More

    ದೇಶಭಕ್ತಿ ಗೀತೆ ಸ್ಪರ್ಧೆಗೆ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಗರಿ

    ಬೆಳ್ತಂಗಡಿ: ತಾಲೂಕಿನ ಜನರಿಗಾಗಿ ಆಯೋಜಿಸಿದ ಆನ್‌ಲೈನ್ ದೇಶಭಕ್ತಿ ಗೀತೆ ಸ್ಪರ್ಧೆಗೆ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಪ್ರಶಸ್ತಿ ಲಭಿಸಿದೆ.

    ಭಾನುವಾರ ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜ ಅವರಿಗೆ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್‌ನ ಏಷ್ಯಾ ಮುಖ್ಯಸ್ಥ ಡಾ.ಮನೀಶ್ ವೈಷ್ಣವಿ ಪ್ರಶಸ್ತಿ ಪತ್ರ ಹಸ್ತಾಂತರಿಸಿದರು.

    ಬಳಿಕ ಮಾತನಾಡಿದ ಡಾ.ಮನೀಶ್ ವೈಷ್ಣವಿ, ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್‌ನ ಎಲ್ಲ ಷರತ್ತು, ನಿಯಮಗಳಿಗನುಸಾರವಾಗಿ ಕಾರ್ಯಕ್ರಮ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಅತಿ ದೊಡ್ಡ ದೇಶಭಕ್ತಿ ಗಾಯನ ಸ್ಪರ್ಧೆ ಆಗಿರುವುದು ಹೆಮ್ಮೆಯ ವಿಚಾರ. ಶಾಸಕ ಹರೀಶ್ ಪೂಂಜ ತನ್ನ ಹೆಸರನ್ನು ಪ್ರಚಾರಪಡಿಸದೇ ಸಾರ್ವಜನಿಕ ಹೆಸರಲ್ಲಿ ಸ್ಪರ್ಧೆ ನಡೆಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. 3000ಕ್ಕೂ ಹೆಚ್ಚು ವಿಡಿಯೋಗಳು ಬಂದಿರುವುದರಿಂದ ನಮ್ಮ ಗುರಿ ಸಾಧಿಸಿದಂತಾಗಿದೆ ಎಂದರು.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, 75ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಆನ್‌ಲೈನ್ ದೇಶಭಕ್ತಿ ಗೀತೆ ಸ್ಪರ್ಧೆಗೆ ತಾಲೂಕಿನ ಜನರ ಸಹಿತ ರಾಜ್ಯ, ಹೊರ ರಾಜ್ಯದಿಂದ ಹಾಗೂ ವಿದೇಶದಿಂದ ಸ್ಪಂದನೆ ಸಿಕ್ಕಿದೆ. ಇದಕ್ಕಾಗಿ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಪ್ರಶಸ್ತಿ ಲಭಿಸಿದ್ದು, ತಾಲೂಕಿನ ಮಹಾಜನತೆಗೆ ಸಿಕ್ಕಿದ ಗೌರವ. ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರಿಗೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ ಎಂದರು.ಕಾರ್ಯಕ್ರಮದ ಸಂಯೋಜಕ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿದರು. ಅನೀಶ್ ವೇಣೂರು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts