More

    ಪರಿಹಾರಕ್ಕಾಗಿ ರೈತಸಂಘ ಪ್ರತಿಭಟನೆ

    ಹಾಸನ: ಕಳಪೆ ಬಿತ್ತನೆ ಆಲೂಗಡ್ಡೆ ವಿತರಿಸಿ ರೈತರನ್ನು ಸಂಕಷ್ಟಕ್ಕೆ ದೂಡಿರುವ ಜಿಲ್ಲಾಡಳಿತ ನಷ್ಟಕ್ಕೀಡಾದ ರೈತರಿಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

    ಭೂಮಿಯಲ್ಲೇ ಕೊಳೆಯುತ್ತಿರುವ ಆಲೂಗಡ್ಡೆ, ಬೆಲೆ ಕುಸಿತ ಕಂಡಿರುವ ಮೆಣಸಿನಕಾಯಿಯನ್ನು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರದರ್ಶಿಸಿದ ರೈತರು ವರ್ತಕರು ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು. ಆಲೂಗಡ್ಡೆ ಪ್ರೋತ್ಸಾಹ ಧನ ಹಾಗೂ ವಿಮೆ ಪಾವತಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

    ಕರೊನಾ ಲಾಕ್‌ಡೌನ್‌ನಿಂದ ಸಾಲದ ಸುಳಿಗೆ ಸಿಲುಕಿರುವ ರೈತರನ್ನು ಮತ್ತಷ್ಟು ತೊಂದರೆಗೆ ಸಿಲುಕಿಸಲಾಗಿದೆ. ಬಿತ್ತನೆ ಮಾಡಿ 12 ದಿನವಾದರೂ ಆಲೂಗಡ್ಡೆ ಬೆಳೆಯುತ್ತಿಲ್ಲ. ಈ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೂಮಿಗೆ ಭೇಟಿ ನೀಡಿ ಪರಿಶೀಲಿಸಿದ್ದು ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ತೇವಾಂಶ ಹೆಚ್ಚಾಗಿ ಆಲೂ ಬೆಳೆಯುತ್ತಿಲ್ಲ ಎಂಬ ಉತ್ತರ ನೀಡಿದ್ದಾರೆ. ಜಮೀನಿನಲ್ಲಿ ಅಧಿಕ ತೇವಾಂಶವಿರುವ ವಿಷಯವನ್ನು ಮೊದಲೇ ತಿಳಿಸಿದ್ದರೆ ಯಾರೂ ಆಲೂಗಡ್ಡೆ ಬಿತ್ತನೆ ಮಾಡುತ್ತಿರಲಿಲ್ಲ. ದೃಢೀಕೃತ ಆಲೂಗಡ್ಡೆ ವಿತರಿಸದಿರುವುದೇ ನಷ್ಟಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

    ತಿನ್ನುವ ಆಲೂಗಡ್ಡೆಯನ್ನೇ ಬಿತ್ತನೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರು. ರಿಯಾಯಿತಿ ದರದಲ್ಲಿ ಕ್ರಿಮಿನಾಶಕ ಔಷಧ ಹಾಗೂ ರಸಗೊಬ್ಬರ ನೀಡಲಿಲ್ಲ. ಒಂದು ಎಕರೆ ಆಲೂಗಡ್ಡೆ ಬಿತ್ತನೆಗೆ 40 ಸಾವಿರ ರೂ. ಖರ್ಚಾಗಿದೆ. ಹೀಗಾದರೆ ಅನ್ನದಾತರು ಬದುಕುವುದು ಹೇಗೆ? ಬೆಲೆ ಕುಸಿತದಿಂದ ಮೆಣಸಿನಕಾಯಿ ಬೆಳೆಗಾರರು ಕಂಗಾಲಾಗಿದ್ದಾರೆ ಎಂದರು.

    ರೈತರಿಂದ ಮನವಿ ಸ್ವೀಕರಿಸಿದ ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ಸರ್ಕಾರದೊಂದಿಗೆ ಚರ್ಚಿಸಿ ಪರಿಹಾರ ಕೊಡಿಸುವ ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು. ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ, ಬಿಟ್ಟಗೌಡನಹಳ್ಳಿ ಮಂಜುನಾಥ್, ತಾಲೂಕು ಉಪಾಧ್ಯಕ್ಷ ಬಿ.ಕೆ. ನಟರಾಜು, ತಾಲೂಕು ಅಧ್ಯಕ್ಷ ಬರಗೂರು ಶಂಕರ್, ಮಹಿಳಾ ಘಟಕ ರಾಜ್ಯ ಅಧ್ಯಕ್ಷೆ ನಾಗರತ್ನಾ, ಸುರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts