More

    ಕೋವಿಡ್ ಲಸಿಕೆ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಸಕಲ ಸಿದ್ಧತೆ

    ಹಾಸನ: ಕೋವಿಡ್ ಲಸಿಕೆಗಳ ಸಂಗ್ರಹಕ್ಕೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, 108 ಕೋಲ್ಡ್ ಚೈನ್ ಪಾಯಿಂಟ್ಸ್‌ಗಳನ್ನು ಸಜ್ಜುಗೊಳಿಸಲಾಗಿದೆ.

    ಕೇಂದ್ರ ಸರ್ಕಾರ ಕೋವಿಡ್ ಲಸಿಕೆಗಳನ್ನು ರಾಜ್ಯಗಳಿಗೆ ಪರಿಚಯಿಸಲು ನಿರ್ಧರಿಸಿದೆ. ವೈಜ್ಞಾನಿಕ ಹಾಗೂ ಸುರಕ್ಷಿತವಾಗಿ ಕೋವಿಡ್ ಲಸಿಕೆ ಸಂಗ್ರಹಕ್ಕೆ ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗೆ ಆದ್ಯತೆ ಮೇರೆಗೆ ಮೊದಲು ಲಸಿಕೆ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ, ಜಿಲ್ಲೆಯಲ್ಲಿರುವ ಆರೋಗ್ಯ ಕಾರ್ಯಕರ್ತರ ಪಟ್ಟಿ ತಯಾರಾಗುತ್ತಿದ್ದು, ಜಿಲ್ಲೆಯ ತಾಲೂಕು, ಸಮುದಾಯ ಹಾಗೂ ಜಿಲ್ಲಾಸ್ಪತ್ರೆ ಸೇರಿ 161 ಕೇಂದ್ರಗಳಿಂದ 8546 ಸಿಬ್ಬಂದಿಯನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ 356 ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಿದ್ದು ಇದುವರೆಗೆ ಎರಡು ಸಾವಿರ ಸಿಬ್ಬಂದಿಯ ಮಾಹಿತಿ ಕಲೆ ಹಾಕಲಾಗಿದೆ. ಪ್ರತಿಯೊಬ್ಬರ ಪೂರ್ಣ ವಿವರವನ್ನು ಕೇಂದ್ರ ಸರ್ಕಾರ ಕಳಿಸಿರುವ ನಮೂನೆ ಅನ್ವಯ ಭರ್ತಿ ಮಾಡಿ ಕಳುಹಿಸಿಕೊಡಬೇಕಿದ್ದು ಕೆಲಸ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರ ವಿವರವನ್ನೂ ಕಲೆ ಹಾಕಲಾಗುತ್ತಿದೆ.

    ಕೋಲ್ಡ್ ಚೈನ್ ಪಾಯಿಂಟ್ಸ್‌ನಲ್ಲಿ 24 ಗಂಟೆ:
    ಕೋವಿಡ್-19 ಲಸಿಕೆಯನ್ನು ಕೋಲ್ಡ್ ಚೈನ್ ಪಾಯಿಂಟ್ಸ್‌ನಲ್ಲಿ 24 ಗಂಟೆ ಸಂಗ್ರಹಿಸಿಡಬಹುದಾಗಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ 108 ಪಾಯಿಂಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪಾಯಿಂಟ್‌ಗಳಲ್ಲಿ ಪೊಲಿಯೋ, ಬಿಸಿಜಿ, ದಡಾರ, ರುಬೆಲ್ಲಾ ಸೇರಿ ಒಂಬತ್ತು ಮಾರಕ ರೋಗಗಳ ಲಸಿಕೆ ಸಂಗ್ರಹಿಸಿಡಲಾಗುತ್ತದೆ. ಇದೇ ಕೇಂದ್ರಗಳಲ್ಲಿ ಕರೊನಾ ಲಸಿಕೆ ಸಂಗ್ರಹಿಸಲು ತಯಾರಿ ಮಾಡಲಾಗಿದೆ. ಒಂದು ಕೋಲ್ಡ್ ಚೈನ್ ಪಾಯಿಂಟ್ 4 ಐಸ್ ಪ್ಯಾಕ್‌ಗಳನ್ನು ಹೊಂದಬಹುದಾಗಿದ್ದು ಒಟ್ಟು 432 ಐಸ್ ಬಾಕ್ಸ್‌ಗಳು ಲಭ್ಯವಿವೆ. ಇನ್ನೂ 35 ಐಸ್ ಬಾಕ್ಸ್‌ಗಳ ಅವಶ್ಯಕತೆಯಿದ್ದು ಎರಡು ದಿನಗಳಲ್ಲಿ ಅದು ಆರೋಗ್ಯ ಇಲಾಖೆಗೆ ತಲುಪಲಿದೆ. 800 ವ್ಯಾಕ್ಸಿನ್ ಕ್ಯಾರಿಯರ್‌ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕರೊನಾ ಲಸಿಕಾ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿರುವ ಡಾ. ಕಾಂತರಾಜು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts