More

    ಪತ್ನಿಯನ್ನು ಮೆಚ್ಚಿಸಲು ಕ್ಯಾಚ್ ಕೈಚೆಲ್ಲಿದರಂತೆ ಪಾಕ್​ ಕ್ರಿಕೆಟಿಗ ಹಸನ್ ಅಲಿ!

    ದುಬೈ: ಕೊನೇ 9 ಎಸೆತಗಳಲ್ಲಿ 18 ರನ್ ಬೇಕಿದ್ದಾಗ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾ ತಂಡವನ್ನು ಟಿ20 ವಿಶ್ವಕಪ್ ಫೈನಲ್‌ಗೇರಿಸಿ ಹೀರೋ ಆದರೆ, ಅದಕ್ಕೆ ಹಿಂದಿನ ಎಸೆತದಲ್ಲಿ ಡೀಪ್ ಮಿಡ್‌ವಿಕೆಟ್‌ನಲ್ಲಿ ವೇಡ್ ಅವರದೇ ಕ್ಯಾಚ್ ಕೈಚೆಲ್ಲಿದ್ದ ಹಸನ್ ಅಲಿ ಪಾಕಿಸ್ತಾನದ ಪಾಲಿಗೆ ವಿಲನ್ ಆಗಿದ್ದಾರೆ. ಇದರಿಂದ ಹಸನ್ ಅಲಿ ಪಾಕ್ ಕ್ರಿಕೆಟ್ ಪ್ರೇಮಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ನಿಂದನೆಗೂ ಗುರಿಯಾಗಿದ್ದಾರೆ.

    ಪಾಕಿಸ್ತಾನದಲ್ಲಿ ಬಹುಸಂಖ್ಯಾತರಾಗಿರುವ ಸುನ್ನಿ ಮುಸ್ಲಿಮರಿಂದ ಹಸನ್ ಅಲಿ ಹೆಚ್ಚಿನ ಟೀಕೆ ಎದುರಿಸಿದ್ದಾರೆ. ಶಿಯಾ ಮುಸ್ಲಿಂ ಆಗಿರುವ ಹಸನ್ ಅಲಿ ಬೇಕೆಂದೇ ಪಾಕಿಸ್ತಾನವನ್ನು ಸೋಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಹಸನ್ ಅಲಿ ಅವರ ಪತ್ನಿ ಸಮಿಯಾ ಅರ್ಜೂ ಭಾರತ ಮೂಲದವರಾಗಿದ್ದು, ಅವರನ್ನು ಮೆಚ್ಚಿಸುವ ಸಲುವಾಗಿ ಕ್ಯಾಚ್ ಕೈಚೆಲ್ಲಿದ್ದಾರೆ ಎಂದೂ ದೂರಲಾಗುತ್ತಿದೆ. ಇದಲ್ಲದೆ ಹಲವು ಅಶ್ಲೀಲ, ಮಾನಹಾನಿಕರ ಪದಗಳಿಂದಲೂ ಹಸನ್ ಅಲಿ ನಿಂದಿಸಲಾಗುತ್ತಿದೆ.

    ಪಂದ್ಯದಲ್ಲಿ ಬೌಲಿಂಗ್‌ನಲ್ಲೂ ಭಾರಿ ವೈಫಲ್ಯ ಕಂಡಿದ್ದ ಹಸನ್ ಅಲಿ, 4 ಓವರ್‌ಗಳಲ್ಲಿ 44 ರನ್ ಬಿಟ್ಟುಕೊಟ್ಟಿದ್ದರು. ಹಸನ್ ಅಲಿಯನ್ನು ಕೂಡಲೆ ಪಾಕ್ ತಂಡದಿಂದ ಹೊರಹಾಕಬೇಕೆಂದೂ ಕಿಡಿಕಾರಲಾಗಿದೆ.

    ಹಸನ್ ಪತ್ನಿಗೂ ನಿಂದನೆ
    2019ರ ಆಗಸ್ಟ್‌ನಲ್ಲಿ ಹಸನ್ ಅಲಿ ಅವರನ್ನು ವರಿಸಿದ್ದ ಹರಿಯಾಣ ಮೂಲದ ಸಮಿಯಾ ಅರ್ಜೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪಾಕ್ ಕ್ರಿಕೆಟ್ ಪ್ರೇಮಿಗಳ ನಿಂದನೆಗೆ ಗುರಿಯಾಗಿದ್ದಾರೆ. ಇನ್ನು ಕೆಲ ಕ್ರಿಕೆಟ್ ಪ್ರೇಮಿಗಳು, ಭಾರತದ ರಾ ಏಜೆಂಟ್ ಆಗಿ ನಿಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ದೀರಿ ಎಂದು ಕಾಲೆಳೆದಿದ್ದಾರೆ.

    ಮಾತು ಬದಲಿಸಿದ ಬಾಬರ್
    ಸೆಮೀಸ್‌ನಲ್ಲಿ ಆಸೀಸ್ ವಿರುದ್ಧ 5 ವಿಕೆಟ್‌ಗಳಿಂದ ಸೋಲಲು ಹಸನ್ ಅಲಿ ಕ್ಯಾಚ್ ಕೈಚೆಲ್ಲಿದ್ದೇ ಕಾರಣವಾಯಿತು. ಆ ಕ್ಯಾಚ್ ಹಿಡಿದಿದ್ದರೆ ಪಂದ್ಯದ ಲಿತಾಂಶ ಬದಲಾಗುತ್ತಿತ್ತು ಎಂದು ಪಂದ್ಯದ ಬಳಿಕ ಹೇಳಿದ್ದ ಪಾಕ್ ನಾಯಕ ಬಾಬರ್ ಅಜಮ್, ನಂತರ ಹೇಳಿಕೆ ಬದಲಾಯಿಸಿದ್ದಾರೆ. ಕ್ಯಾಚ್ ಡ್ರಾಪ್ ಪಂದ್ಯದ ಭಾಗವಾಗಿರುತ್ತದೆ. ಯಾವುದೇ ಆಟಗಾರ ಆ ರೀತಿಯ ಕ್ಯಾಚ್ ಕೈಚೆಲ್ಲಬಹುದು. ಆ ಕ್ಯಾಚ್ ಕೈಚೆಲ್ಲಿದ್ದರಿಂದಲೇ ನಾವು ಸೋಲು ಕಂಡೆವು ಎನ್ನಲಾಗದು ಎಂದು ಬಾಬರ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಹಸನ್ ಅಲಿ ಅವರೊಬ್ಬರನ್ನೇ ಸೋಲಿಗೆ ಹೊಣೆಯಾಗಿಸಲು ಹಿಂದೇಟು ಹಾಕಿದ್ದಾರೆ.

    ಕ್ಯಾಚ್ ಕೈಬಿಟ್ಟಿದ್ದು ಟರ್ನಿಂಗ್ ಪಾಯಿಂಟ್ ಅಲ್ಲ ಎಂದ ವೇಡ್
    ಹಸನ್ ಅಲಿ ನೀಡಿದ ಜೀವದಾನದ ಭರ್ಜರಿ ಲಾಭವೆತ್ತಿದ ಆಸೀಸ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್, ಆ ಕ್ಯಾಚ್ ಡ್ರಾಪ್ ಪಂದ್ಯದ ಟರ್ನಿಂಗ್ ಪಾಯಿಂಟ್ ಎಂದು ಬಣ್ಣಿಸಲು ನಿರಾಕರಿಸಿದ್ದಾರೆ. ಆ ಕ್ಯಾಚ್ ಹಿಡಿದಿದ್ದರೂ ಆಸೀಸ್ ತಂಡ ಗೆಲ್ಲುತ್ತಿತ್ತು. ಆ ಸಮಯದಲ್ಲಿ ಪಂದ್ಯ ನಮ್ಮತ್ತ ತಿರುಗಿತ್ತು. ನಾನು ಔಟಾಗಿದ್ದರೂ, ನಂತರ ಬರಬೇಕಿದ್ದ ಪ್ಯಾಟ್ ಕಮ್ಮಿನ್ಸ್ ಮತ್ತು ಕ್ರೀಸ್‌ನಲ್ಲಿದ್ದ ಸ್ಟೋಯಿನಿಸ್ ಪಂದ್ಯ ಗೆದ್ದುಕೊಡುತ್ತಿದ್ದರು ಎಂದು ವೇಡ್ ವಿಶ್ವಾಸದಿಂದ ಹೇಳಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಮೂವರು ಕನ್ನಡಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts