More

    ಪುತ್ತೂರು ಶಾಲೆಗಳಲ್ಲಿ ಹಸಿರು ವನ

    ಪುತ್ತೂರು: ಶಾಲೆ ಪುನರಾರಂಭಗೊಳ್ಳುವ ಗೊಂದಲದ ಮಧ್ಯೆಯೂ ಪುತ್ತೂರು ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜತೆಗೂಡಿ ಪುತ್ತೂರಿನಾದ್ಯಂತ ಖಾಲಿಯಿರುವ ಶಾಲಾ ವಠಾರದಲ್ಲಿ ವಿದ್ಯಾರ್ಥಿಗಳಿಂದಲೇ ಶಾಲಾ ವನ ನಿರ್ಮಿಸಿ ಶಿಕ್ಷಣ ಸಂಸ್ಥೆ ಹಚ್ಚ ಹಸಿರಾಗಿಸುವ ಮಹತ್ತರ ಯೋಜನೆ ರೂಪಿಸಿದೆ.
    ಮಕ್ಕಳಲ್ಲಿ ಪರಿಸರ ಮತ್ತು ವಾತಾವರಣದ ಬಗ್ಗೆ ಜಾಗೃತಿ ಮೂಡಿಸುವುದು, ಸ್ವಯಂಪ್ರೇರಿತವಾಗಿ ಗಿಡಗಳನ್ನು ನೆಡಲು ಅವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ವಲಯದ ಮಗುವಿಗೊಂದು ಮರ, ಶಾಲೆಗೊಂದು ವನ ಯೋಜನೆ ಜಾರಿಯಲ್ಲಿದ್ದು, ಶಾಲಾ ಆವರಣ ಮತ್ತು ತಮ್ಮ ಮನೆಯ ಸುತ್ತಮುತ್ತಲ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡಲು ವಿದ್ಯಾರ್ಥಿಗಳಿಗೆ ಉಚಿತವಾಗಿ ಪೂರೈಸಲಾಗುತ್ತದೆ. ಈ ನಿಟ್ಟಿನಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಅರಣ್ಯ ಇಲಾಖೆ ಜತೆಗೂಡಿ ಶಾಲಾ ವಠಾರಗಳನ್ನು ಹಸಿರು ವನವಾಗಿ ರೂಪಿಸಲು ಯೋಜನೆ ರೂಪಿಸಿದೆ.
    ತಾಲೂಕಿನ ಶಾಲಾ ಸುತ್ತಮುತ್ತಲಿನ ಖಾಲಿ ಪ್ರದೇಶ ಗುರುತಿಸಿ ವಿದ್ಯಾರ್ಥಿಗಳಿಂದಲೇ ಸಾಗುವಾನಿ, ನೆಲ್ಲಿ, ಬಿಲ್ವಪತ್ರೆ, ಹಲಸು, ಹೆಬ್ಬಲಸು, ಕಹಿಬೇವು, ಕಾಯಿಧೂಪ, ಕುಳುರ್‌ಮಾವು, ಕರಡಿ, ಕೋಳಿಜುಟ್ಟು, ಕಿರಾಲ್‌ಬೋಗಿ, ದಾಲ್ಚಿನಿ, ದೂಪ, ಬಾಗೆ, ಬಾದಾಮ್, ಬೇಂಗ, ಬೊಳ್ಪಾಲೆ, ಬೆತ್ತ, ಸಂಪಿಗೆ, ನೊರೆಕಾಯಿ, ನೇರಳೆ, ಪುನರ್ಪುಳಿ, ಬಸವನಪಾದ, ಬಿದಿರು, ಬಿಲ್ವಪತ್ರೆ, ಬೀಟೆ, ಶಿವಾನಿ, ಶ್ರೀಗಂಧ, ಮಂಜೊಟ್ಟಿ, ಮಂತ್‌ಹುಳಿ, ಮಹಾಗನಿ, ಜಂಬುನೇರಳೆ, ರಾಂಪತ್ರೆ, ರಂಬೂಟನ್, ರೆಂಜ, ರಕ್ತಚಂದನ ಸಸಿಗಳನ್ನು ನೆಡಲಾಗುವುದು. ಪುತ್ತೂರು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ಜಾಲ್ಸೂರಿನಿಂದ ಕೇರಳ ರಾಜ್ಯ ಕಡೆಗೆ ತೆರಳುವ ರಾಜ್ಯ ಹೆದ್ದಾರಿ ಸಮೀಪದ ಕನಕಮಜಲು ಸಸ್ಯಕ್ಷೇತ್ರದಲ್ಲಿ ಈ ಸಸಿಗಳನ್ನು ಬೆಳೆಸಲಾಗಿದೆ.

    2300 ಸಸಿ ಸಿದ್ಧ
    ಶಿಕ್ಷಣ ಇಲಾಖೆ ಸಹಯೋಗದೊಂದಿಗೆ, ರಾಜ್ಯಾದ್ಯಂತ ಪ್ರಾಥಮಿಕ ಶಾಲಾ ಹಂತದಿಂದ ಕಾಲೇಜು ವಿದ್ಯಾರ್ಥಿಗಳವರೆಗೆ ಎಲ್ಲರೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಯೋಜನೆ ಆರಂಭಿಸಿದೆ. ಶಾಲೆಗಳಲ್ಲಿ ಗಿಡ ನೆಡುವ ಪರಿಕಲ್ಪನೆಗೆ ಹೆಚ್ಚಿನ ಗಮನ ನೀಡುವ ಸಲುವಾಗಿ ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ಶಾಲಾ ಅರಣ್ಯ ನಿರ್ಮಿಸುವ ಗುರಿಯೊಂದಿಗೆ ತಾಲೂಕಿಗೊಂದು ಹಸಿರು ಶಾಲಾ ವನ ಎನ್ನುವ ಕಾರ್ಯಕ್ರಮವಿದ್ದು, ಪುತ್ತೂರು ತಾಲೂಕಿಗೆ ಸಂಬಂಧಿಸಿ 2300 ಸಸಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಪುತ್ತೂರು ವಲಯ ಅರಣ್ಯಾಧಿಕಾರಿ ಬಿ.ಜಿ.ಮೋಹನ್ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts