೇಕು ಎಂದರು.


    ಅರಸೀಕೆರೆಗೆ ಭೇಟಿ:
    ಆಲೂರು ಹಾಗೂ ನುಗ್ಗೇಹಳ್ಳಿಯ ತಲಾ ಒಬ್ಬ ಪೊಲೀಸ್ ಕಾನ್‌ಸ್ಟೇಬಲ್‌ಗೆ ಕರೊನಾ ದೃಢಪಟ್ಟಿದ್ದು, ಇಬ್ಬರೂ ಸಂಬಂಧಿಕರ ಭೇಟಿಗಾಗಿ ಅರಸೀಕೆರೆಗೆ ಭೇಟಿ ನೀಡಿದ್ದರು. ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ವಿವರ ಪಡೆದಿದ್ದು ಎಲ್ಲರನ್ನೂ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ನುಗ್ಗೇಹಳ್ಳಿ ಠಾಣೆಯ 15 ಸಿಬ್ಬಂದಿ ಹೋಂ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ. ಸದ್ಯಕ್ಕೆ ಆಲೂರು ಮತ್ತು ನುಗ್ಗೇಹಳ್ಳಿ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ 11 ನಿರ್ಬಂಧಿತ ವಲಯಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


    ಕರ್ಫ್ಯೂ ಸಮಯ ಬದಲು: ಲಾಕ್‌ಡೌನ್‌ನಲ್ಲಿ ಕೆಲ ಬದಲಾವಣೆ ಮಾಡಿ ಸರ್ಕಾರ ಆದೇಶಿಸಿದ್ದು, ರಾತ್ರಿ 7ರಿಂದ ಬೆಳಗ್ಗೆ 7ರವರೆಗಿನ ನಿಷೇಧಾಜ್ಞೆಯನ್ನು ರಾತ್ರಿ 9 ರಿಂದ ಬೆಳಗ್ಗೆ 5ರವರೆಗೆ ಬದಲಾವಣೆ ಮಾಡಲಾಗಿದೆ. ಜೂನ್ 8ರಿಂದ ಲಾಕ್‌ಡೌನ್‌ನಲ್ಲಿ ಮತ್ತಷ್ಟು ಸಡಿಲಿಕೆ ಮಾಡುತ್ತಿದ್ದು, ಹೋಟೆಲ್, ಜಿಮ್ ಹೊರತುಪಡಿಸಿ ಬಹುತೇಕ ಪ್ರಕ್ರಿಯೆಗಳು ಪ್ರಾರಂಭವಾಗಲಿವೆ ಎಂದರು.


    ಸೂಪರ್ ಸ್ಪ್ರೆಡರ್ ಆಗೋದು ಬೇಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ಮಾತನಾಡಿ, ಖಾಕಿ ಬಟ್ಟೆ ಧರಿಸಿದರೆ ಎಲ್ಲಿ ಬೇಕಾದರೂ ತಿರುಗಾಡಬಹುದು ಎನ್ನುವ ಪೊಲೀಸ್ ಸಿಬ್ಬಂದಿಯೇ ಸೂಪರ್ ಸ್ಪ್ರೆಡರ್ ಆಗಬಾರದೆಂಬ ಕಾರಣಕ್ಕೆ ಇಲಾಖೆಯ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.
    ಒಟ್ಟು 1688 ಸಿಬ್ಬಂದಿಯಿದ್ದು, 750 ಜನರ ಸ್ವಾೃಬ್ ಪರೀಕ್ಷೆ ನಡೆದಿದೆ. ಇನ್ನೂ 250 ಜನರ ವರದಿ ಬರಬೇಕಿದೆ. ಕರೊನಾ ತಗುಲಿರುವ ಆಲೂರು ಹಾಗೂ ನುಗ್ಗೇಹಳ್ಳಿ ಠಾಣೆಯ ಪೇದೆಗಳಿಬ್ಬರೂ ಸೋಂಕಿತರೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ. ಚೆಕ್ ಪೋಸ್ಟ್‌ನಲ್ಲಿ ಕೆಲಸ ಮಾಡಿದ್ದೇ ಅವರಿಗೆ ಸೋಂಕು ಹರಡಲು ಕಾರಣವಾಗಿದೆ ಎಂದರು.
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts