More

    ಬೆಂಕಿ ಅವಘಡ ತಪ್ಪಿಸಲು ಅಗ್ನಿಶಾಮಕ ಕೇಂದ್ರವಿಲ್ಲ: ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳ ಶೋಚನೀಯ ಸ್ಥಿತಿ

    ರಾಮನಗರ: ವಿಶ್ವ ಭೂಪಟದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ಹಾರೋಹಳ್ಳಿ ಮತ್ತು ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಹೋರಾಟ ಮಾಡಲು ಅಗ್ನಿಶಾಮಕ ದಳವೇ ಇಲ್ಲ ಎನ್ನುವ ಆತಂಕಕಾರಿ ವಿಷಯ ಬಹಿರಂಗಗೊಂಡಿದೆ.

    ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಬ್ಯಾಟರಿ ತಯಾರಿಕೆ ಕಂಪನಿಯಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡು ಕೋಟ್ಯಂತರ ರೂ. ನಷ್ಟ ಸಂಭವಿಸಿತ್ತು. ಆದರೆ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ ಸಂಗತಿಯಾಗಿದೆ.

    ಎರಡೂ ಪ್ರದೇಶಗಳು ಅಗ್ನಿಶಾಮಕ ಕೇಂದ್ರಗಳಿಂದ ಸಾಕಷ್ಟು ದೂರದಲ್ಲಿವೆ. ಬಿಡದಿಯಲ್ಲಿ ಟೊಯೋಟಾ ಮತ್ತು ಬಾಷ್ ಕಂಪನಿಗಳು ಸುರಕ್ಷತೆಗಾಗಿ ಇಟ್ಟುಕೊಂಡಿರುವ ಅಗ್ನಿಶಾಮಕ ಘಟಕಗಳನ್ನು ಹೊರತುಪಡಿಸಿ ಉಳಿದ ಕಾರ್ಖಾನೆಗಳಿಗೆ ಅಗ್ನಿಶಾಮಕ ವ್ಯವಸ್ಥೆ ಇಲ್ಲ. ಇಲ್ಲಿ ಅವಘಡ ಸಂಭವಿಸಿದರೂ ಹತೋಟಿಗೆ ತರಲು ರಾಮನಗರದಲ್ಲಿರುವ ಅಗ್ನಿಶಾಮಕ ಘಟಕವನ್ನೇ ಅವಲಂಬಿಸಬೇಕು. ಇನ್ನು ಹಾರೋಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶ ಸಂಪೂರ್ಣವಾಗಿ ಕನಕಪುರದ ಮೇಲೆಯೇ ಅವಲಂಬಿತವಾಗಿದೆ. ಒಂದು ವೇಳೆ ಯಾವುದೇ ಕಾರ್ಖಾನೆಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದರೂ ತಕ್ಷಣಕ್ಕೆ ಸ್ಪಂದನೆ ಸಾಧ್ಯವಾಗದಿದ್ದರೆ, ಬೆಂಕಿ ಕೆನ್ನಾಲಿಗೆ ಇಡೀ ಕೈಗಾರಿಕಾ ಪ್ರದೇಶವನ್ನೇ ಆಹುತಿ ತೆಗೆದುಕೊಳ್ಳುತ್ತದೆ.

    ಬಿಡದಿಯು ಬೃಹತ್ ಕೈಗಾರಿಕೆಗಳ ಪ್ರದೇಶವಾಗಿದ್ದು, ಇಲ್ಲಿ ಬ್ರಿಟಾನಿಯಾ, ಕೊಕಾಕೋಲಾದಂತಹ ಆಹಾರ ಉತ್ಪನ್ನ ಸಂಸ್ಥೆಗಳು, ಟೊಯೋಟಾದಂತಹ ಬೃಹತ್ ವಾಹನ ಉತ್ಪಾದನಾ ಸಂಸ್ಥೆ, ಬಾಷ್‌ನಂತಹ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 180 ಕಂಪನಿಗಳು ಇದ್ದು, 30 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇದ್ದಾರೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 240 ಕಂಪನಿಗಳು ಇದ್ದು, ಇವುಗಳು ಬಹುತೇಕ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಹೊಂದಿವೆ. ಇಲ್ಲಿ ಗೃಹೋಪಯೋಗಿ ವಸ್ತುಗಳು, ಪೇಪರ್‌ನಂತಹ ಉತ್ಪಾದನಾ ಘಟಕಗಳು ಹೆಚ್ಚಿದ್ದು, ಈ ಕೈಗಾರಿಕಾ ಪ್ರದೇಶದಲ್ಲಿ 30 ಸಾವಿರ ಕಾರ್ಮಿಕರಿದ್ದಾರೆ.

    ಕೇಳೋರೇ ಇಲ್ಲ: ಬಿಡದಿಯಲ್ಲಿ ಒಂದು ಕಥೆಯಾದರೆ ಹಾರೋಹಳ್ಳಿ ವ್ಯವಸ್ಥೆಯೇ ಬೇರೆ ಇದೆ. ಇಲ್ಲಿ ಯಾವುದೇ ಅವಘಡ ನಡೆದರೂ ಕನಕಪುರ ಅಗ್ನಿಶಾಮಕ ಘಟಕದ ಮೇಲೆಯೇ ಅವಲಂಬಿತವಾಗಬೇಕು. ಇಲ್ಲಿಯೂ ಘಟಕ ಸ್ಥಾಪಿಸಿ ಎಂದು ಕೈಗಾರಿಕೋದ್ಯಮಿಗಳ ಸಂಘ ಜಿಲ್ಲಾಧಿಕಾರಿ ಸೇರಿ ಹಲವರಿಗೆ ಮನವಿ ಮಾಡಿದ್ದರೂ ಕಾರ್ಯಗತಗೊಂಡಿಲ್ಲ. 3ನೇ ಹಂತದ ಕೈಗಾರಿಕೆ ಪ್ರದೇಶದಲ್ಲಿ ಜಾಗ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಲಾಗಿದೆಯಾದರೂ 3ನೇ ಹಂತದ ಪ್ರದೇಶ ಕಾರ್ಯಾಚರಣೆಗೆ ಇಳಿಯಲು ಸಾಕಷ್ಟು ವರ್ಷಗಳು ಬೇಕಿವೆ.
    ಸರ್ಕಾರ ಗಮನಿಸಲಿ: ಕೈಗಾರಿಕಾ ಪ್ರದೇಶದಲ್ಲಿ ನಡೆಯುವ ಬೆಂಕಿ ಆಕಸ್ಮಿಕ ತಡೆಯಲು ಅಗ್ನಿಶಾಮಕ ಘಟಕದ ಅಗತ್ಯ ತೀವ್ರವಾಗಿದೆ. ಘಟಕ ಸ್ಥಾಪನೆ ಮಾಡುವುದರಿಂದ ಕಾರ್ಖಾನೆಗಳಿಗೆ ಮಾತ್ರವೇ ಅಲ್ಲದೆ, ಅಕ್ಕಪಕ್ಕದ ಗ್ರಾಮಗಳಿಗೂ ಅನುಕೂಲವಾಗಲಿದೆ. ಜತೆಗೆ ಹಾರೋಹಳ್ಳಿ ಹೊಸ ತಾಲೂಕಿಗೂ ಇದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿ, ಕಾರ್ಯರೂಪಕ್ಕೆ ತರಬೇಕಿದೆ.

    ಮನವಿಗೆ ಸ್ಪಂದಿಸಿ: ಬಿಡದಿ ಕೈಗಾರಿಕೆಗಳ ಸಂಘವು ಬಿಡದಿಯಲ್ಲಿ ಅಗ್ನಿಶಾಮಕ ಘಟಕ ಸ್ಥಾಪಿಸಲು ಬೇಕಾದ ಸ್ಥಳ ಮಂಜೂರು ಮಾಡಿಕೊಡುವಂತೆ ಒಂದು ವರ್ಷದ ಹಿಂದೆಯೇ ಕೇಳಿಕೊಂಡಿದೆ. ಕೈಗಾರಿಕೆ ಪ್ರದೇಶದ ಸಿಎ ನಿವೇಶನ ಮಂಜೂರು ಮಾಡಿಕೊಟ್ಟರೆ ಇದಕ್ಕೆ ಬೇಕಾದ ಕಟ್ಟದ ವ್ಯವಸ್ಥೆಯಿಂದ ಅಗತ್ಯ ಎಲ್ಲ ನೆರವು ನೀಡುವುದಾಗಿ ಭವರಸೆಯನ್ನು ಸಂಘ ನೀಡಿದೆ. ಜಾಗ ನೀಡುವುದಾಗಿ ಕೆಐಎಡಿಬಿ ಭರವಸೆ ನೀಡಿದೆಯಾದರೂ ಇನ್ನೂ ಕಾರ್ಯಗತಗೊಂಡಿಲ್ಲ. ಜಾರಿಯಾದರೆ ಬಿಡದಿಯಲ್ಲಿ ಒಂದು ಅಗ್ನಿಶಾಮಕ ಕೇಂದ್ರ ತಲೆ ಎತ್ತಲಿದೆ.

    ಬಿಡದಿ ಕೈಗಾರಿಕೆ ಪ್ರದೇಶದಲ್ಲಿ ಅಗ್ನಿಶಾಮಕ ಘಟಕ ಸ್ಥಾಪನೆ ಸಂಬಂಧ ಈಗಾಗಲೇ ಕೆಐಎಡಿಬಿಗೆ ಮನವಿ ಮಾಡಲಾಗಿದೆ. ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.
    ರಾಜೇಂದ್ರ ಹೆಗ್ಗಡೆ ಅಧ್ಯಕ್ಷ, ಬಿಡದಿ ಕೈಗಾರಿಕೆಗಳ ಸಂಘ

    ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾಗಿ ರಾಸಾಯನಿಕ ಕಾರ್ಖಾನೆಗಳಿವೆ. ಇಲ್ಲಿಗೆ ಅಗ್ನಿಶಾಮಕ ಘಟಕ ಸ್ಥಾಪನೆ ಮಾಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಯಾವುದೇ ಅವಘಡ ನಡೆದರೂ ದೂರದ ಊರಿನಿಂದ ಅಗ್ನಿಶಾಮಕ ಸಿಬ್ಬಂದಿ ಬರುವವರೆಗೂ ಕಾಯಬೇಕು.
    ಕೆ.ನಾಗರಾಜು, ಕಾರ್ಯದರ್ಶಿ, ಹಾರೋಹಳ್ಳಿ ಕೈಗಾರಿಕೆಗಳ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts