More

    ಗ್ರಾಮೀಣ ಪ್ರದೇಶದಲ್ಲೂ ಕನ್ನಡಕ್ಕೆ ಕುತ್ತು

    ಸಕಲೇಶಪುರ: ನಾಡು-ನುಡಿಯನ್ನು ಉಳಿಸಿ ಬೆಳೆಸಿ ಎಂದು ಹೇಳುವಂತ ವಿಷಮ ಪರಿಸ್ಥಿತಿ ಸೃಷ್ಟಿಯಾಗಿರುವುದು ವಿಷಾದನೀಯ ಎಂದು ಸಮ್ಮೇಳನಾಧ್ಯಕ್ಷೆ ಶೈಲಜಾ ಹಾಸನ್ ಹೇಳಿದರು.

    ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿರುವ ಎರಡು ದಿನಗಳ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಈ ಹಿಂದೆ ಪಟ್ಟಣ ಪ್ರದೇಶದಲ್ಲಿದ್ದ ಆಂಗ್ಲ ಭಾಷಾ ವ್ಯಾಮೋಹ ಇಂದು ಗ್ರಾಮೀಣ ಪ್ರದೇಶಗಳಿಗೂ ಹಬ್ಬಿರುವುದು ಬೇಸರದ ವಿಚಾರ. ಇದರಿಂದಾಗಿ ಹಳ್ಳಿಗಳಲ್ಲೂ ಕನ್ನಡಕ್ಕೆ ಕುತ್ತು ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಾವೆಲ್ಲರೂ ನವಂಬರ್ ಕನ್ನಡಿಗರಾಗದೆ ವರ್ಷಪೂರ್ಣ ಕನ್ನಡಿಗರಾಗಿ ಬದುಕೋಣ. ಎಲ್ಲ ಕಡೆಯೂ ಕನ್ನಡ ಮಾತನಾಡೋಣ. ಈ ಮೂಲಕ ಕನ್ನಡ ಭಾಷೆ ಕಟ್ಟೋಣ ಎಂದು ಕರೆ ನೀಡಿದರು.

    ಮಲೆನಾಡು ಎಂದರೆ ಸ್ವರ್ಗ. ಇಲ್ಲಿರುವವರೆಲ್ಲರೂ ಗಂಧರ್ವರು. ಇಂತಹ ನಾಡಿನಲ್ಲಿ ನಾವೇ ಸೃಷ್ಟಿಸಿಕೊಂಡ ಸಮಸ್ಯೆಗಳು ಈಗ ನಮ್ಮನ್ನು ಕಾಡುತ್ತಿವೆ. ಕಾಡುಪ್ರಾಣಿಗಳು ವಾಸಪ್ರದೇಶಗಳಿಗೆ ನುಗ್ಗಲು ಸ್ವಯಂ ಕೃತ ಅಪರಾಧ ಕಾರಣವಾಗಿದೆ. ಮನುಷ್ಯ ದುರಾಸೆ ಬಿಟ್ಟಾಗ ಸಮಸ್ಯೆಗಳು ನಿವಾರಣೆಯಾಗಲಿವೆ. ಕಷ್ಟನಷ್ಟಗಳ ಅರಿವು ಸರ್ಕಾರಕ್ಕೆ ಅರಿವಾಗಿ ಸಮಸ್ಯೆಗಳ ಬಗೆಹರಿಯಲಿ ಎಂದು ಆಶಿಸಿದರು. ಚಿತ್ರರಚನಕಾರರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಿದ್ದು, ಸರ್ಕಾರ ಜಿಲ್ಲೆಗೊಂದು ಚಿತ್ರಶಾಲೆಯನ್ನು ಆರಂಭಿಸ ಬೇಕು ಎಂದು ಪ್ರತಿಪಾದಿಸಿದರು.

    ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಪಟೇಲ್ ಪಾಂಡು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಪ್ರಾತಿನಿಧಿಕ ಸಂಸ್ಥೆ. ಇಡೀ ರಾಜ್ಯದಲ್ಲಿ ಈ ತಿಂಗಳಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ. ಇದರ ಉದ್ದೇಶ ಸಾಮಾನ್ಯ ಜನರಿಗೆ ಕನ್ನಡ ಮೌಲ್ಯವನ್ನು ಸಾರುವ ಮೂಲಕ ಕನ್ನಡ ಭಾಷೆಯನ್ನು ವೃದ್ಧಿಗೊಳಿಸುವುದಾಗಿದೆ ಎಂದರು.

    ಮೈಸೂರಿನ ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಶ್ರೀನಿಧಿ ಹೆಗೆಡೆ ಮಾತನಾಡಿ, ಹೃದಯಾಘಾತಕ್ಕೆ ಒತ್ತಡವೇ ಕಾರಣ. ಯಾವುದೇ ಕೆಲಸಗಳನ್ನು ಒತ್ತಡದಿಂದ ಮಾಡುವ ಬದಲು ಸಂತಸದಿಂದ ಮಾಡಿದರೆ ಹೃದಯಾಘಾತವನ್ನು ತಡೆಯಬಹುದಾಗಿದೆ. ನಿಯಮಿತ ಆಹಾರ, ವ್ಯಾಯಾಮ ಹೃದಯಾಘಾತವನ್ನು ದೂರ ಮಾಡಬಹುದಾಗಿದೆ. ಹೃದಯದ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಮಾಡುವುದರಿಂದ ಅಮೂಲ್ಯ ಬದುಕನ್ನೇ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts