More

    ಮಕ್ಕಳನ್ನು ದುಡಿಮೆಗೆ ಕಳಿಸೋದು ಸರಿಯಲ್ಲ

    ಹಾಸನ: ಓದುವ ಸಮಯದಲ್ಲಿ ಮಕ್ಕಳನ್ನು ದುಡಿಮೆಗೆ ಕಳುಹಿಸಿ ಅವರ ಜೀವನ ಹಾಳು ಮಾಡುವುದು ಸರಿಯಲ್ಲ ಎಂದು ಶಾಸಕ ಪ್ರೀತಂ ಜೆ. ಗೌಡ ಪ್ರತಿಪಾದಿಸಿದರು.

    ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

    ಮಕ್ಕಳನ್ನು ದುಡಿಸಿಕೊಳ್ಳುವವರ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಹಲವಾರು ಸರ್ಕಾರಿ ಶಾಲೆ ಹಾಗೂ ಮಠಗಳು ಮಕ್ಕಳು ಬಾಲ ಕಾರ್ಮಿಕರಾಗದಂತೆ ಶಿಕ್ಷಣ ನೀಡುತ್ತಿದ್ದಾರೆ. ಮಕ್ಕಳು ಚೆನ್ನಾಗಿ ಓದಿ ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಲು ಪಾಲಕರು ಸಹಕರಿಸಬೇಕು ಎಂದು ಹೇಳಿದರು.

    ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ 10 ದಿನಗಳವರೆಗೆ ಜಿಲ್ಲಾದ್ಯಂತ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದರು.

    ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಮಾತನಾಡಿ, ಬಾಲಕರನ್ನು ಕೆಲಸಕ್ಕೆ ಸೇರಿಸಿಕೊಂಡಿರುವ ಕುರಿತು ಯಾವುದೇ ದೂರು ಬಂದರೂ ತಕ್ಷಣವೇ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದರು.

    ಹೋಟೆಲ್ ಮಾಲೀಕರು, ಕ್ರಷರ್ ಹಾಗೂ ಮತ್ತಿತರ ಚಟುವಟಿಕೆಗಳಲ್ಲಿ ದುಡಿಯುವ ಪಾಲಕರೊಂದಿಗೆ ಮಕ್ಕಳಿದ್ದು ಅವರಿಗೆ ವಿದ್ಯಾಭ್ಯಾಸ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವಾರು ಕಾರ್ಯಕ್ರಮ ಕೈಗೊಂಡಿದೆ ಎಂದರು.

    ಉಪ ವಿಭಾಗಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಇರುವ ಕಾರಣ ಪಾಲಕರು ದುಡಿಮೆಗೆ ಮಕ್ಕಳನ್ನು ಕರೆದೊಯ್ಯುವ ಸಾಧ್ಯತೆ ಹೆಚ್ಚಿದೆ. ಇಂತಹ ವಿಚಾರದಲ್ಲಿ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದರು. ಕಾರ್ಮಿಕ ಅಧಿಕಾರಿ ರಾಮಕೃಷ್ಣ, ತಹಸೀಲ್ದಾರ್ ಶಿವಶಂಕರಪ್ಪ, ಗಿರೀಶ್ ನಂದನ್, ನಾರಾಯಣಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts