More

    ಪೌರಕಾರ್ಮಿಕರ ಪ್ರತಿಭಟನೆ

    ಹಾಸನ: ನಗರಸಭೆ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗೆ ನಿವೇಶನ ಕಲ್ಪಿಸಬೇಕೆಂದು ಆಗ್ರಹಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

    ನಗರದಲ್ಲಿ 300ಕ್ಕೂ ಹೆಚ್ಚು ಜನರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 41 ಕಾಯಂ ಪೌರಕಾರ್ಮಿಕರಿಗೆ ಬೇಲೂರು ರಸ್ತೆಯಲ್ಲಿ 20:30ರ ಅನುಪಾತದಲ್ಲಿ ನಿವೇಶನ ಹಕ್ಕುಪತ್ರ ವಿತರಿಸಲಾಗಿದೆ. ನಗರಸಭೆಯಲ್ಲಿ 73 ಕಾಯಂ ಹಾಗೂ 101 ನೇರ ಪಾವತಿ, ಯುಜಿಡಿ, ನೀರುಗಂಟಿಗಳಾಗಿ ಒಟ್ಟು 300ಕ್ಕೂ ಹೆಚ್ಚು ಸಿಬ್ಬಂದಿಗೆ ಯಾವುದೇ ನಿವೇಶನ ಹಾಗೂ ಮನೆ ಇಲ್ಲ. ಈ ಹಿಂದೆ ನಗರಸಭೆಯಲ್ಲಿ ಅನುಮೋದನೆಯಾದಂತೆ ಎಲ್ಲ ಪೌರಕಾರ್ಮಿಕರಿಗೆ ಹಾಗೂ ಸಿಬ್ಬಂದಿಗೆ ನಿವೇಶನ ಒದಗಿಸಬೇಕು ಎಂದು ಆಗ್ರಹಿಸಿದರು.

    ಪೌರ ಕಾರ್ಮಿಕರಿಗೆ ಈಗಾಗಲೇ ಹಂಚಿರುವ ನಿವೇಶನಗಳ ಸಮೀಪವೇ ಖಾಸಗಿ ಭೂಮಿ ಇದ್ದು, ಮಾರಾಟ ಮಾಡಲು ರೈತರು ಸಿದ್ಧರಾಗಿದ್ದಾರೆ. ಜಿಲ್ಲಾಡಳಿತ ಆ ಜಾಗವನ್ನು ಖರೀದಿಸಿ ವಿತರಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಈ ಹಿಂದೆ ನಿವೇಶನ ಖರೀದಿಗೆ ಉಪಯೋಗಿಸಲಾಗಿದ್ದು, ಈ ಬಾರಿಯೂ ಇದೇ ಅನುದಾನವನ್ನು ನಿವೇಶನ ಖರೀದಿಸಲು ಬಳಸಬೇಕು ಎಂದರು.

    ಕಳೆದ ವರ್ಷ 28 ಪೌರಕಾರ್ಮಿಕರನ್ನು ಕಾಯಂಗೊಳಿಸಿದ ಸಂದರ್ಭದಲ್ಲಿ ಹಿರಿಯ ಪೌರಕಾರ್ಮಿರನ್ನು ಹಾಗೂ ಸಿಬ್ಬಂದಿಯನ್ನು ಕಡೆಗಣಿಸಲಾಗಿದೆ. ಕಾಯಂ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಅವರು ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಹಾಲಿ ಕೆಲಸ ಮಾಡುತ್ತಿರುವ ಎಲ್ಲ ಅರ್ಹ ಪೌರಕಾರ್ಮಿಕರು, ಯುಜಿಡಿ ಕಾರ್ಮಿಕರು, ನೀರುಗಂಟಿಗಳನ್ನು ಕಾಯಂ ಮಾಡಬೇಕೆಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು. ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್‌ಗೌಡ, ಗೌರವಾಧ್ಯಕ್ಷ ನಾಗರಾಜ್ ಹೆತ್ತೂರು, ಉಪಾಧ್ಯಕ್ಷ ನಲ್ಲಪ್ಪ, ಕಾರ್ಯದರ್ಶಿ ಪರಶುರಾಂ, ಮಾರ, ದೇವರಾಜ್, ಮುನಿಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts