More

    ಕಟಾವು ಯಂತ್ರ ಬಾಡಿಗೆ ದಿಢೀರ್ ಏರಿಕೆ

    ಉಡುಪಿ: ಕಾಡುಪ್ರಾಣಿ ಹಾವಳಿ, ಕೃಷಿ ಕೂಲಿ ಕಾರ್ಮಿಕರ ಕೊರತೆ ಮೊದಲಾದ ಸಮಸ್ಯೆಗಳಿಂದ ಹೈರಣಾದ ರೈತ ವರ್ಗಕ್ಕೆ ಇದೀಗ ತೈಲ ಬೆಲೆ ಏರಿಕೆ ಬಿಸಿಮುಟ್ಟಿದೆ. ಹಿಂಗಾರು ಸಲು ಕಟಾವಿಗೆ ಕಟಾವು ಯಂತ್ರಗಳು ಗಂಟೆಯ ಬಾಡಿಗೆ ದಿಢೀರ್ ಏರಿಕೆಯಾಗಿದೆ. ಇದರಿಂದ ಬಡ ರೈತಾಪಿ ವರ್ಗ ಆತಂಕಗೊಂಡಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ಕಟಾವು ಮಾಡಿಸುತ್ತಿದ್ದಾರೆ.

    ಕಾರ್ಕಳ, ಕುಂದಾಪುರ ಬ್ರಹ್ಮಾವರ ಮೊದಲಾದ ಭಾಗದಲ್ಲಿ ಹಿಂಗಾರು ಸಲು ಕಟಾವಿಗೆ ಬಂದಿದ್ದು, ಬ್ರಹ್ಮಾವರ, ಕೊಕ್ಕರ್ಣೆ, ಬಿಲ್ಲಾಡಿ, ಅಮಾಸೆಬೈಲು, ಹಾಲಾಡಿ, ಕಕ್ಕುಂಜೆ, ಶಿರಿಯಾರ, ಕೊರ್ಗಿ, ಬಾರ್ಕೂರು, ಆರಾಡಿ, ಮಣಿಕಲ್ಲು, ನೈಲಾಡಿ, ಕೋಟ, ಜನ್ನಾಡಿ, ಸಿದ್ಧಾಪುರ ಸೇರಿದಂತೆ ವರಾಹಿ ನದಿ ಆಶ್ರಯ ಪಡೆದ ಕೃಷಿ ಭೂಮಿಗಳಲ್ಲಿ ಕಟಾವಿನ ಪೈಪೋಟಿ ಶುರುವಾಗಿದೆ. ಕೆಲ ವರ್ಷಗಳಿಂದ ಯಂತ್ರದ ಬಾಡಿಗೆ ದರ ಏಕಾಏಕಿ ಏರಿಕೆಯಾಗುತ್ತಿದೆ. ದರ ನಿಯಂತ್ರಣ ನಿಯಮ ವ್ಯವಸ್ಥಿತವಾಗಿ ಪಾಲನೆಯಾಗುತ್ತಿಲ್ಲ. ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹ. ಇಲಾಖೆ ನಿಯಮದಂತೆ 2000 ರೂ.ಗೆ ದರ ನಿಗದಿ ಮಾಡಬೇಕೆಂಬ ಸೂಚನೆ ಇದೆ. ಜಿಲ್ಲೆಯಲ್ಲಿ ಯಂತ್ರದ ಅಭಾವವು ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

    ಗಂಟೆಗೆ 300 ರೂ.ಹೆಚ್ಚಳ
    ತೈಲ ಬೆಲೆ ಏರಿಕೆ ಪರಿಣಾಮ ಕಟಾವು ಯಂತ್ರಗಳು ಗಂಟೆಯ ಬಾಡಿಗೆ ದರವನ್ನು ದಿಢೀರ್ ಹೆಚ್ಚಳ ಮಾಡಲಾಗಿದೆ. ಕಳೆದ ಹಿಂಗಾರು ಹಾಗೂ ಮುಂಗಾರಿನಲ್ಲಿ 2200 ರೂ. ಬಾಡಿಗೆಯಲ್ಲಿ ಕಟಾವು ಮಾಡಿದ್ದ ಯಂತ್ರದ ಬಾಡಿಗೆ 2500 ರೂ.ಗೆ ಏರಿಸಲಾಗಿದೆ. ಪರಿಣಾಮ ರೈತರು ಹೆಚ್ಚುವರಿ ಹಣ ವ್ಯಯಿಸಬೇಕಾಗಿದೆ. ಜಿಲ್ಲೆಯ ಯಂತ್ರಧಾರ ಯೋಜನೆ ಅಡಿಯಲ್ಲಿ 8 ಕೃಷಿ ಯಂತ್ರಗಳಿವೆ. ಹೊರ ಜಿಲ್ಲೆಯ ಯಂತ್ರಗಳ ಅವಲಂಭನೆ ಅನಿವಾರ್ಯವಾಗಿದೆ. ಕೋವಿಡ್ ಲಾಕ್‌ಡೌನ್ ಬಳಿಕ ಕಾರ್ಮಿಕರ ಕೊರತೆ ಹೆಚ್ಚಾಗಿದೆ. ಇದರಿಂದ ಯಂತ್ರದ ಮಾಲೀಕರು ಹೇಳಿದ ದರವೇ ಅಂತಿಮವಾಗಿದೆ.

    ಫಸಲು ಕಡಿಮೆ
    ಹಿಂಗಾರು ಬೆಳೆಯಲ್ಲಿ ನಿರೀಕ್ಷಿತ ಫಸಲು ಸಿಗುವುದು ಕಡಿಮೆ. ಆದರೂ ಭೂಮಿ ಹಡಿಲು ಬೀಳಬಾರದೆಂಬ ಉದ್ದೇಶಕ್ಕೆ ಕೃಷಿ ಮಾಡುತ್ತೇವೆ. ಹಿಂಗಾರು ಕೃಷಿಗೆ ಖರ್ಚು, ರೋಗಬಾಧೆ ಜಾಸ್ತಿ ಇರುತ್ತದೆ. ಈ ಹಿಂಗಾರು ಕಟಾವಿನ ಸಮಯದಲ್ಲೇ ತೈಲ ಬೆಲೆ ಹೆಚ್ಚಳವಾಗಿದೆ. ಇದರ ಹೊಡೆತ ರೈತರಿಗೂ ತಟ್ಟಿದೆ. ಕಟಾವು ಯಂತ್ರ ಮಾಲೀಕರು ಪ್ರತಿ ಗಂಟೆಗೆ 300 ರೂ. ನಂತೆ ಬಾಡಿಗೆ ಹೆಚ್ಚಿಸಿದ್ದಾರೆ ಎನ್ನುತ್ತಾರೆ ಭತ್ತ ಕೃಷಿಕರು.

    ತೈಲ ಬೆಲೆ ಏರಿಕೆ ಪರಿಣಾಮ ಕಟಾವು ಯಂತ್ರಗಳು ಗಂಟೆಗಳ ಆಧಾರದಲ್ಲಿ ತಮ್ಮ ದರಗಳನ್ನು ಏರಿಸಿವೆ. ರೈತರ ಅನಾರೋಗ್ಯಕರ ಪೈಪೋಟಿಯೂ ದರ ಏರಿಕೆಗೆ ಕಾರಣವಾಗಿದೆ. ಬೇಗ ಮುಗಿಯಬೇಕು ಎಂಬ ಕಾರಣದಿಂದ ಹೆಚ್ಚು ದರ ನೀಡಿ ಕಟಾವು ಮಾಡಿಸಿಕೊಳ್ಳುವುದರಿಂದ ಯಂತ್ರದ ಮಾಲೀಕರು ಉಳಿದ ರೈತರಿಗೂ ಅಷ್ಟೇ ಪ್ರಮಾಣದಲ್ಲಿ ದರ ವಿಧಿಸುತ್ತಿದ್ದಾರೆ. ರೈತ ಸಂಘಟನೆ ನಾಯಕರು, ಇಲಾಖೆ ಅಧಿಕಾರಿಗಳು, ಯಂತ್ರದ ಮಾಲೀಕರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಹೆಚ್ಚು ದರ ವಿಧಿಸದಂತೆ ಕ್ರಮಕೈಗೊಳ್ಳಬೇಕಿದೆ.
    -ರವೀಂದ್ರ ಗುಜ್ಜರಬೆಟ್ಟು, ಕಾರ್ಯದರ್ಶಿ, ಉಡುಪಿ ಜಿಲ್ಲಾ ಕೃಷಿಕ ಸಂಘ

    ನಮ್ಮ ಯಂತ್ರಧಾರ ಯೋಜನೆ ಅಡಿಯಲ್ಲಿ 8 ಕೃಷಿ ಯಂತ್ರಗಳು ಇಲಾಖೆಯಲ್ಲಿದ್ದು, ಕೃಷಿ ಕಟಾವು ಕಾರ್ಯಕ್ಕೆ ಬಳಕೆಯಾಗುತ್ತಿದೆ. ಕಟಾವು ಯಂತ್ರಗಳು ಹೆಚ್ಚುವರಿ ದರ ವಿಧಿಸಿರುವ ಬಗ್ಗೆ ರೈತರಿಂದ ಇದೂವರೆಗೆ ದೂರು ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.
    ಕೆಂಪೇಗೌಡ, ಜಂಟಿ ನಿರ್ದೇಶಕ. ಕೃಷಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts