More

    ಕೃಷಿ ಭೂಮಿಯಲ್ಲಿ ಇಟ್ಟಿಗೆ ತಯಾರಿ

    ಹರಪನಹಳ್ಳಿ: ತಾಲೂಕಿನ ಬಾಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೃಂಗಾರತೋಟ ಗ್ರಾಮಕ್ಕೆ ಹೊಂದಿಕೊಂಡಿರುವ ಇಟ್ಟಿಗೆ ಭಟ್ಟಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಗ್ರಾಮದ ಎಂ.ಪ್ರಭು ಎಂಬುವರು ಭೂ ಪರಿವರ್ತನೆ ಮಾಡಿಕೊಳ್ಳದೆ ಕೃಷಿ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಇಟ್ಟಿಗೆ ಭಟ್ಟಿ ನಡೆಸುತ್ತಿದ್ದು, ಇದರಿಂದ ಪರಿಸರ ಮಾಲಿನ್ಯಕ್ಕೆ ಹಾನಿ ಉಂಟಾಗುತ್ತಿರುವ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ಈ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಧರಣೇಶ ಮಾತನಾಡಿ, ಇಟ್ಟಿಗೆ ತಯಾರಕರು ಮಣ್ಣಿಗೆ ಪರವಾನಿಗೆ ಪಡೆದಿಲ್ಲವೆಂಬ ದೂರಿದೆ. ಈ ಬಗ್ಗೆ ಕೂಲಕಷವಾಗಿ ಪರಿಶೀಲನೆ ಮಾಡಲಾಗುವುದು. ಒಂದು ವೇಳೆ ದೂರುದಾರರು ಸಲ್ಲಿಸಿರುವ ದಾಖಲೆಗಳ ಪ್ರಕಾರ ನಿಜಾಂಶ ಕಂಡು ಬಂದರೆ ಇಟ್ಟಿಗೆ ತಯಾರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

    ಸರ್ಕಾರದ ಅನುಮತಿ ಮೇರಿಗೆ ತಾಲೂಕಿನ ಮೂರು ಕಡೆ ಮರಳು ಪಾಯಿಂಟ್‌ಗಳಿದ್ದು, ಗಜಾಪುರ ಬಳಿಯ ಪಾಯಿಂಟ್‌ನಲ್ಲಿ ನೀರಿನಿಂದ ಮರಳನ್ನು ಸೋಸಿ ಮಾರಾಟ ಮಾಡುತ್ತಿದ್ದಾರೆಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿಸಿದವರಿಗೆ ನೋಟಿಸ್ ನೀಡಿರುವುದಾಗಿ ತಿಳಿಸಿದರು.

    ದೂರುದಾರ ಎಂ.ಪ್ರಭು ಮಾತನಾಡಿ, ಯಾವುದೇ ಅನುಮತಿ ಇಲ್ಲದೆ ಇಟ್ಟಿಗೆ ಭಟ್ಟಿ ನಡೆಸಲಾಗುತ್ತಿದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಇಲಾಖೆಯ ಮಂಜುನಾಥ, ಇಂಜಿನಿಯರ್ ಅಶೋಕ, ಗ್ರಾಮ ಲೆಕ್ಕಾಧಿಕಾರಿ ಶಶಿಕುಮಾರ, ಕೆ.ರಮೇಶ್, ಜಿ.ಹನುಮಂತಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts