More

    ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 54ಕ್ಕೆ ಏರಿಕೆ

    ಹಾಸನ: ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 21 ಕರೊನಾ ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.

    ಮುಂಬೈ ಹಾಗೂ ತಮಿಳುನಾಡಿನಿಂದ ಜಿಲ್ಲೆಗೆ ಬಂದಿರುವ ವ್ಯಕ್ತಿಗಳಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ಸೂಕ್ಷ್ಮ ತಪಾಸಣೆ ಮತ್ತು ಕ್ವಾರಂಟೈನ್ ಕೇಂದ್ರಗಳು ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಸೋಂಕಿತರು ಇತರರ ಜತೆ ಸಂಪರ್ಕ ಹೊಂದುವುದನ್ನು ತಡೆಗಟ್ಟಲಾಗಿದೆ. ಮುಂಬೈನಿಂದ ಬಂದ 51 ಹಾಗೂ ತಮಿಳುನಾಡಿನ ಮೂವರಲ್ಲಿ ಕರೊನಾ ದೃಢಪಟ್ಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

    ಚನ್ನರಾಯಪಟ್ಟಣ 16, ಹೊಳೆನರಸೀಪುರ 2, ಹಾಸನದ ಮೂರು ಜನರಲ್ಲಿ ಹೊಸದಾಗಿ ಕರೊನಾ ದೃಢಪಟ್ಟಿದೆ. ಈ ಮೂಲಕ ಚನ್ನರಾಯಪಟ್ಟಣದಲ್ಲಿ 34, ಹೊಳೆನರಸೀಪುರ 11, ಅರಕಲಗೂಡು 2, ಹಾಸನ 3, ಆಲೂರು 3 ಹಾಗೂ ಚಿಕ್ಕಮಗಳೂರಿನ (ಅರಸೀಕೆರೆ) ಒಬ್ಬರಲ್ಲಿ ಕರೊನಾ ವರದಿಯಾಗಿದೆ ಎಂದು ತಿಳಿಸಿದರು.

    ಹೊಳೆನರಸೀಪುರದ ಪಿ- 34 ಹಾಗೂ 35 ಮುಂಬೈನಿಂದ ಮೇ 17ರಂದು ಫೋರ್ಸ್‌ ಟ್ರಾವೆಲರ್‌ನಲ್ಲಿ 23 ಜನರು ಬಂದಿದ್ದರು. ಇದರಲ್ಲಿ ನಾಲ್ವರು ಕೆ.ಆರ್.ಪೇಟೆ ತಾಲೂಕಿನವರಿದ್ದಾರೆ. 17 ಜನರು ಕ್ವಾರಂಟೈನ್‌ಲ್ಲಿದ್ದಾರೆ. ಪಿ- 36 ಮತ್ತು 37 ತಮಿಳುನಾಡು ಮೂಲದವರಾಗಿದ್ದು, ಮೇ 17 ರಂದು ಪಿ- 36 ಜಿಲ್ಲೆಗೆ ಬಂದಿದ್ದಾರೆ. ಇಲ್ಲಿಯೇ ಇದ್ದ ಪತ್ನಿಗೂ (ಪಿ- 17) ಕರೊನಾ ತಗುಲಿದೆ. ಪಿ 43 ತಮಿಳುನಾಡಿನಿಂದ ಹಾಸನಕ್ಕೆ ಬಂದಿದ್ದು ನಗರದಲ್ಲಿ ಸುತ್ತಾಟ ನಡೆಸಿದ್ದಾರೆ ಎನ್ನಲಾಗಿದೆ. ಅವರ ಸಂಪರ್ಕಿತರ ಪತ್ತೆ ಕಾರ್ಯ ನಡೆದಿದೆ ಎಂದರು.

    ಚ.ರಾ.ಪ.ದ 16 ಜನರಿಗೆ: ಪಿ- 38 ಮೇ 16ರಂದು ಮುಂಬೈನ ಅಂಧೇರಿಯಿಂದ ಕಾರಿನಲ್ಲಿ ಜಿಲ್ಲೆಗೆ ಬಂದಿದ್ದರು. ಪಿ- 39 ಮುಂಬೈನಿಂದ ಮೇ 17ರಂದು ಏಳು ಜನರೊಂದಿಗೆ ಬಂದಿದ್ದರು. ಪಿ- 40 ಹಾಗೂ 41 ಅಕ್ಕ, ತಮ್ಮ ಮೇ 16 ರಂದು ನಾಲ್ಕು ಜನರು ಕಾರಿನಲ್ಲಿ ಬಂದಿದ್ದಾರೆ. ಪಿ- 42 ನಾಲ್ಕು ಜನರೊಂದಿಗೆ ಮುಂಬೈನಿಂದ ಬಂದವರು. ಪಿ- 44 ಹಾಗೂ 45 ನಾಲ್ಕು ಜನರೊಂದಿಗೆ ಕಾರಿನಲ್ಲಿ ಬಂದಿದ್ದರು. ಪಿ- 46 ರಿಂದ 50ರ ವರೆಗಿನ ಸೋಂಕಿತರು ಮುಂಬೈನ ಅಶೋಕ ನಗರದಿಂದ ಮೇ 16ರಂದು ಬಂದಿದ್ದು, ಒಂದೇ ಕುಟುಂಬಕ್ಕೆ ಸೇರಿದ್ದಾರೆ. 10 ಜನರು ಒಂದೇ ವಾಹನದಲ್ಲಿ ಬಂದಿದ್ದು, ಇವರಲ್ಲಿ ಐವರಿಗೆ ಕರೊನಾ ಪತ್ತೆಯಾಗಿದೆ. ಪಿ- 51 ರಿಂದ 54ರ ವರೆಗಿನ ಎಲ್ಲರೂ ಪ್ರತ್ಯೇಕ ಕುಟುಂಬಕ್ಕೆ ಸೇರಿದ್ದು ಮುಂಬೈನಿಂದ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

    ಶಾಂತಿಗ್ರಾಮದಲ್ಲಿ ಸುತ್ತಾಟ: ಮೇ 17ರಂದು ಮುಂಬೈನಿಂದ ಬಂದಿದ್ದ ಸೋಂಕಿತ ವ್ಯಕ್ತಿ ಶಾಂತಿಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದಾನೆ ಎಂಬ ಮಾಹಿತಿ ಇದೆ. ರಾತ್ರಿ 2 ಗಂಟೆಗೆ ಆತ ಜಿಲ್ಲೆಯಲ್ಲಿ ಓಡಾಡಿರುವ ವಿಚಾರ ತಿಳಿದಿದ್ದು ಟ್ರಾವೆಲ್ ಹಿಸ್ಟರಿ ತಿಳಿದು ಬರಬೇಕಿದೆ. ಮುಂಬೈನಿಂದ ಇನ್ನೂ 1200 ಜನರು ಬರುವ ನಿರೀಕ್ಷೆಯಿದ್ದು, ಸದ್ಯ ಸರ್ಕಾರ ಅಂತರ ರಾಜ್ಯದಿಂದ ಬರುವವರಿಗೆ ಕಡಿವಾಣ ಹಾಕಿರುವುದರಿಂದ ಯಾರನ್ನೂ ಬಿಡುತ್ತಿಲ್ಲ ಎಂದರು.

    400 ವರದಿ ಪೆಂಡಿಂಗ್: ಜಿಲ್ಲೆಯಲ್ಲಿ ಇನ್ನೂ 400 ಜನರ ಪರೀಕ್ಷಾ ವರದಿ ಬರಬೇಕಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಜಿಲ್ಲಾದ್ಯಂತ 44 ಕ್ವಾರಂಟೈನ್ ಕೇಂದ್ರ ತೆರೆದಿದ್ದು 1541 ಜನರು ವಾಸ್ತವ್ಯ ಮಾಡಿದ್ದಾರೆ. ಅಗತ್ಯ ಬಿದ್ದರೆ ಇತರ ಹಾಸ್ಟೆಲ್‌ಗಳನ್ನು ವಶಪಡಿಸಿಕೊಳ್ಳಲಾಗುವುದು. ಕೋವಿಡ್-19 ಆಸ್ಪತ್ರೆಯಲ್ಲಿ 350 ಹಾಸಿಗೆಗಳ ವ್ಯವಸ್ಥೆ ಮಾಡಿಕೊಂಡಿದ್ದು ಅಗತ್ಯ ಬಿದ್ದರೆ ಬೆಡ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು. ಕೋವಿಡ್-19 ಪರೀಕ್ಷೆ ವೇಗವಾಗಿ ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಪರೀಕ್ಷೆಗಳು ನಮ್ಮಲ್ಲಿಯೇ ಆಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts